
ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ನಡುವೆ ನಡೆದಿದ್ದ ಐತಿಹಾಸಿಕ ಸಂವಾದಕ್ಕೆ 100 ವರ್ಷ ತುಂಬಿದ ಪ್ರಯುಕ್ತ ‘ಗುರು–ಗಾಂಧಿ ಸಂವಾದ ಶತಮಾನೋತ್ಸವ’ವನ್ನು ಕೇರಳದ ವರ್ಕಲ ಶಿವಗಿರಿ ಮಠ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ಮಂಗಳ ಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಂಗಣದಲ್ಲಿ ಡಿ.3ರಂದು ಆಯೋಜಿಸಲಾಗಿದೆ ಎಂದು ಕೇಂದ್ರ ಸಂಘಟನಾ ಸಮಿತಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ಕುರಿತು ಮಾಹಿತಿ ನೀಡಿದ ಅವರು, ‘ಈ ಪ್ರದೇಶದಲ್ಲಿ ಶಾಂತಿ ಸೌಹಾರ್ದ ಕಾಪಾಡಲು ಈ ಕಾರ್ಯಕ್ರಮವು ನಾಂದಿ ಹಾಡಬೇಕು ಎಂಬುದು ನಮ್ಮ ಆಶಯ. ‘ಗುರು–ಗಾಂಧಿ ಸಂವಾದ ಶತಮಾನೋತ್ಸವ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ರಾಜ್ಯದಲ್ಲಿ ಇದರ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದು ಚಾಲನೆ ನೀಡಲಿದ್ದಾರೆ. ನಾರಾಯಣಗುರುಗಳ ಮಹಾ ಸಮಾಧಿ ಶತಾಬ್ದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದ್ದು, ಈ ಕುರಿತು ರಾಜ್ಯದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಅಂದು ಚಾಲನೆ ನೀಡಲಾಗುತ್ತಿದೆ. ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೆ.ಸಿ.ವೇಣುಗೋಪಾಲ್ ಹಾಗೂ ಶಿವಗಿರಿ ಮಠದ ಮುಖ್ಯ ಸ್ವಾಮೀಜಿ ಸಚ್ಚಿದಾನಂದ ತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ’ ಎಂದರು.
‘ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣಗುರು ಅಧ್ಯಯನ ಪೀಠದ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಪೀಠದ ಕಟ್ಟಡದ ವಿಸ್ತರಣೆ ಕಾಮಗಾರಿಗೂ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಪೀಠದ ಕಟ್ಟಡಕ್ಕೆ ರಾಜ್ಯಸಭಾ ಸದಸ್ಯರ ಮತ್ತು ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ನಾನು ಒಟ್ಟು ₹ 50 ಲಕ್ಷ ಅನುದಾನ ಒದಗಿಸಿದ್ದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 10 ಲಕ್ಷ ಹಾಗೂ ಮತ್ತು ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಪರಿಷತ್ತಿನ ಮಾಜಿ ಸದಸ್ಯ ಹರೀಶ್ ಕುಮಾರ್ ₹ 10 ಲಕ್ಷ ಅನುದಾನ ಒದಗಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಕಟ್ಟಡ ವಿಸ್ತರಣೆಗೆ ₹ 3 ಕೋಟಿ ಅನುದಾನ ಮಂಜೂರು ಮಾಡಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
‘ವಿವಿಧ ಗೋಷ್ಠಿಗಳು, ಯತಿ ಪೂಜೆ ಹಾಗೂ ಗುರುಗಳ ಮಹಾಸಮಾಧಿ ಶತಾಬ್ಧಿ ಪ್ರಯುಕ್ತ ಸರ್ವಮತ ಸಮ್ಮೇಳನ ಶತಮಾನೋತ್ಸವ ಸೇರಿದಂತೆ ಅಂದು ಬೆಳಿಗ್ಗೆ 11 ರಿಂದ ಸಂಜೆ 4ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ರಾಮಕೃಷ್ಣ ಮಿಷನ್‌ನ ಸ್ವಾಮೀಜಿ, ವಿವಿಧ ಧರ್ಮಗಳ ಮುಖಂಡರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಾರಾಯಣ ಗುರು ಹಾಗೂ ಮಹಾತ್ಮ ಗಾಂಧೀಜಿಯ ಅನುಯಾಯಿಗಳು, ಅಭಿಮಾನಿಗಳು ಸೇರಿ ಸುಮಾರು 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.
‘ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಾರಾಯಣಗುರುಗಳು ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಕುರಿತು 2026ರ ಫೆ.21ರಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಿದ್ದೇವೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಂಘಟನಾ ಸಮಿತಿ ರಕ್ಷಾಧಿಕಾರಿ ಶಿವಗಿರಿ ಮಠದ ಜ್ಞಾನತೀರ್ಥ ಸ್ವಾಮೀಜಿ, ಪ್ರಧಾನ ಸಂಚಾಲಕ ಪಿ.ವಿ.ಮೋಹನ್, ಗೌರವ ಉಪಾಧ್ಯಕ್ಷರಾದ ಜಯರಾಜ್ ಸೋಮಸುಂದರಂ, ನವೀನಚಂದ್ರ ಡಿ.ಸುವರ್ಣ, ಸೂರ್ಯಕಾಂತ್ ಜೆ.ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ ಆರ್.ಪೂಜಾರಿ, ರಕ್ಷಿತ್ ಸುವರ್ಣ, ಸದಾಶಿವ ಉಳ್ಳಾಲ ಹಾಗೂ ನವೀನ್ ಡಿಸೋಜ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.