ADVERTISEMENT

ದಕ್ಷಿಣ ಕನ್ನಡ: ‘ಪರಂಪರೆಗೆ ಸಂದ ಶ್ರೇಷ್ಠ ಗೌರವ’

ಪೇಜಾವರ ಶ್ರೀಗಳಿಗೆ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 16:02 IST
Last Updated 11 ನವೆಂಬರ್ 2021, 16:02 IST
‘ಪದ್ಮವಿಭೂಷಣ’ ಪ್ರಶಸ್ತಿ ಸ್ವೀಕರಿಸಿದ ಬಂದ ಪೇಜಾವರ ಶ್ರೀಗಳನ್ನು ಮಂಗಳೂರಿನಲ್ಲಿ ಸ್ವಾಗತಿಸಲಾಯಿತು. ಹರಿಕೃಷ್ಣ ಪುನರೂರು, ಎಂ.ಬಿ. ಪುರಾಣಿಕ್, ಮಹಾಬಲೇಶ್ವರ ಎಂ.ಎಸ್, ಪ್ರದೀಪಕುಮಾರ್ ಕಲ್ಕೂರ್, ಪಿ. ಜಯರಾಮ ಭಟ್ ಇದ್ದರು.
‘ಪದ್ಮವಿಭೂಷಣ’ ಪ್ರಶಸ್ತಿ ಸ್ವೀಕರಿಸಿದ ಬಂದ ಪೇಜಾವರ ಶ್ರೀಗಳನ್ನು ಮಂಗಳೂರಿನಲ್ಲಿ ಸ್ವಾಗತಿಸಲಾಯಿತು. ಹರಿಕೃಷ್ಣ ಪುನರೂರು, ಎಂ.ಬಿ. ಪುರಾಣಿಕ್, ಮಹಾಬಲೇಶ್ವರ ಎಂ.ಎಸ್, ಪ್ರದೀಪಕುಮಾರ್ ಕಲ್ಕೂರ್, ಪಿ. ಜಯರಾಮ ಭಟ್ ಇದ್ದರು.   

ಮಂಗಳೂರು: ವಿಶ್ವೇಶತೀರ್ಥ ಸ್ವಾಮೀಜಿಗೆ ನಿರ್ಯಾಣೋತ್ತರವಾಗಿ ನೀಡಿದ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಗುರುಗಳ ಪರವಾಗಿ ಸ್ವೀಕರಿಸಿ ಮಂಗಳೂರಿಗೆ ಆಗಮಿಸಿದ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದಲ್ಲಿ ಸ್ವಾಗತಿಸಲಾಯಿತು.

ಬೆಂಗಳೂರಿನಿಂದ ವಿಮಾನದ ಮೂಲಕ ಬಜ್ಪೆಗೆ ಬಂದ ಶ್ರೀಗಳನ್ನು ಶಿವಳ್ಳಿ ಸ್ಪಂದನಾ ಹಾಗೂ ಕಾಸರಗೋಡು ಗಡಿನಾಡ ಸಾಂಸ್ಕೃತಿಕ ವೇದಿಕೆಯ ಬಂಧುಗಳು ಮೆರವಣಿಗೆಯಲ್ಲಿ ಮಂಗಳೂರಿಗೆ ಕರೆತಂದರು. ಕದ್ರಿ ಕಂಬಳದಿಂದ ನವನೀತ ಶೆಟ್ಟಿ ಕದ್ರಿ ನೇತೃತ್ವದಲ್ಲಿ ವಾದ್ಯಘೋಷಗಳೊಂದಿಗೆ ಮೆರವಣಿಗೆಯ ಮೂಲಕ ‘ಮಂಜುಪ್ರಸಾದ’ದ ವಾದಿರಾಜ ಮಂಟಪದ ‘ವಿಶ್ವೇಶತೀರ್ಥ ವೇದಿಕೆ’ಗೆ ಬರಮಾಡಿಕೊಳ್ಳಲಾಯಿತು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ದಂಪತಿ, ಸಾರ್ವಜನಿಕರು ಶ್ರೀಗಳನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅವರು, ‘ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿರುವುದು ಯತಿ ಪರಂಪರೆಗೆ ಸಂದ ಶ್ರೇಷ್ಠ ಗೌರವ’ ಎಂದರು.

ADVERTISEMENT

ವಿಶ್ವ ಹಿಂದೂ ಪರಿಷತ್‌ ಘಟಕದ ಅಧ್ಯಕ್ಷ ಎಂ.ಬಿ. ಪುರಾಣಿಕ್ ಶುಭ ಹಾರೈಸಿದರು.

ಪೇಜಾವರ ಶ್ರೀಗಳು ಮಾತನಾಡಿ, ‘ಸಾಮಾನ್ಯವಾಗಿ ಕಲೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ ಹೀಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಲ್ಲುತ್ತಿದ್ದ ರಾಷ್ಟ್ರದ ಅತ್ಯುನ್ನತ್ತ ಪ್ರಶಸ್ತಿಯಾದ ‘ಪದ್ಮ ವಿಭೂಷಣ’ವು ವಿಶ್ವೇಶತೀರ್ಥ ಶ್ರೀಪಾದರ ವ್ಯಕ್ತಿತ್ವ, ಗುಣನಡತೆ ಹಾಗೂ ಶ್ರೇಷ್ಠತೆಗೆ ಸಂದ ಗೌರವವಾಗಿದೆ’ ಎಂದರು.

ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ ಪಿ. ಜಯರಾಮ ಭಟ್, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ‘ಯುಗಪುರುಷ’ ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಪ್ರಭಾಕರ ರಾವ್ ಪೇಜಾವರ, ತಾರಾನಾಥ ಹೊಳ್ಳ, ಪೂರ್ಣಿಮಾ ರಾವ್ ಪೇಜಾವರ, ರಾಮಕೃಷ್ಣ ಭಟ್ ಕದ್ರಿ, ಸುಧಾಕರ ರಾವ್ ಪೇಜಾವರ, ಆರ್.ಡಿ. ಶಾಸ್ತ್ರಿ, ಗುಜರಾತಿ ಸಮುದಾಯದ ಪಂಕಜ್ ವಸಾನಿ, ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.