ADVERTISEMENT

ದಕ್ಷಿಣ ಜಿಲ್ಲೆಯ ಗಡಿಯಲ್ಲಿ ತಪಾಸಣೆ ಬಿಗಿ

ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಯ ಹದ್ದಬಸ್ತಿನ ಕಾವಲು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 15:34 IST
Last Updated 1 ಆಗಸ್ಟ್ 2021, 15:34 IST

ಮಂಗಳೂರು: ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ತಲಪಾಡಿಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಹದ್ದುಬಸ್ತಿನಿಂದ ಕಾಯುತ್ತಿದ್ದಾರೆ.

ನೆಗೆಟಿವ್ ವರದಿ ಇಲ್ಲದೆ ಕೇರಳ ಕಡೆಯಿಂದ ಬಂದವರನ್ನು ಅಲ್ಲಿಯೇ ತಡೆದು, ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿದ ದೃಶ್ಯ ಭಾನುವಾರ ಕಂಡುಬಂತು. ಈವರೆಗೆ ಕೋವಿಡ್ ತಡೆ ಲಸಿಕೆ ಪಡೆದ ಪ್ರಮಾಣಪತ್ರ ತೋರಿಸಿದರೆ, ಗಡಿ ದಾಟಲು ಅವಕಾಶ ನೀಡಲಾಗುತ್ತಿತ್ತು. ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಕಾರಣ ಎರಡು ಜಿಲ್ಲೆಗಳ ನಡುವೆ ಬಸ್ ಸಂಚಾರವನ್ನು ಒಂದುವಾರದ ಮಟ್ಟಿಗೆ ಸ್ಥಗಿತಗೊಳಿಸಿ, ಶನಿವಾರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಕಷ್ಟ: ಸೋಮವಾರ(ಆ.2)ದಿಂದ ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆ
ಆರಂಭವಾಗುತ್ತಿವೆ. ಪರೀಕ್ಷೆಯನ್ನು ಮುಂದೂಡದೇ ಇರಲು ವಿಶ್ವವಿದ್ಯಾಲಯ ತೀರ್ಮಾನಿಸಿದೆ. ಪ್ರಸ್ತುತ 1,3 ಮತ್ತು 5ನೇ ಪದವಿ ಸೆಮಿಸ್ಟರ್ ಪರೀಕ್ಷೆ ನಡೆಯಲಿದೆ. ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಕೇರಳ ಭಾಗದ ಅನೇಕ ವಿದ್ಯಾರ್ಥಿಗಳು ವಸತಿ ನಿಲಯ, ಪಿಜಿಗಳನ್ನು ಸೇರಿಕೊಂಡಿದ್ದಾರೆ. ಆದರೆ, ನಿತ್ಯ ಸಂಚರಿಸುವ ವಿದ್ಯಾರ್ಥಿಗಳಿಗೆ ಈಗ ತೊಂದರೆ ಎದುರಾಗಿದೆ. ‘ತೊಂದರೆ ಆಗುವ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುವುದು’ ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.

ADVERTISEMENT

ಪರೀಕ್ಷೆಗೆ ಹಾಜರಾಗಲು 72 ಗಂಟೆ ಒಳಗಿನ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಅಗತ್ಯ ಇರುವ ಕಾರಣ ಅನೇಕ ವಿದ್ಯಾರ್ಥಿಗಳು ಭಾನುವಾರ ಗಡಿಯಲ್ಲಿರುವ ತಪಾಸಣಾ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡರು.

‘ಪರೀಕ್ಷೆಗೆ ಹಾಜರಾಗಲು ಕೇರಳ ವಿದ್ಯಾರ್ಥಿಗಳಿಗೆ ಗಡಿಯಲ್ಲಿ ವಿನಾಯಿತಿ ನೀಡಬೇಕು’ ಎಂದು ಕಾಸರಗೋಡು ಬಿಜೆಪಿ ಘಟಕದ ಅಧ್ಯಕ್ಷ ಶ್ರೀಕಾಂತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.

‘ಪ್ರತ್ಯೇಕ ಪರೀಕ್ಷೆ’

ಮಂಗಳೂರು ವಿಶ್ವವಿದ್ಯಾಲಯದ ಮುಂದುವರಿದ ಸೆಮಿಸ್ಟರ್ ಪರೀಕ್ಷೆ ಆಗಸ್ಟ್‌ 2ರಿಂದ ಆರಂಭವಾಗಲಿದೆ. ಗಡಿ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ತೊಂದರೆಯಾದರೆ, ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಲಾಗುವುದು. ಕೋವಿಡ್ ಪಾಸಿಟಿವ್ ಕಾರಣಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ ಅಂತಹ ವಿದ್ಯಾರ್ಥಿಗಳು ವೈದ್ಯಕೀಯ ದೃಢೀಕರಣ ಪತ್ರದ ಜತೆಗೆ ಆಯಾ ಕಾಲೇಜಿನ ಪ್ರಾಂಶುಪಾಲರ ಪತ್ರವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.