ADVERTISEMENT

ಫೋನ್‌ಇನ್ | ಹಡೀಲು ಜಮೀನಿನಲ್ಲಿ ಭತ್ತ ಕೃಷಿಗೆ ಕೃಷಿ ಇಲಾಖೆ ನೆರವು

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 16:56 IST
Last Updated 17 ಜುಲೈ 2020, 16:56 IST
‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ನಡೆದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಜಂಟಿ ನಿರ್ದೇಶಕಿ ಸೀತಾ, ತಾಂತ್ರಿಕ ಸಲಹೆಗಾರ ‍ಪ್ರದೀಪ್ ಪಾಲ್ಗೊಂಡಿದ್ದರು.              –ಪ್ರಜಾವಾಣಿ ಚಿತ್ರ
‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ನಡೆದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಜಂಟಿ ನಿರ್ದೇಶಕಿ ಸೀತಾ, ತಾಂತ್ರಿಕ ಸಲಹೆಗಾರ ‍ಪ್ರದೀಪ್ ಪಾಲ್ಗೊಂಡಿದ್ದರು.   –ಪ್ರಜಾವಾಣಿ ಚಿತ್ರ   

ಮಂಗಳೂರು: ವಯಸ್ಸಾಗಿರುವುದು, ಆರ್ಥಿಕ ಸಂಕಷ್ಟ, ಅನಾರೋಗ್ಯ, ಕಾರ್ಮಿಕರ ಕೊರತೆಯಂತಹ ಗಂಭೀರ ಸಮಸ್ಯೆಗಳ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಮೀನುಗಳನ್ನು ಹಡೀಲು ಬಿಟ್ಟವರಿಗೆ ರೈತ ಉತ್ಪಾದಕರ ಸಂಘದ ಮೂಲಕ ಕೃಷಿ ಇಲಾಖೆ ನೆರವಾಗುತ್ತಿದೆ. ಹಡೀಲು ಬಿಟ್ಟಿದ್ದ ಜಮೀನುಗಳಲ್ಲಿ ಇಲಾಖೆಯ ಪ್ರಯತ್ನದಿಂದ ಭತ್ತದ ಕೃಷಿ ಆರಂಭವಾಗಿದೆ.

‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ಸಹಾಯಕ ನಿರ್ದೇಶಕಿ ವೀಣಾ ಈ ಕುರಿತು ಮಾಹಿತಿ ಹಂಚಿಕೊಂಡರು. ರೈತ ಉತ್ಪಾದಕರ ಸಂಘದ ಅಧ್ಯಕ್ಷ ಮೂಲ್ಕಿ ಎಕ್ಕಾರು ಸದಾಶಿವ ಶೆಟ್ಟಿ ಮತ್ತು ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಉಳಿಪ್ಪಾಡಿ ಗುತ್ತು ಅವರ ಸಹಕಾರದಲ್ಲಿ ಮೂಲ್ಕಿ ಮತ್ತು ಸುರತ್ಕಲ್‌ ಭಾಗದಲ್ಲಿ ನಡೆಯುತ್ತಿರುವ ಭತ್ತ ಕೃಷಿ ಕುರಿತು ವಿವರಿಸಿದರು.

‘ಸಮಸ್ಯೆಯಲ್ಲಿರುವ ರೈತರು ಸಂಘವನ್ನು ಸಂಪರ್ಕಿಸಿದರೆ ಭತ್ತ ಕೃಷಿಗೆ ನೆರವು ನೀಡುತ್ತಾರೆ. ಸಂಘಕ್ಕೆ ಇಲಾಖೆಯ ಕೃಷಿ ಯಂತ್ರಧಾರೆ ಯೋಜನೆಯಡಿ ಯಂತ್ರೋಪಕರಣಗಳನ್ನು ಒದಗಿಸಲಾಗಿದೆ. ಉಳುಮೆ, ನಾಟಿ ಎಲ್ಲವನ್ನೂ ಸಂಘದಿಂದಲೇ ಕೈಗೊಳ್ಳಲಾಗುತ್ತದೆ. ಜಮೀನಿನ ಮಾಲೀಕರು ಬೆಳೆಯನ್ನು ನಿರ್ವಹಣೆ ಮಾಡಿಕೊಂಡು, ಕಟಾವು ಮಾಡಿಕೊಳ್ಳಬಹುದು’ ಎಂದು ಸೀತಾ ಅವರು ವಿವರಿಸಿದರು.

ADVERTISEMENT

ಎಲ್ಲ ರೈತರಿಗೂ ಈ ಸೌಲಭ್ಯ ನೀಡುವುದು ಸಾಧ್ಯ. ಕೃಷಿ ಮುಂದುವರಿಸುವ ಆಸಕ್ತಿ ಹೊಂದಿದ್ದೂ, ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ನೆರವು
ದೊರಕಲಿದೆ ಎಂದರು.

ಕೃಷಿ ಇಲಾಖೆಯ ಅಧಿಕಾರಿಗಳು ಸಂಘದ ಪ್ರಮುಖರ ಜೊತೆ ಸಮನ್ವಯ ಸಾಧಿಸಿ, ಅಗತ್ಯ ನೆರವು ಒದಗಿಸುತ್ತಾರೆ ಎಂದರು.

ಕಳೆದ ವರ್ಷ ಜಿಲ್ಲೆಯಲ್ಲಿ 9,000 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಭತ್ತದ ಕೃಷಿ ಮಾಡಲಾಗಿತ್ತು. ಈ ವರ್ಷ ಈಗಾಗಲೇ 9,000 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆ, ನಾಟಿ ಮಾಡಲಾಗಿದೆ. ಇನ್ನೂ ಮುಂಗಾರು ಹಂಗಾಮು ಮುಗಿದಿಲ್ಲ. ಕಳೆದ ವರ್ಷಕ್ಕಿಂತಲೂ ಹೆಚ್ಚಿನ ವಿಸ್ತೀರ್ಣದಲ್ಲಿ ಭತ್ತದ ಕೃಷಿ ಆಗುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಕೊರತೆ ಇಲ್ಲ: ಭತ್ತದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಕೊರತೆ ಇಲ್ಲ. ಈವರೆಗೆ ರೈತರು 777 ಕ್ವಿಂಟಲ್‌ ಬಿತ್ತನೆ ಬೀಜ ಖರೀದಿಸಿದ್ದಾರೆ. ಜಿಲ್ಲೆಯಲ್ಲಿ 5,000 ಟನ್‌ ರಸಗೊಬ್ಬರ ದಾಸ್ತಾನು ಇದೆ. ಬೇಡಿಕೆ ಬಂದರೆ ಅಗತ್ಯ ಪ್ರಮಾಣದ ರಸಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕಳೆದ ವರ್ಷ ಜಿಲ್ಲೆಯಲ್ಲಿ 214 ರೈತರು ಭತ್ತದ ಬೆಳೆಗೆ ವಿಮೆ ಮಾಡಿಸಿದ್ದರು. ಈ ಪೈಕಿ ಪ್ರಾಕೃತಿಕ ವಿಕೋಪದಿಂದ ಬೆಳೆ ಹಾನಿಯಾದ ಪ್ರಕರಣಗಳಲ್ಲಿ 11 ರೈತರಿಗೆ ₹ 92,000 ಪರಿಹಾರ ದೊರೆತಿದೆ. ಈ ವರ್ಷ ಬೆಳೆವಿಮೆ ನೋಂದಣಿ ಪ್ರಗತಿಯಲ್ಲಿದ್ದು, ಆಗಸ್ಟ್‌ 14ರವರೆಗೂ ಅವಕಾಶವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.