ADVERTISEMENT

‘ಧರ್ಮಾಚರಣೆ ಮಾಡಿ ಸಂಘಟಿತರಾಗಿ’

2 ದಿನಗಳ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ ಆರಂಭ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 14:07 IST
Last Updated 8 ಫೆಬ್ರುವರಿ 2020, 14:07 IST
ಮಂಗಳೂರಿನ ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ಆರಂಭವಾದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನವನ್ನು ಸನಾತನ ಸಂಸ್ಥೆಯ ರಮಾನಂದ ಗೌಡ ಉದ್ಘಾಟಿಸಿದರು.
ಮಂಗಳೂರಿನ ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ಆರಂಭವಾದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನವನ್ನು ಸನಾತನ ಸಂಸ್ಥೆಯ ರಮಾನಂದ ಗೌಡ ಉದ್ಘಾಟಿಸಿದರು.   

ಮಂಗಳೂರು: ಅಖಂಡ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಧರ್ಮಾಚರಣೆ ಮಾಡಿ ಸಂಘಟಿತರಾಗಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶನಿವಾರ ನಗರದ ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಆರಂಭವಾದ ಪ್ರಾಂತೀಯ ಹಿಂದೂ ಅಧಿವೇಶನದಲ್ಲಿ ಅವರು ಮಾತನಾಡಿದರು.

ಭಾರತವು ಜಗತ್ತಿಗೆ ದೇವರಕೋಣೆ. ದೇವರು ಮತ್ತು ದೈವಗಳನ್ನು ಪೂಜಿಸುವ ಶ್ರೇಷ್ಠವಾದ ಭಾರತೀಯ ಸಂಸ್ಕೃತಿ. ಇಡೀ ಮಾನವ ಕುಲವನ್ನು ಸಾತ್ವಿಕಗೊಳಿಸಲು ಮತ್ತು ಜೀವನದ ಉದ್ಧಾರವಾಗಲು ಸನಾತನ ಹಿಂದೂ ಧರ್ಮದಲ್ಲಿ ಹೇಳಲಾಗುವ ಪ್ರತಿಯೊಂದು ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿದರೆ, ವ್ಯಕ್ತಿಯ ಜತೆಗೆ ಸಮಾಜ, ಇಡೀ ವಿಶ್ವಕ್ಕೇ ಸಾತ್ವಿಕ ಮತ್ತು ಸುಖ ಜೀವನ ದೊರೆಯಲಿದೆ ಎಂದು ಹೇಳಿದರು.

ADVERTISEMENT

ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕ ಗುರುಪ್ರಸಾದ್ ಗೌಡ ಮಾತನಾಡಿ, ‘ಹಿಂದೂ ಅಧಿವೇಶನದ ಉದ್ದೇಶವು ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಂಡಿಸುವುದಾಗಿದೆ. ಹಿಂದೂ ರಾಷ್ಟ್ರದ ಬೇಡಿಕೆಯು ಕಾನೂನು ಬಾಹಿರವಲ್ಲ. ಕಾನೂನು ಚೌಕಟ್ಟಿನಲ್ಲಿ ಸಂವಿಧಾನಾತ್ಮಕವಾಗಿ ಬೇಡಿಕೆಯನ್ನು ಮುಂದಿಡಬೇಕು. ಜಗತ್ತಿನಲ್ಲಿ ಹಿಂದೂಗಳಿಗೆ ಒಂದೇ ಒಂದು ರಾಷ್ಟ್ರವಿಲ್ಲ. ಹಿಂದೂ ರಾಷ್ಟ್ರದ ವಿಚಾರ ಭಾರತ ಮಾತ್ರವಲ್ಲದೇ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ’ ಎಂದು ತಿಳಿಸಿದರು.

ಸೆಕ್ಯುಲರ್ ವ್ಯವಸ್ಥೆಯಿಂದಾಗಿ ಹಿಂದೂ ಧರ್ಮದ ಮೇಲೆ ಅನ್ಯಾಯವಾಗುತ್ತಿದೆ. ಹಿಂದೂ ರಾಷ್ಟ್ರದ ಬೇಡಿಕೆಯು ರಾಜಕೀಯ ವಿಚಾರವಲ್ಲದೇ, ಧರ್ಮಪ್ರೇಮಿ ಹಿಂದೂಗಳ ಮತ್ತು ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಮತ್ತು ಮಾನವ ಕುಲದ ಕಲ್ಯಾಣಕ್ಕಾಗಿ ಇದೆ ಎಂದು ಅಭಿಪ್ರಾಯಪಟ್ಟರು.

ಸನಾತನ ಸಂಸ್ಥೆಯ ರಮಾನಂದ ಗೌಡ, ‘ಪ್ರಸ್ತುತ ದೇಶವು ಸಂಧಿಕಾಲದಲ್ಲಿ ಹಾದುಹೋಗುತ್ತಿದೆ. ಧರ್ಮ ಸಂಸ್ಥಾಪನೆಯ ಕಾಲವು ಸಮೀಪಿಸಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ತನು, ಮನ, ಧನದ ತ್ಯಾಗದ ಜತೆಗೆ ಭಗವಂತನ ಆಶೀರ್ವಾದವೂ ಅಗತ್ಯವಿದೆ. ಇದಕ್ಕಾಗಿ ಶ್ರದ್ಧಾ ಭಕ್ತಿಯನ್ನು ಹೆಚ್ಚಿಸಬೇಕಾಗಿದೆ’ ಎಂದರು.

‘ಮಕ್ಕಳಿಗೆ ಭಗವದ್ಗೀತೆ ಕಲಿಸಿ’

ಮುಂದಿನ ಪೀಳಿಗೆಯನ್ನು ಸಾತ್ವಿಕಗೊಳಿಸಬೇಕಾದರೆ ಮಕ್ಕಳಿಗೆ ಶಿಕ್ಷಣದಲ್ಲಿ ಭಗವದ್ಗೀತೆಯನ್ನು ಕಲಿಸಿ, ದೇಶದ ಭವಿಷ್ಯವನ್ನು ಸದೃಢ ಮಾಡಬೇಕಾಗಿದೆ ಎಂದು ವಕೀಲ ಕೃಷ್ಣಮೂರ್ತಿ ಹೇಳಿದರು.

‘ಇಂದು ಭಾರತವನ್ನು ವಿಭಜಿಸಲಾಗುತ್ತದೆ. ಮತಾಂತರ, ಲವ್ ಜಿಹಾದ್, ಹಿಂದೂ ಕಾರ್ಯಕರ್ತರ ಹತ್ಯೆಯಿಂದ ಹಿಂದೂ ಧರ್ಮದ ಮೇಲೆ ಆಘಾತವಾಗುತ್ತಿದೆ. ನಾಗರಿಕ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಆಸ್ತಿಪಾಸ್ತಿಗಳನ್ನು ಹಾನಿ ಮಾಡಲಾಗುತ್ತಿದೆ. ಅಖಂಡ ವಿಶ್ವಕ್ಕೆ ಶಾಂತಿಯನ್ನು ನೀಡಿದ ಧರ್ಮ ಅಂದರೆ ಸನಾತನ ಹಿಂದೂ ಧರ್ಮ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.