ಮಂಗಳೂರು: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಎರಡು ಮತ್ತು ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿರುವ ಕುಂದಾಪುರ ವಂಡ್ಸೆಯ ಗುರುರಾಜ ಪೂಜಾರಿ ಕರ್ನಾಟಕ ಕ್ರೀಡಾಕೂಟದಲ್ಲಿ ಯುವ ವೇಟ್‌ಲಿಫ್ಟರ್‌ಗಳಿಗೆ ಉತ್ಸಾಹ ತುಂಬುತ್ತಿದ್ದಾರೆ.
ಉಜಿರೆ ಎಸ್‌ಡಿಎಂ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಗುರುರಾಜ್, 2018ರ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನ 56 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2022ರ ಬರ್ಮಿಂಗಂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 61 ಕೆಜಿ ವಿಭಾಗದ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. 2021ರಲ್ಲಿ ತಾಷ್ಕೆಂಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನ ಪೂಜಾರಿ 61 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.
ವಾಯುಸೇನೆಯ ತ್ರಿ–ಬಿಆರ್‌ಡಿ (ಬೇಸ್ ರಿಪೇರ್ ಡಿಪೊ) ಘಟದಲ್ಲಿ ಸೇವೆಯಲ್ಲಿರುವ ಅವರು ಈಗ ಒಂದೂವರೆ ತಿಂಗಳ ವಾರ್ಷಿಕ ರಜೆಯಲ್ಲಿ ಊರಿಗೆ ಬಂದಿದ್ದಾರೆ. ‘ಕರ್ನಾಟಕ ಕ್ರೀಡಾಕೂಟ ನಡೆಯುತ್ತಿರುವುದು ತಿಳಿದು ಬಂದೆ. ಯುವ ವೇಟ್‌ಲಿಫ್ಟರ್‌ಗಳಿಗೆ ತಾಂತ್ರಿಕ ಸಲಹೆಗಳನ್ನು ನೀಡಿ ಅವರ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗಬೇಕೆಂಬುದು ನನ್ನ ಆಶಯ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ರಾಜ್ಯದಲ್ಲಿ ವೇಟ್‌ಲಿಫ್ಟಿಂಗ್ ಕ್ರೀಡೆ ಈಚೆಗೆ ಉತ್ತಮ ಬೆಳವಣಿಗೆ ಕಾಣುತ್ತಿದೆ. ಉತ್ತಮ ತಂತ್ರಗಳನ್ನು ಕಲಿತರೆ ಈ ಕ್ರೀಡೆಯಲ್ಲಿ ಸರ್ವಾಂಗೀಣ ಬೆಳವಣಿಗೆ ಕಾಣಬಹುದು. ಯುವ ಕ್ರೀಡಾಪಟುಗಳು ಏನೇನು ತಪ್ಪು ಮಾಡುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಬೆನ್ನಿನ ಸ್ಥಿರತೆ ಕಾಪಾಡಿಕೊಳ್ಳದೇ ಇರುವುದು ಮತ್ತು ಭಾರವನ್ನು ದೂರದಿಂದ ಎಳೆಯುವುದು ಸಾಮಾನ್ಯವಾಗಿ ಮಾಡುವ ತಪ್ಪುಗಳು. ಇದು ಗಮನಕ್ಕೆ ಬಂದರೆ ಸೂಚನೆ ನೀಡುತ್ತಿದ್ದೇನೆ’ ಎಂದು ಅವರು ತಿಳಿಸಿದರು.
‘ಎಸ್‌ಡಿಎಂ ಮತ್ತು ಆಳ್ವಾಸ್ ಕಾಲೇಜುಗಳಲ್ಲಿ ವೇಟ್‌ಲಿಫ್ಟಿಂಗ್‌ಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರಾಜ್ಯದ ಎಲ್ಲ ಕಡೆಗಳಲ್ಲಿ ಇಂಥ ಸೌಕರ್ಯಗಳು ಸೃಷ್ಟಿಯಾಗಬೇಕು. ಆಗ ಕ್ರೀಡೆ ಬೆಳೆಯಬಲ್ಲುದು’ ಎಂದು ಅವರು ಅಭಿಪ್ರಾಯಪಟ್ಟರು.
ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ಅವರು 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಯೋಚನೆ ಇದೆ. ಇದಕ್ಕಾಗಿ ಸೆಪ್ಟೆಂಬರ್ ತಿಂಗಳಲ್ಲಿ ಅರ್ಹತಾ ಸುತ್ತಿನ ಸ್ಪರ್ಧೆಗಳು ನಡೆಯಲಿದ್ದು ಅದಕ್ಕೆ ಸಿದ್ಧನಾಗುತ್ತಿದ್ದೇನೆ. ಹೊಸ ವಿಭಾಗಗಳು ಸೇರ್ಪಡೆಯಾಗಿದ್ದು ಅದಕ್ಕೆ ತಕ್ಕಂತೆ ಅಭ್ಯಾಸ ಮಾಡಬೇಕಾಗಿದೆ’ ಎಂದರು.
ನೆಟ್‌ಬಾಲ್‌ನ ಸೆಮಿಫೈನಲ್ ಪಂದ್ಯಗಳು ಭಾನುವಾರ ಬೆಳಿಗ್ಗೆ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿವೆ. ಪುರುಷರ ವಿಭಾಗದಲ್ಲಿ ಹಾಸನ ಮತ್ತು ಚಾಮರಾಜನಗರ ಬೆಂಗಳೂರು ಮತ್ತು ಮೈಸೂರು ನಡುವಿನ ಪಂದ್ಯ 8.30ಕ್ಕೆ ನಡೆಯಲಿವೆ. ಬೆಳಿಗ್ಗೆ 7.30ಕ್ಕೆ ಮಹಿಳಾ ವಿಭಾಗದಲ್ಲಿ ಬೆಂಗಳೂರು ಮತ್ತು ಚಾಮರಾಜನಗರ ದಕ್ಷಿಣ ಕನ್ನಡ ಮತ್ತು ಹಾಸನ ತಂಡಗಳ ನಡುವಿನ ಹಣಾಹಣಿ ಬೆಳಿಗ್ಗೆ 7.30ಕ್ಕೆ ನಡೆಯಲಿದೆ. ಹಾಕಿ: ಬಳ್ಳಾರಿ ಧಾರವಾಡ ಜಯಭೇರಿ ಮಣಿಪಾಲದಲ್ಲಿ ನಡೆದ ಹಾಕಿ ಪಂದ್ಯಗಳಲ್ಲಿ ಹಾಕಿ ಬಳ್ಳಾರಿ 3–2ರಲ್ಲಿ ಹಾಕಿ ಬಾಗಲಕೋಟೆ ವಿರುದ್ಧ ಹಾಕಿ ಧಾರವಾಡ 6–0ಯಿಂದ ಹಾಕಿ ದಕ್ಷಿಣ ಕನ್ನಡ ವಿರುದ್ಧ ಜಯಭೇರಿ ಮೊಳಗಿಸಿತು.
ಮಂಗಳೂರಿನ ಕಸಬಾ ಬ್ರದರ್ಸ್ ಮತ್ತು ಮಂಗಳೂರು ಯುನೈಟೆಡ್ ತಂಡಗಳು ಫುಟ್‌ಬಾಲ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದವು. ನೆಹರೂ ಮೈದಾನದಲ್ಲ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸೇಂಟ್ ಅಲೋಶಿಯಸ್ ಕಾಲೇಜು ತಂಡವನ್ನು ಟೈಬ್ರೇಕರ್‌ನಲ್ಲಿ 4–3ರಿಂದ ಕಸಬಾ ತಂಡ ಸೋಲಸಿತು. ಸೇಂಟ್ ಅಲೋಶಿಯಸ್ ಪರವಾಗಿ ಫರ್ಹಾನ್ 9ನೇ ನಿಮಿಷದಲ್ಲಿ ಕಸಬಾ ತಂಡಕ್ಕಾಗಿ ಹಾಶಿರ್ 45ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮಂಗಳೂರು ಯುನೈಟೆಡ್ 3–1ರಲ್ಲಿ ಉಳ್ಳಾಲ ತಂಡವನ್ನು ಮಣಿಸಿತು. ಯುನೈಟೆಡ್‌ಗಾಗಿ ಅಲನ್ ಬೇಬಿ (35ನೇ ನಿಮಿಷ) ರಿನ್ಹಾಲ್ ಮೊಹಮ್ಮದ್ (45) ಮತ್ತು ಮುನ್ನ ರೋಷನ್ (50) ಗೋಲು ಗಳಿಸಿದರೆ ಉಳ್ಳಾಲಕ್ಕಾಗಿ ಶಾರಿಕ್ 47ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.