ADVERTISEMENT

ದ.ಕ.: ಮಳೆ ಬಿರುಸು, ಮನೆಗಳಿಗೆ ಹಾನಿ

ಮೈದುಂಬಿ ಹರಿದ ನದಿಗಳು, ಹಲವೆಡೆ ಗುಡ್ಡದ ಮಣ್ಣು ಕುಸಿತ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 4:39 IST
Last Updated 17 ಜೂನ್ 2025, 4:39 IST
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಿಂತಿದ್ದ ನೀರು
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಿಂತಿದ್ದ ನೀರು   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದಾರು ದಿನಗಳಿಂದ ಬಿರುಸಿನಿಂದ ಸುರಿಯುತ್ತಿರುವ ಮಳೆಯ ಅಬ್ಬರ ಸೋಮವಾರವೂ ಮುಂದುವರಿಯಿತು.

ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೂ ಎಡೆಬಿಡದೆ ಮಳೆಯಾಗಿದೆ. ಮುಂಜಾನೆ ಸ್ವಲ್ಪ ಹೊತ್ತು ಮಳೆ ಇಳಿಮುಖವಾಗಿತ್ತು. ಹೊತ್ತೇರುತ್ತಿದ್ದಂತೆಯೇ ಮಳೆಯ ಅಬ್ಬರ ಮತ್ತೆ ಜೋರಾಗಿತು. ಮಧ್ಯಾಹ್ನದ ಬಳಿ ಕೆಲ ಹೊತ್ತು ಬಿಸಿಲು ಕಾಣಿಸಿಕೊಂಡಿತ್ತು. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಫಲ್ಗುಣಿ, ನಂದಿನಿ ಹಾಗೂ  ಶಾಂಭವಿ ನದಿಗಳು ಮೈದುಂಬಿ ಹರಿಯುತ್ತಿದೆ. ಫಲ್ಗುಣಿ ನದಿ ಉಕ್ಕಿ ಹದಿರು ಗುರುಪುರ, ಹಾಗೂ ಅದ್ಯಪಾಡಿ ಪ್ರದೇಶದಲ್ಲಿ ಪ್ರವಾಹ ಕಾಣಸಿಕೊಂಡಿದೆ.

ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8.30ರ ವರೆಗಿನ 24 ಗ'ಟೆಗಳಲ್ಲಿ ಸರಾಸರಿ 10.29 ಸೆಂ.ಮೀ ಮಳೆಯಾಗಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಅತಿಹೆಚ್ಚು (ಸರಾಸರಿ13.55 ಸೆಂ.ಮೀ) ಹಾಗೂ ಕಡಬ ತಾಲ್ಲೂಕಿನಲ್ಲಿ ಅತಿ ಕಡಿಮೆ (6.66ಸೆಂ.ಮೀ) ಮಳೆ ದಾಖಲಾಗಿದೆ. ಉಳ್ಳಾಲದಲ್ಲಿ  12.93 ಸೆಂ.ಮೀ, ಬೆಳ್ತಂಗಡಿಯಲ್ಲಿ 12.25 ಸೆಂ.ಮಿ, ಮಂಗಳೂರಿನಲ್ಲಿ   11.92 ಸೆಂ.ಮಿ, ಮೂಲ್ಕಿಯಲ್ಲಿ 11.29 ಸೆಂ.ಮೀ, ಮೂಡುಬಿದಿರೆಯಲ್ಲಿ 9.96 ಸೆಂ.ಮೀ, ಪುತ್ತೂರಿನಲ್ಲಿ 7.49 ಸೆಂ.ಮೀ ಹಾಗೂ ಸುಳ್ಯ ತಾಲ್ಲೂಕಿನಲ್ಲಿ 7.42 ಸೆಂ.ಮೀ  ಮಳೆ ದಾಖಲಾಗಿದೆ.

ADVERTISEMENT

ಮೆಸ್ಕಾಂ ಐದು ವಿದ್ಯುತ್ ಪರಿವರ್ತಕಗಳು ಹಾಗೂ 104 ವಿದ್ಯುತ್ ಕಂಬಗಳು ಹಾನಿಗೊಂಡಿವೆ. 

ರೆಡ್ ಅಲರ್ಟ್ ಘೋಷಣೆಯಾಗಿದ್ದರಿಂದ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಸಾರಲಾಗಿತ್ತು.

ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪ್ಯದಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ದುರಸ್ತಿಗೊಳಿಸಲಾಯಿತು.
ಗುರುಪುರದಲ್ಲಿ ಫಲ್ಗುಣಿ ನದಿ ಉಕ್ಕಿ ಹರಿದಿದ್ದರಿಂದ ಅಕ್ಕಪಕ್ಕದ ಪ್ರದೇಶಗಳು ಸೋಮವಾರ ಜಲಾವೃತವಾದವು

ಬಂಟ್ವಾಳ: 3 ಕುಟುಂಬ ಸ್ಥಳಾಂತರ

ಬಂಟ್ವಾಳ: ತಾಲ್ಲೂಕಿನಲ್ಲಿ  ಭಾರೀ ಗಾಳಿ ಮಳೆಗೆ ಹಲವೆಡೆ ಮನೆ ಮತ್ತು ಅಡಿಕೆ ತೋಟಗಳಿಗೆ ಹಾನಿಯಾಗಿದೆ. ಅಪಾಯಕ್ಕೆ ಸಿಲುಕಿದ ಮನೆಯಲ್ಲಿ ವಾಸವಿದ್ದವರನ್ನು  ಸ್ಥಳಾಂತರಿಸಲಾಗಿದೆ.

ಮೂಡುಪಡುಕೋಡಿ ಗ್ರಾಮದ ಗುಂಪಕಲ್ಲು  ಇಸುಬು ಬ್ಯಾರಿ ಮನೆ ಗೋಡೆ ಕುಸಿದಿದ್ದು ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ. ಮಂಚಿ ಗ್ರಾಮದ ಕಲ್ಲಮರಾಯಿ ಮಸೀದಿ ಬಳಿ ಐಸಮ್ಮ ಇಬ್ರಾಹಿಂ ಮನೆ ಹಾನಿಗೀಡಾಗಿದ್ದು ಅವರನ್ನು ಸ್ಥಳಾಂತರಿಸಲಾಗಿದೆ.ವಿಟ್ಲಪಡ್ನೂರು ಎರ್ಮಲೆಯ ಶೀನ ಪರವ ಮನೆ ಹಿಂಭಾಗಕ್ಕೆ ಗುಡ್ಡ ಕುಸಿದಿದ್ದು ಮನೆಯಲ್ಲಿದ್ದವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಅಲ್ಲಲ್ಲಿ ಮಣ್ಣು ಕುಸಿತ:  ಮೇರಮಜಲು ಗ್ರಾಮದ ಅಬ್ಬೆಟ್ಟು  ನೋಣಯ್ಯನವರ  ಮನೆಗೆ ಗುಡ್ಡದ ಮಣ್ಣು ಕುಸಿದಿದೆ. ಕಲ್ಲಿಮಾರು ಪೂವಪ್ಪ ಮುಂಡಾಲರ ಮನೆ ಬಳಿ ಧರೆ ಕುಸಿದಿದೆ. ಪುಣಚ ಗ್ರಾಮದ ವಾರಿಜ ನಾರಾಯಣ ಮನೆಗೆ ಗುಡ್ಡದ ಮಣ್ಣು ಕುಸಿದಿದೆ. ಬಿಳಿಯೂರು ಗ್ರಾಮದ ಕುಕ್ಕನೋಟು ನಿವಾಸಿ ಅಬ್ದುಲ್ ರಝಾಕ್ ಮನೆ ಬದಿ ಧರೆ ಕುಸಿದು ಬಿದ್ದಿದೆ. ಪಾಣೆಮಂಗಳೂರಿನ ಬಂಗ್ಲೆಗುಡ್ಡೆ ಪಿ.ಬಿ.ಅಬೂಬಕ್ಕರ್ ಮನೆ ಮತ್ತು ಸ್ನಾನಗೃಹ ಹಾನಿಗೀಡಾಗಿದೆ. ತೆಂಕಕಜೆಕಾರು ಗ್ರಾಮದ ಬಾರ್ದೊಟ್ಟು ಆಯಿಷಾ ಅಹ್ಮದ್ ಹಟ್ಟಿ ಮತ್ತು ಆವರಣಗೋಡೆ ಕುಸಿದಿದೆ. ಕಂಗಿನತೋಟದ ಮೀನಾಕ್ಷಿಯವರ ಮನೆಯ ಗೋಡೆ ಕುಸಿದಿದೆ. ಸಂಗಬೆಟ್ಟು ಗ್ರಾಮದ ಕಂಡಿಗ ರೋಶನ್ ಸಿಕ್ವೇರ ಮನೆಯ ಶೌಚಾಲಯ ಕುಸಿದಿದೆ. ಕರೋಪಾಡಿ ಗ್ರಾಮದಲ್ಲಿ ಮರ ಬಿದ್ದು ರಹಮತ್ ಇಬ್ರಾಹಿಂ ಮನೆಗೆ ಹಾನಿಗೊಳಗಾಗಿದೆ.  ಪಾಣೆಮಂಗಳೂರು ಬೋರುಗುಡ್ಡೆಯಲ್ಲಿ ಮಹಾಬಲ ಪೂಜಾರಿ ಮನೆ ಹಾನಿಗೀಡಾಗಿದೆ. ವಿಟ್ಲ ಪಟ್ಟಣ ಪಂಚಾಯಿತಿ ಮಾರ್ನೆಮಿಗುಡ್ಡೆಯ ಮುನೀರ್ ಮನೆ ಆವರಣಗೋಡೆ ಕುಸಿದಿದೆ. ಪುರಸಭೆ ವ್ಯಾಪ್ತಿಯಲ್ಲಿ ಧರೆ ಕುಸಿದು  ಉಮಾ ಎಸ್. ಭಟ್  ಮನೆ ಹಾನಿಗೊಳಗಾಗಿದೆ. ತೋಟಗಳಿಗೆ ಹಾನಿ: ಚೆನ್ನೈತ್ತೋಡಿ ಗ್ರಾಮದ ತಿಮರಡ್ಕದಲ್ಲಿ ಮರ ಬಿದ್ದು ನಾರಾಯಣ ಸೇವಂತರ ಅಡಿಕೆ ತೋಟಕ್ಕೆ  ಹಾನಿಯಾಗಿದೆ. ಪಿಲಿಮೊಗರು ಗ್ರಾಮದ ಸುನ್ನಡಪೊಲಿಯಲ್ಲಿ ಗುಡ್ಡ ಕುಸಿದು ಬುಡೋಳಿಯ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ.  ಕರಿಯಂಗಳ ಗ್ರಾಮದ ಕಲ್ಕುಕ ಪೊಳಲಿ ಸಮೀಪದ ಮಣಿಕಂಠಪುರ ಅಮ್ಟಾಡಿ ಗ್ರಾಮದ ಬಾಂಬಿಲ-ತಲೆಂಬಿಲ ರಸ್ತೆ ವೀರಕಂಭ ಗ್ರಾಮದ ಕೆಲಿಂಜ ರಸ್ತೆಗಳಿಗೆ  ಮಣ್ಣು ಬಂಡೆ ಬಿದ್ದಿದ್ದು ಅವುಗಳನ್ನು ತೆರವುಗೊಳಿಸಲಾಗಿದೆ. ಮಣಿನಾಲ್ಕೂರು ಗ್ರಾಮದ 4 ಮನೆಗಳ ಸಂಪರ್ಕ ರಸ್ತೆ ಜಲಾವೃತವಾಗಿದೆ. ಕನ್ಯಾನ ಗ್ರಾಮದ ಮಂಡ್ಕೂರು ಪ್ರದೇಶದಲ್ಲಿ ಭೂ ಕುಸಿತದ ಭೀತಿ ಎದುರಾಗಿದೆ. ಕಡೂರು-ಕಾಞಂಗಾಡು ರಾಜ್ಯ ಹೆದ್ದಾರಿಯಲ್ಲಿ  ಗುಡ್ಡ ಕುಸಿತದ ಭೀತಿ ಎದುರಾಗಿರುವ ಸ್ಥಳಗಳಿಗೆ ತಹಶೀಲ್ದಾರ್ ಅರ್ಚನಾ ಭಟ್ ಭೇಟಿ ನೀಡಿ ಪರಿಶೀಲಿಸಿದರು.   

ಶಾಸಕರೇ ಗುದ್ದಲಿ ಹಿಡಿದ ಬಳಿಕ ಚರಂಡಿ ದುರಸ್ತಿ

ಪುತ್ತೂರು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಚರಂಡಿ ದುರಸ್ತಿ ಕಾರ್ಯ ಸೋಮವಾರ ಆರಂಭಗೊಂಡಿದೆ. ಈ ಹೆದ್ದಾರಿ ಬದಿಯ ಚರಂಡಿಯಲ್ಲಿ ಹಲವು ಕಡೆ  ಹೂಳು ಹಾಗೂ ಕಸ  ತುಂಬಿ ಮಳೆನೀರು ರಸ್ತೆಯಲ್ಲೇ ಹರಿದು ಹೋಗುತ್ತಿತ್ತು. ಕೋಡಿಂಬಾಡಿ ಶಾಲಾ ಬಳಿ ರಸ್ತೆ ಬದಿಯ ಚರಂಡಿ ಮುಚ್ಚಿ ಹೋಗಿ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿರುವುದನ್ನು ಗಮನಿಸಿ ಶಾಸಕ ಅಶೋಕ್ ಕುಮಾರ್ ರೈ  ಸ್ವತಃ ಹಾರೆ ಹಿಡಿದು ಭಾನುವಾರ ಚರಂಡಿ ದುರಸ್ತಿ ಮಾಡಿದ್ದರು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಘಟನೆಯ ಬೆನ್ನಲ್ಲೇ ಅಧಿಕಾರಿಗಳು ಹೆದ್ದಾರಿ ಬದಿಯ ಚರಂಡಿ ದುರಸ್ತಿಗೆ ಕ್ರಮವಹಿಸಿದ್ದಾರೆ. ಆರ್ಯಾಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪ್ಯ ಸಂಟ್ಯಾರು ಪರ್ಪುಂಜ ಕೊಲತ್ತಡ್ಕ ಕುಂಬ್ರದಲ್ಲಿ ಜೆಸಿಬಿ ಮೂಲಕ  ಹೆದ್ದಾರಿ ಬದಿಯ ಚರಂಡಿಯ ಹೂಳೆತ್ತಲಾಗಿದೆ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.