ADVERTISEMENT

ಹಿಂದೂ ಕ್ರಿಶ್ಚಿಯನ್ ಕೈಬಿಡದಿದ್ದರೆ ಸಮೀಕ್ಷೆ ಬಹಿಷ್ಕಾರ: ರಾಜಶೇಖರಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 23:58 IST
Last Updated 20 ಸೆಪ್ಟೆಂಬರ್ 2025, 23:58 IST
ಜಾತಿ ಸಮೀಕ್ಷೆಯಲ್ಲಿ ಹಿಂದೂ 47 ಉಪ ಜಾತಿಗಳನ್ನು ‘ಕ್ರಿಶ್ಚಿಯನ್‌’ ಎಂದು ಸೇರಿಸಿರುವುದರ ವಿರುದ್ಧ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಕರ್ನಾಟಕ ವತಿಯಿಂದ ಮಂಗಳವಾರ ಮಂಗಳೂರಿನ ರಥಬೀದಿಯ ಬಾಳಂಭಟ್‌ ಸಭಾಭವನದಲ್ಲಿ ದುಂಡು ಮೇಜಿನ ಸಭೆ ನಡೆಯಿತು
ಜಾತಿ ಸಮೀಕ್ಷೆಯಲ್ಲಿ ಹಿಂದೂ 47 ಉಪ ಜಾತಿಗಳನ್ನು ‘ಕ್ರಿಶ್ಚಿಯನ್‌’ ಎಂದು ಸೇರಿಸಿರುವುದರ ವಿರುದ್ಧ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಕರ್ನಾಟಕ ವತಿಯಿಂದ ಮಂಗಳವಾರ ಮಂಗಳೂರಿನ ರಥಬೀದಿಯ ಬಾಳಂಭಟ್‌ ಸಭಾಭವನದಲ್ಲಿ ದುಂಡು ಮೇಜಿನ ಸಭೆ ನಡೆಯಿತು   

ಮಂಗಳೂರು: ‘ಹಿಂದೂ ಉಪಜಾತಿಗಳ ಜೊತೆ ಸೇರಿಸಿರುವ ಕ್ರಿಶ್ಚಿಯನ್‌ ಪದ ಬಳಕೆ ಕೈಬಿಡಲಾಗಿದೆ ಎಂದು ಸಿ.ಎಂ ಪ್ರಕಟಿಸದಿದ್ದರೆ ಸಮೀಕ್ಷೆ ಬಹಿಷ್ಕಾರಕ್ಕೆ ಕರೆ ನೀಡಲು ಚಿಂತನೆ ನಡೆದಿದೆ’ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಜಾತಿವಾರು ಸಮೀಕ್ಷೆಯಲ್ಲಿ ಹಿಂದೂವಿನ 47 ಉಪ ಜಾತಿಗಳ ಜೊತೆ ‘ಕ್ರಿಶ್ಚಿಯನ್‌’ ಎಂದು ಸೇರಿಸಿದ್ದನ್ನು ಖಂಡಿಸಿ ‘ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಕರ್ನಾಟಕ’ ಮಂಗಳವಾರ ಇಲ್ಲಿ ಏರ್ಪಡಿಸಿದ್ದ ದುಂಡು ಮೇಜಿನ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸರ್ಕಾರ ತಕ್ಷಣ ಆಯೋಗಕ್ಕೆ ಸೂಚನೆ ನೀಡಿ ಪಟ್ಟಿಯಿಂದ 47 ಉಪಜಾತಿಗಳ ಕೈಬಿಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈಗಿನಂತೆ ಸಮೀಕ್ಷೆ ನಡೆದಲ್ಲಿ ಮುಂದೆ ಮೀಸಲಾತಿಯಲ್ಲಿ ಏರುಪೇರು ಆಗುವ ಅಪಾಯ ಇದೆ. ಆಯೋಗದ ಈ ನಿರ್ಧಾರ ಮತಾಂತರಕ್ಕೆ ಪ್ರೇರಣೆ ನೀಡಿದಂತಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ ಎಂದರು.

ADVERTISEMENT

ಯಾವುದೇ ಬಿಷಪ್‌ಗಳು ಈ ಹಿಂದೂ ಕ್ರಿಶ್ಚಿಯನ್‌ ಜಾತಿಗಳ ಬಗ್ಗೆ ಈವರೆಗೆ ಹೇಳಿಕೆ ನೀಡಿಲ್ಲ. ಹಿಂದೂ ಉಪಜಾತಿಗಳಲ್ಲಿ ಕ್ರಿಶ್ಚಿಯನ್‌ ಎಂದು ನಮೂದಿಸಿದರೆ ಅವರಿಗೆ ಮೀಸಲಾತಿ ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಘೋಷಿಸಬೇಕು ಎಂದು ಸಭೆ ಆಗ್ರಹಿಸಿದೆ ಎಂದರು. 

ಮಾಡೂರು ಶಿವಗಿರಿ ಮಠದ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಕಾಣಿಯೂರು ಕ್ಷೇತ್ರದ ಮಹಾಬಲೇಶ್ವರ ಸ್ವಾಮೀಜಿ, ಗುರುಪುರ ಜಂಗಮ ಮಠದ ರುದ್ರಮುನಿ ಮಹಾಸ್ವಾಮೀಜಿ,  ಓಂಶ್ರೀ  ಮಠದ ಮಾತಾಶ್ರೀ ಓಂಶ್ರೀ ಶಿವಜ್ಞಾನಮಯಿ ಸರಸ್ವತಿ, ಓಂಶ್ರೀ ವಿದ್ಯಾನಂದ ಸರಸ್ವತಿ, ಶಿವಾನಂದ ಸ್ವಾಮೀಜಿ ಮುಳಿಯ, ಚಿತ್ರಾಪುರ ಮಠದ ವಿದ್ಯೇಂದ್ರತೀರ್ಥ ಶ್ರೀಪಾದ, ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್‌, ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕೆ.ಟಿ. ಉಲ್ಲಾಸ್ ಭಾಗವಹಿಸಿದ್ದರು.

ತರಾತುರಿಯ ಸಮೀಕ್ಷೆ ಬಗ್ಗೆ ಆತಂಕವಿದೆ. ಆಯೋಗ ಮರುಚಿಂತನೆ ನಡೆಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇಸಿಗೆಯಲ್ಲಿ ಸಮೀಕ್ಷೆ ನಡೆಸುವುದು ಉತ್ತಮ.
– ರಾಜಶೇಖರಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.