ADVERTISEMENT

ಸರ್ಕಾರದಿಂದ ಅಬ್ಬಕ್ಕನಿಗೆ ಅವಮಾನ: ಮಮತಾ ಗಟ್ಟಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 6:54 IST
Last Updated 8 ಫೆಬ್ರುವರಿ 2023, 6:54 IST
ಸುದ್ದಿಗೋಷ್ಠಿಯಲ್ಲಿ ಮಮತಾ ಗಟ್ಟಿ ಮಾತನಾಡಿದರು. ಅಪ್ಪಿ, ಚಂದ್ರಕಲಾ ಜೋಗಿ, ಸುರೇಖಾ ಚಂದ್ರಹಾಸ, ತನ್ವೀರ್ ಶಾಹಿದಾ ಹಾಗೂ ಶಾಂತಲಾ ಗಟ್ಟಿ ಇದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಮತಾ ಗಟ್ಟಿ ಮಾತನಾಡಿದರು. ಅಪ್ಪಿ, ಚಂದ್ರಕಲಾ ಜೋಗಿ, ಸುರೇಖಾ ಚಂದ್ರಹಾಸ, ತನ್ವೀರ್ ಶಾಹಿದಾ ಹಾಗೂ ಶಾಂತಲಾ ಗಟ್ಟಿ ಇದ್ದಾರೆ   

ಮಂಗಳೂರು: 'ಉಳ್ಳಾಲದ ರಾಣಿ ಅಬ್ಬಕ್ಕ ಉತ್ಸವಕ್ಕೆ ಅನುದಾನ ಕಡಿತಗೊಳಿಸುವ ಮೂಲಕ ಸರ್ಕಾರ ಮಹಿಳೆಯರಿಗೆ ಅವಮಾನ ಮಾಡಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಅಬ್ಬಕ್ಕ ಉತ್ಸವಕ್ಕೆ ಸರ್ಕಾರ ಹಲವು ವರ್ಷಗಳಿಂದ ₹ 50 ಲಕ್ಷ ಅನುದಾನ ಒದಗಿಸುತ್ತಿತ್ತು. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್‌ ಅವರೇ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರೂ ಈ ಬಾರಿ ಈ ಕಾರ್ಯಕ್ರಮಕ್ಕೆ ಅನುದಾನವನ್ನು ₹ 10 ಲಕ್ಷಕ್ಕೆ ಕಡಿತಗೊಳಿಸಲಾಗಿದೆ. ಈ ಬಗ್ಗೆ ಸುನಿಲ್‌ ಕುಮಾರ್‌ ಸ್ಪಷ್ಟನೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ಅಬ್ಬಕ್ಕ ಉತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವರಾದ ಶೋಭಾ ಕರಂದ್ಲಾಜೆ ಅವರು ಅಬ್ಬಕ್ಕ ಥೀಂ ಪಾರ್ಕ್ ಮಾಡುವುದಾಗಿ ಪ್ರಕಟಿಸಿದ್ದಾರೆ. ಇದು ಸ್ವಾಗತಾರ್ಹ. ಥೀಂ ಪಾರ್ಕ್‌ನಲ್ಲಿ ರಾಣಿ ಅಬ್ಬಕ್ಕ ಅವರ ಸಾಧನೆಯನ್ನು ಸಾರುವ ಗ್ರಂಥಾಲಯವನ್ನೂ ಸ್ಥಾಪಿಸಬೇಕು. ಇದು ಚುನಾವಣೆಗಾಗಿ ನೀಡಿದ ಹೇಳಿಕೆ ಆಗಬಾರದು. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅದಕ್ಕೆ ಅನುದಾನ ಕಾಯ್ದಿರಿಸಬೇಕು’ ಎಂದರು.

ADVERTISEMENT

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಆಗಿನ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಸಭಾಭವನ ನಿರ್ಮಾಣಕ್ಕೆ ₹ 8 ಕೋಟಿ ಅನುದಾನ ಹಂಚಿಕೆ ಮಾಡಿದ್ದರು. ಈ ಭವನವನ್ನು ಏಕೆ ನಿರ್ಮಿಸಿಲ್ಲ. ಅನುದಾನ ಇಲಾಖೆಯಲ್ಲೇ ಕೊಳೆಯುತ್ತಿರುವುದು ಏಕೆ ಎಂಬುದನ್ನೂ ಸರ್ಕಾರ ಸ್ಪಷ್ಟಪಡಿಸಲಿ’ ಎಂದರು.

ಪಕ್ಷದ ಮುಖಂಡರಾದ ಚಂದ್ರಕಲಾ ಜೋಗಿ, ಸುರೇಖಾ ಚಂದ್ರಹಾಸ, ಅಪ್ಪಿ, ಶಾಂತಲಾ ಗಟ್ಟಿ, ತನ್ವೀರ್ ಶಾಹಿದಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.