ADVERTISEMENT

ಚಿಣ್ಣರ ಸ್ವಾಗತಕ್ಕೆ ಸಜ್ಜಾದ ‘ಅಜ್ಜಿಮನೆ'

ಮೂರು ಕಡೆಗಳಲ್ಲಿ ಹೈಟೆಕ್ ಅಂಗನವಾಡಿ ಕಟ್ಟಡ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 4:24 IST
Last Updated 14 ಆಗಸ್ಟ್ 2020, 4:24 IST
ಅಜ್ಜಿ ಮನೆ ಅಂಗನವಾಡಿ ಕಟ್ಟಡದ ಹೊರಾಂಗಣ.
ಅಜ್ಜಿ ಮನೆ ಅಂಗನವಾಡಿ ಕಟ್ಟಡದ ಹೊರಾಂಗಣ.   

ಮಂಗಳೂರು: ಮಕ್ಕಳ ಕಲಿಕೆಯ ಮೊದಲ ಹಂತವಾಗಿರುವ ಅಂಗನವಾಡಿ ಕೇಂದ್ರವೊಂದು ಅಜ್ಜಿಯ ಮನೆಯ ರೂಪದಲ್ಲಿ ಸಿದ್ಧವಾಗಿದ್ದು, ಚಿಣ್ಣರ ಆಟ ಪಾಠಗಳಿಗೆ ಅಂಗನವಾಡಿಗಳು ಸಜ್ಜಾಗಿವೆ. ಮಂಗಳೂರು ದಕ್ಷಿಣ ಕ್ಷೇತ್ರದ ಬೆಂಗರೆ, ಮಂಗಳೂರು ಉತ್ತರ ಕ್ಷೇತ್ರದ ಕಾಟಿಪಳ್ಳ ಹಾಗೂ ಮೂಡುಬಿದಿರೆ ಕ್ಷೇತ್ರದ ಮೂಡುಶೆಡ್ಡೆ ಎದುರುಪದವಿನಲ್ಲಿ ‘ಅಜ್ಜಿಮನೆ’ ಅಂಗನವಾಡಿಗಳು ನಿರ್ಮಾಣವಾಗಿವೆ.

ಈ ಅಂಗನವಾಡಿ ಕಟ್ಟಡಗಳ ನಿರ್ಮಾಣ, ವಿನ್ಯಾಸವನ್ನು ನಾಜೂಕಿನಿಂದ ಆಕರ್ಷಕ ರೀತಿಯಲ್ಲಿ ಮಾಡಲಾಗಿದೆ. ಯಾವುದೇ ಹೈಟೆಕ್ ಕಿಂಡರ್ ಗಾರ್ಡನ್ ನರ್ಸರಿಗಳನ್ನು ಮೀರಿಸುವಂತೆ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸ ಮಾಡಲಾಗಿದೆ. ಕಟ್ಟಡದಲ್ಲಿ ಮಕ್ಕಳಿಗೆ ಅಜ್ಜಿ ಮನೆಗೆ ಹೋದ ಭಾವನೆ ಬರುವಂತೆ, ಅಲ್ಲಿ ಆಟವಾಡಲು ಅಂಗಳ, ಮಲಗಲು ಕೋಣೆ, ಅಡುಗೆ ಮನೆ, ಚಾವಡಿ, ಶೌಚಾಲಯ ನಿರ್ಮಿಸಲಾಗಿದೆ.

ಅಜ್ಜಿಮನೆ ಅಂಗನವಾಡಿಯ ಹೊರ ಆವರಣದಲ್ಲಿ ಪುಷ್ಪ ಉದ್ಯಾನ, ಎರೆಹುಳ ಗೊಬ್ಬರ ಘಟಕ, ಮಳೆ ನೀರು ಸಂಗ್ರಹ ವ್ಯವಸ್ಥೆ, ಸೌರ ದೀಪದೊಂದಿಗೆ ಸುಸಜ್ಜಿತ ಕಟ್ಟಡವನ್ನು 3 ಕಡೆಗಳಲ್ಲಿ ನಿರ್ಮಿಸಲಾಗಿದೆ. ಇಡೀ ಕಾಮಗಾರಿಯನ್ನು ಸುಮಾರು ₹25 ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.

ADVERTISEMENT

ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಗೋಡೆ ಬರಹ ಮತ್ತು ಗ್ರಾಮೀಣ ಚಿತ್ರಕಲೆ ಮಾಡಲಾಗಿದೆ. ಕಟ್ಟಡದ ವಿದ್ಯುತ್‍ಗೆ ಎಲ್‍ಇಡಿ ದೀಪ ಅಳವಡಿಸಲಾಗಿದೆ. ಎರೆಹುಳ ಘಟಕದಿಂದ ಬರುವ ಗೊಬ್ಬರ ಬಳಸಿ, ತರಕಾರಿ ಗಿಡಗಳನ್ನು ಬೆಳೆಯಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಸುರಕ್ಷತೆಗಾಗಿ ಕಟ್ಟಡದ ಸುತ್ತ ಆವರಣಗೋಡೆ ನಿರ್ಮಿಸಲಾಗಿದ್ದು, ಮಕ್ಕಳು ಸ್ವಚ್ಛಂದವಾಗಿ ಆವರಣದೊಳಗೆ ಸಂಚರಿಸಬಹುದಾಗಿದೆ.

ಮಕ್ಕಳಿಗೆ ಆಟ ಯಾವಾಗಲು ಮೊದಲ ಪ್ರಾಶಸ್ತ್ಯ. ಈ ನಿಟ್ಟಿನಲ್ಲಿ ಅಜ್ಜಿಮನೆ ಅಂಗನವಾಡಿ ಕೇಂದ್ರದಲ್ಲಿ ಆಟವಾಡಲು ಸ್ಥಳಾವಕಾಶ ಹಾಗೂ ಜಾರುಬಂಡಿ ಸೇರಿದಂತೆ ಆಕರ್ಷಕ ಆಟದ ತಾಣಗಳನ್ನು ಆಯೋಜಿಸಲಾಗಿದೆ.

‘ಅಜ್ಜಿಮನೆ’ ಅಂಗನವಾಡಿ ಕೇಂದ್ರದ ವಿನ್ಯಾಸವನ್ನು ಗ್ರೀನ್‍ಮಾರ್ಕ್ ವಾಸ್ತುಶಿಲ್ಪ ಭರತ್‍ರಾಮ್ ಜೆಪ್ಪು ಮಾಡಿದ್ದು, ನಿರ್ಮಿತಿ ಕೇಂದ್ರದ ಸಹಾಯಕ ಎಂಜಿನಿಯರ್ ನವಿತ್ ಅವರ ಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆಸಲಾಗಿದೆ. ಬೆಂಗರೆ ಅಂಗನವಾಡಿ ಕೇಂದ್ರದ ಉದ್ಘಾಟನೆ ಇತ್ತೀಚೆಗೆ ನೆರವೇರಿದ್ದು, ಕಾಟಿಪಳ್ಳ ಹಾಗೂ ಎದುರುಪದವು ಅಂಗನವಾಡಿ ಕೇಂದ್ರಗಳ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿವೆ.

ಎಂಆರ್‌ಪಿಎಲ್ ಸಹಯೋಗ

ಮಾದರಿ ಅಂಗನವಾಡಿ ಕಟ್ಟಡ ನಿರ್ಮಿಸಲು ಹಿಂದಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಆರ್.ರವಿ ಅವರು ನಿರ್ಮಿತಿ ಕೇಂದ್ರಕ್ಕೆ ಈ ಬಗ್ಗೆ ಒಂದು ಯೋಜನಾ ವರದಿಯನ್ನು ಸಲ್ಲಿಸಲು ಸೂಚಿಸಿದ್ದರು.

ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು, ತಮ್ಮ ತಂಡದೊಂದಿಗೆ ಮಾದರಿ ಅಂಗನವಾಡಿ ಕಟ್ಟಡಕ್ಕೆ ‘ಅಜ್ಜಿಮನೆ’ ಎಂಬ ಯೋಜನಾ ವರದಿಯನ್ನು ತಯಾರಿಸಿದರು. ಈ ಯೋಜನೆಗೆ ಸಿಎಸ್‍ಆರ್ ಅಡಿ ಅನುದಾನ ನೀಡಲು ಎಂಆರ್‌ಪಿಎಲ್‍ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೋರಿಕೆ ಸಲ್ಲಿಸಿದರು. ಇದನ್ನು ಪರಿಗಣಿಸಿ ಮಂಗಳೂರು ತಾಲ್ಲೂಕಿನಲ್ಲಿ ಮೂರು ಅಂಗನವಾಡಿಗಳನ್ನು ನಿರ್ಮಿಸಲು ಎಂಆರ್‌ಪಿಎಲ್ ಅನುಮೋದನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.