ADVERTISEMENT

ನಮ್ಮ ತೇಜೋವಧೆಯೇ ಮುಚ್ಚೂರು ಲೋಕೇಶ್ ಶೆಟ್ಟಿ ಉದ್ದೇಶ: ಗುಣಪಾಲ ಕಡಂಬ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 11:38 IST
Last Updated 23 ಜುಲೈ 2022, 11:38 IST
ಗುಣಪಾಲ ಕಡಂಬ
ಗುಣಪಾಲ ಕಡಂಬ   

ಮಂಗಳೂರು: ‘ನನ್ನ ಮೇಲೆ, ಕಂಬಳ ಓಟಗಾರ ಶ್ರೀನಿವಾಸ ಗೌಡ ಮತ್ತು ಸ್ಕೈ ವ್ಯೂ ಸಂಸ್ಥೆಯ ರತ್ನಾಕರ ಅವರ ಮೇಲೆ ದೂರು ದಾಖಲಿಸಿ ಕಂಬಳ ಕ್ರೀಡೆಗೆ ಕೆಟ್ಟ ಹೆಸರು ಉಂಟುಮಾಡಲು ಪ್ರಯತ್ನಿಸಿರುವ ಮುಚ್ಚೂರು ಲೋಕೇಶ್ ಶೆಟ್ಟಿ ನಮ್ಮೆಲ್ಲರ ತೇಜೋವಧೆಗೆ ಮುಂದಾಗಿದ್ದಾರೆ’ ಎಂದು ಕಂಬಳ ಅಕಾಡೆಮಿ ಸ್ಥಾಪಕ ಗುಣಪಾಲ ಕಡಂಬ ಆರೋಪಿಸಿದರು.

ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕಂಬಳ ಸಂಸ್ಥೆ ಆರಂಭಿಸಲು ಮುಂದಾಗುತ್ತಿದ್ದಂತೆಯೇ, ನಾನು ಅದರ ಅಧ್ಯಕ್ಷನಾಗುವ ಸಾಧ್ಯತೆ ಇದೆ ಎಂದು ಮನಗಂಡು ಕುತಂತ್ರ ಮಾಡಲು ಕೆಲವರು ಮುಂದಾಗಿದ್ದಾರೆ, ಅದರ ಮುಂದುವರಿದ ಭಾಗವಾಗಿ ದೂರು ದಾಖಲಾಗಿದೆ’ ಎಂದರು.

’ದೂರಿನಲ್ಲಿ ನಮ್ಮನ್ನೆಲ್ಲ ಕ್ರಿಮಿನಲ್‌ಗಳೆಂದು ಬಿಂಬಿಸಲಾಗಿದೆ. ಯಾರಿಗೂ ಮೋಸ ಮಾಡುವುದಾಗಲಿ, ಯಾರ ಸೊತ್ತನ್ನು ಕಸಿದುಕೊಳ್ಳುವುದಾಗಲಿ ದರೋಡೆಯಲ್ಲಿ ಭಾಗಿಯಾಗುವುದಾಗಲಿ ಮಾಡಲಿಲ್ಲ. ಹೀಗಿರುವಾಗ ನಾವು ಕ್ರಿಮಿನಲ್‌ಗಳಾಗುವುದು ಹೇಗೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

’ಶ್ರೀನಿವಾಸ ಗೌಡ ಅವರನ್ನು ಉಸೇನ್ ಬೋಲ್ಟ್ ಅವರಿಗೆ ನಾನೆಲ್ಲೂ ಹೋಲಿಕೆ ಮಾಡಲಿಲ್ಲ. ಅದು ಮಾಧ್ಯಮದವರ ಸೃಷ್ಟಿ. ಹಾಗೆ ಬಿಂಬಿಸಿದ್ದರ ಹಿಂದೆ ಲೋಕೇಶ್ ಶೆಟ್ಟಿ ಅವರ ಕೈವಾಡವೂ ಇದೆ. ಅವರು ಮಾಡಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿವೆ’ ಎಂದು ಕಡಂಬ ಹೇಳಿದರು.

ಸ್ಕೈವ್ಯೂ ಕಂಪನಿಯ ರತ್ನಾಕರ ಮತ್ತು ವಕೀಲ ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.