ADVERTISEMENT

ಮಳೆ ಹಾನಿ ನಿರ್ವಹಣೆ ರಾಜ್ಯ ಸರ್ಕಾರ ವಿಫಲ: ಖಾದರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 10:44 IST
Last Updated 6 ಆಗಸ್ಟ್ 2022, 10:44 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮಂಗಳೂರು: 'ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಇತರ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಉಂಟಾಗಿರುವ ವಿಕೋಪಗಳ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ನಿರ್ಮಾಣವಾಗಿರುವ ದುಃಸ್ಥಿತಿ ನಿಭಾಯಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ಹೆಚ್ಚುವರಿ ಅನುದಾನ ಪಡೆಯುವಲ್ಲೂ ರಾಜ್ಯ ಸರ್ಕಾರ ವೈಫಲ್ಯ ಕಂಡಿದೆ’ ಎಂದು ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌ ಆರೋಪಿಸಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳೆಯಿಂದ ಸುಳ್ಯ ತಾಲ್ಲೂಕಿನ ಸಂಪಾಜೆ, ಕಲ್ಲುಗುಂಡಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿ ಉಂಟಾಗಿದೆ. ಮನೆಗಳು ಕುಸಿದಿವೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್‌ ಅವರು ಇಂತಹ ಪ್ರಾಕೃತಿಕ ವಿಕೋಪಗಳ ನಿರ್ವಹಣೆ ಕುರಿತು ಚರ್ಚಿಸಲು ಯಾವುದೇ ಪೂರ್ವಭಾವಿ ಸಭೆ ಹಮ್ಮಿಕೊಂಡಿಲ್ಲ’ ಎಂದು ಆರೋಪಿಸಿದರು.

‘ಎನ್‌ಡಿಆರ್‌ಎಫ್‌ ಮುಖ್ಯಸ್ಥರಾಗಿರುವ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಬೆಂಗಳೂರಿಗೆ ಭೇಟಿ ನೀಡಿದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ಬಿಜೆಪಿಯ ಶಾಸಕರು ಹೆಚ್ಚುವರಿ ಅನುದಾನಕ್ಕೆ ಬೇಡಿಕೆಯನ್ನೇ ಇಟ್ಟಿಲ್ಲ. ಅಮಿತ್ ಶಾ ಅವರ ಭೇಟಿ ಬಿಜೆಪಿ ಬಲವರ್ಧನೆ ಕುರಿತ ಚರ್ಚೆಗಷ್ಟೇ ಸೀಮಿತವಾಯಿತು. ಪ್ರಾಕೃತಿಕ ವಿಕೋಪದಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಟೀಕಿಸಿದರು.

ADVERTISEMENT

ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅನುದಾನವನ್ನು ಪಡೆಯಲು ಮುಖ್ಯಮಂತ್ರಿಯವರಿಗೆ ಮುಜುಗರವಾಗುತ್ತದೆ ಎಂದಾದರೆ ಅವರು ಸರ್ವಪಕ್ಷಗಳ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿಗೆ ಕರೆದೊಯ್ಯಲಿ ಎಂದು ಅವರು ಸಲಹೆ ನೀಡಿದರು.

‘ಸುಳ್ಯ ತಾಲ್ಲೂಕಿನ ಮಳೆ ಸಂತ್ರಸ್ತ ಪ್ರದೇಶಗಳಲ್ಲಿ ಉಂಟಾಗಿರುವ ಹಾನಿಯನ್ನು ವಿಶ್ಲೇಷಿಸಲು ರಾಜ್ಯ ಸರ್ಕಾರವು ವಿಶೇಷ ತಂಡಗಳನ್ನು ಕಳುಹಿಸಬೇಕು. ಮಳೆಯಿಂದ ಉಂಟಾಗುವ ಇಂತಹ ವಿಕೋಪಗಳನ್ನು ತಡೆಯಲು ಏನು ಕ್ರಮಕೈಗೊಳ್ಳಬಹುದು ಎಂಬ ಕುರಿತು ತಜ್ಞರ ತಂಡವು ಶಿಫಾರಸುಗಳನ್ನು ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

‘ಕಡಲ್ಕೊರೆತ ಉಂಟಾದ ಉಳ್ಳಾಲ ಹಾಗೂ ಇತರ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌.ಅಶೋಕ, ಮೀನುಗಾರಿಕಾ ಸಚಿವ ಎಸ್‌.ಅಂಗಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್‌ ಅವರು ಭೇಟಿ ನೀಡಿದ್ದರು. ಕಡಲ್ಕೊರೆತ ತಡೆಯಲುಆ ಬಳಿಕವೂ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ರಾಜ್ಯ ಸರ್ಕಾರದ ಮೇಲೆ ಜನರು ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕಾಪಾಡುವುದಕ್ಕೆ ಹಾಗೂ ಸಮಾಜದಲ್ಲಿ ಉಂಟಾಗಿರುವ ಬಿಗುವಿನ ವಾತಾವರಣವನ್ನು ತಿಳಿಗೊಳಿಸುವ ಮಾರ್ಗೋಪಾಯದ ಕುರಿತು ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸಭೆಯನ್ನು ಕರೆಯಬೇಕು. ಅಹಿತಕರ ಘಟನೆ ತಡೆಯಲು ಜಿಲ್ಲಾಡಳಿತ ಕೈಗೊಳ್ಳುವ ಕ್ರಮಗಳು ಸಾರ್ವಜನಿಕರಿಗೆ ಅನನುಕೂಲ ಉಂಟುಮಾಡಬಾರದು’ ಎಂದರು.

‘ಹತ್ಯೆಗೊಳಗಾದ ಕಾಟಿಪಳ್ಳ ಮಂಗಳಪೇಟೆಯ ಫಾಝಿಲ್‌ ಹಾಗೂ ಬೆಳ್ಳಾರೆ ಕಳಂಜದ ಮಸೂದ್‌ ಅವರ ಮನೆಗಳಿಗೂ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ಪರಿಹಾರ ಘೋಷಣೆ ಮಾಡುವಾಗ ಸರ್ಕಾರ ತಾರತಮ್ಯ ಮಾಡಬಾರದಿತ್ತು’ ಎಂದರು.

ಕಾಂಗ್ರೆಸ್‌ ಮುಖಂಡರಾದ ಶಾಹುಲ್‌ ಹಮೀದ್‌, ಮಹಮ್ಮದ್‌ ಮೋನು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.