ADVERTISEMENT

ಕುಡುಪು | ಬಿಜೆಪಿಯವರ ಪ್ರಚೋದನೆಯಿಂದ ಹಲ್ಲೆ: ಕಾಂಗ್ರೆಸ್‌ನ ಹರೀಶ್‌ ಕುಮಾರ್ ಆರೋಪ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 13:16 IST
Last Updated 30 ಏಪ್ರಿಲ್ 2025, 13:16 IST
<div class="paragraphs"><p>ಮಂಗಳೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ&nbsp;ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್ ಕೆ. ಮಾತನಾಡಿದರು</p></div>

ಮಂಗಳೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್ ಕೆ. ಮಾತನಾಡಿದರು

   

ಪ್ರಜಾವಾಣಿ ಚಿತ್ರ

ಮಂಗಳೂರು: ಬಿಜೆಪಿಯವರ ಪ್ರಚೋದನೆಯಿಂದಾಗಿ ಜಿಲ್ಲೆಯಲ್ಲಿ ಯುವಜನರು ತಪ್ಪುದಾರಿ ತುಳಿಯುತ್ತಿದ್ದಾರೆ. ಕುಡುಪುವಿನಲ್ಲಿ ನಡೆದ ಗುಂಪು ಹಲ್ಲೆಯಿಂದ ಯುವಕ ಮೃತ ಪಟ್ಟಿರುವ ಪ್ರಕರಣವೂ ಬಿಜೆಪಿ ಕಾರ್ಯಕರ್ತನ ಪ್ರಚೋದನೆಯಿಂದಲೇ ನಡೆದಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್ ಕೆ. ಆರೋಪಿಸಿದರು.

ADVERTISEMENT

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದುಳಿದ ವರ್ಗದ ಯುವಕರನ್ನು ಪ್ರಚೋದಿಸುವ ಕೆಲಸ ಈ ಹಿಂದಿನಿಂದಲೂ ಬಿಜೆಪಿಯಿಂದ ನಡೆಯುತ್ತಿದೆ. ಅವರಿಗೆ ತರಬೇತಿ ಬಜರಂಗದಳ ಮತ್ತಿತರ ವ್ಯವಸ್ಥೆ ಅಡಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಪರಿಣಾಮವಾಗಿ ಹಲವಾರು ಯುವಕರು ಈಗಲೂ ಜೈಲಿನಲ್ಲಿದ್ದಾರೆ, ಕಾನೂನು ಕುಣಿಕೆಯಲ್ಲಿ ಸಿಲುಕಿಕೊಂಡು, ಜೀವನ ಹಾಳು ಮಾಡಿಕೊಂಡಿದ್ದಾರೆ. ಅವರನ್ನೇ ಅವಲಂಬಿಸಿರುವ ಕುಟುಂಬಗಳು ಕಷ್ಟಕ್ಕೆ ಸಿಲುಕಿವೆ. ಬಿಜೆಪಿಯ ಈ ನಡೆ ಅಕ್ಷಮ್ಯ’ ಎಂದರು.

‘ಅಶ್ರಫ್ ಎಂಬ ಯುವಕನ ಮೇಲೆ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಪ್ರಕರಣಕ್ಕೂ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗೂ ವ್ಯತ್ಯಾಸ ಇಲ್ಲ. ಈ ರೀತಿ ಅಮಾನುಷವಾಗಿ ಹತ್ಯೆ ನಡೆಸಿರುವವರೂ ಭಯೋತ್ಪಾದಕರೇ’ ಎಂದು ಹೇಳಿದರು.

ಜಿಲ್ಲೆಯ ಉದ್ಯಮವು ವಲಸೆ ಕಾರ್ಮಿಕರಿಂದ ಅವಲಂಬಿತವಾಗಿದೆ. ಈ ಜಿಲ್ಲೆಯಲ್ಲಿ ಪದೇ ಪದೇ ಶಾಂತಿ ಕಡದುವ ಕೆಲಸ ಆಗುತ್ತಿದೆ ಎಂದರು.

‘ಯುವಕನ ಮೇಲೆ ಗುಂಪು ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯ ವೈಫಲ್ಯವೂ ಇದೆ. ತಳಹಂತದ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ತಪ್ಪು ಮಾಹಿತಿ ನೀಡಿರುವ ಸ್ಥಳೀಯ ಇನ್‌ಸ್ಪೆಕ್ಟರ್ ಅನ್ನು ಅಮಾನತುಗೊಳಿಸಬೇಕು ಎಂದು ಗೃಹ ಸಚಿವರಿಗೆ ಕಾಂಗ್ರೆಸ್‌ ವತಿಯಿಂದ ಪತ್ರ ಬರೆಯಲಾಗಿದೆ. ಮೃತ ಯುವಕನ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಲಾಗುವುದು’ ಎಂದು ಹೇಳಿದರು.

ಪಾಕಿಸ್ತಾನ ಪರ ಘೋಷಣೆ ಕೂಗಿದ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ನಡೆದಿದೆ ಎಂಬ ಗೃಹ ಸಚಿವರು ನೀಡಿದ್ದಾರೆ ಎನ್ನಲಾದ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆ ಉತ್ತರಿಸಲು ತಡಕಾಡಿದ ಹರೀಶ್‌ಕುಮಾರ್, ಈ ಬಗ್ಗೆ ಗೃಹಸಚಿವರು ಬುಧವಾರ ಸ್ಪಷ್ಟನೆ ನೀಡಿದ್ದಾರೆ ಎಂದರು.

ಗುಂಪು ಹಲ್ಲೆಯಂತಹ ಗಂಭೀರ ಅಪರಾಧ ನಡೆದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಇನ್ನೂ ಭೇಟಿ ನೀಡಿಲ್ಲ ಯಾಕೆ ಎಂಬ ಪ್ರಶ್ನೆಗೆ, ಮತ್ತೆ ತಡವರಿಸಿದ ಅವರು, ‘ಘಟನೆ ನಡೆದಿದೆ, ಅವರು ಘಟನೆಯನ್ನು ಖಂಡಿಸಿದ್ದಾರೆ, ಮೇ 3ಕ್ಕೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ’ ಎಂದರು.

ಪಕ್ಷದ ಪ್ರಮುಖರಾದ ಪ್ರಕಾಶ್ ಸಾಲ್ಯಾನ್, ಶುಭೋದಯ ಆಳ್ವ, ಸಾಹುಲ್ ಹಮೀದ್, ಲಾರೆನ್ಸ್, ವಿಶ್ವಾಸ್ ದಾಸ್, ನವಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.