ADVERTISEMENT

ಮಂಗಳೂರು: ಹೊಸಗುಡ್ಡ ಹತ್ತಿ ಇಳಿಯುವ ‘ಸಾಹಸ’

ಒಂದೆಡೆ ರಾಷ್ಟ್ರೀಯ ಹೆದ್ದಾರಿ, ಮತ್ತೊಂದು ತುದಿಯಲ್ಲಿ ರೈಲು ನಿಲ್ದಾಣ; ನಡುವೆ ಇಕ್ಕಟ್ಟಿನ ಪ್ರದೇಶ

ವಿಕ್ರಂ ಕಾಂತಿಕೆರೆ
Published 1 ಮಾರ್ಚ್ 2024, 6:58 IST
Last Updated 1 ಮಾರ್ಚ್ 2024, 6:58 IST
ಬದಿಯಲ್ಲಿ ಹತ್ತಾರು ಅಡಿ ಆಳವಿದ್ದರೂ ಇಲ್ಲಿ ರಸ್ತೆಗೆ ಗೋಡೆ ಇಲ್ಲ  
ಬದಿಯಲ್ಲಿ ಹತ್ತಾರು ಅಡಿ ಆಳವಿದ್ದರೂ ಇಲ್ಲಿ ರಸ್ತೆಗೆ ಗೋಡೆ ಇಲ್ಲ     

ಮಂಗಳೂರು: ಘಾಟ್ ಪ್ರದೇಶದಂತಹ ಏರು ಮತ್ತು ಇಳಿತ, ದಿಢೀರ್ ತಿರುವುಗಳು. ವಾಹನ ಚಾಲಕರು ಒಂದಿಷ್ಟು ಎಚ್ಚರ ತಪ್ಪಿದರೂ ಅಪಾಯಕ್ಕೆ ಸಿಲುಕುವ ಆತಂಕ. 

ನಗರದ ಕಣ್ಣೂರು ವಾರ್ಡ್‌ನ ಪೇರ್ಲ ಹೊಸಗುಡ್ಡದ ಸುಮಾರು ಅರ್ಧ ಕಿಲೊಮೀಟರ್ ಅಂತರದ ರಸ್ತೆ ಬದಿಯ ಪರಿಸ್ಥಿತಿ ಇದು. 

ರೈಲ್ವೆ ಇಲಾಖೆಗೆ ಸೇರಿದ ಜಾಗಕ್ಕೆ ಹೊಂದಿಕೊಂಡಿರುವ ಸ್ಥಳ ಪೇರ್ಲ. ಇಲ್ಲಿನ ಹೊಸಪೇರ್ಲದಲ್ಲಿ ವಾಹನ ಸಂಚಾರಕ್ಕೆ ತೊಂದರೆ ಇಲ್ಲ. ಆದರೆ ಹೊಸಗುಡ್ಡದಲ್ಲಿ ಪ್ರತಿಕ್ಷಣವೂ ಅಪಾಯ ಕಾಯುತ್ತಿದೆ.

ADVERTISEMENT

ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್ ಅಂಡರ್ ಪಾಸ್‌ ಸಮೀಪದಲ್ಲಿ, ಗಿಡ–ಮರಗಳು ತೋರಣ ಕಟ್ಟಿದಂತಿರುವ ರಸ್ತೆಯಲ್ಲಿ ಸಾಗಿ ಗುಡ್ಡ ಹತ್ತಿ ಇಳಿದರೆ ವೀರನಗರಕ್ಕೆ ಹೋಗುವ ದಾರಿ ಸಿಗುತ್ತದೆ. ಸ್ವಲ್ಪ ಮುಂದೆ ಸಾಗಿದರೆ ಕಂಕನಾಡಿ ರೈಲು ನಿಲ್ದಾಣ. ಪಡೀಲ್ ಪ್ರದೇಶವನ್ನು ವೀರನಗರದೊಂದಿಗೆ ಸುಲಭವಾಗಿ ಬೆಸೆಯುವ ರಸ್ತೆ ಪೇರ್ಲ ಹೊಸಗುಡ್ಡದ ಮೂಲಕ ಸಾಗುತ್ತದೆ.

‘ಗುಡ್ಡ’ದ ಮೇಲೆ ಅಲ್ಲಲ್ಲಿ ಮನೆಗಳು ನಿರ್ಮಾಣ ಆಗಿವೆ. ಒಂದು ಭಾಗದಲ್ಲಿ ಹತ್ತಾರು ಅಡಿಗಳಷ್ಟು ಆಳ ಪ್ರದೇಶವಿದೆ. ಈ ಪ್ರದೇಶದ ಒಂದು ಕಡೆ ಹೊರತುಪಡಿಸಿದರೆ ಉಳಿದ ಎಲ್ಲರೂ ಗೋಡೆ ನಿರ್ಮಾಣ ಮಾಡಲಿಲ್ಲ. ಹೀಗಾಗಿ ವಾಹನಗಳು ಸ್ವಲ್ಪ ನಿಯಂತ್ರಣ ಕಳೆದುಕೊಂಡರೂ ‘ಪ್ರಪಾತ’ಕ್ಕೆ ಬೀಳುವ ಸಾಧ್ಯತೆಗಳು ಇವೆ.

‘ವಾಹನಗಳು ಬಿಡಿ, ಮನೆಯಿಂದ ಯಾರಾದರೂ ವೇಗವಾಗಿ ಓಡಿಬಂದರೂ ನಿಯಂತ್ರಣ ತಪ್ಪಿದರೆ ಆಳಕ್ಕೆ ಬೀಳುವ ಸಾಧ್ಯತೆಗಳು ಇವೆ. ಈ ದಾರಿಯಾಗಿ ಹೇಗೆ ವಾಹನಗಳನ್ನು ಚಲಾಯಿಸುತ್ತಾರೆ ಎಂಬುದೇ ನನಗೆ ಅಚ್ಚರಿ ತಂದಿರುವ ವಿಷಯ. ನಾನಂತೂ ಇಲ್ಲಿ ಸೈಕಲ್ ಓಡಿಸುವುದಕ್ಕೂ ಹೆದರುತ್ತೇನೆ’ ಎಂದು ಅಳಪೆ ಕಡೆಗೆ ನಡೆದುಕೊಂಡೇ ಹೋಗುತ್ತಿದ್ದ ಶ್ರೀನಿವಾಸ ರಾವ್ ಹೇಳಿದರು.

ಪೇರ್ಲ ಹೊಸಗುಡ್ಡದಿಂದ ಪಡೀಲ್ ಕಡೆಗೆ ಬರುವ ಎರಡು ಕಡೆಗಳಲ್ಲಿ ಭಾರಿ ತಿರುವುಗಳಿವೆ. ಒಂದು ಭಾಗದಲ್ಲಿ ಆಳ ಪ್ರದೇಶ. ಮೇಲಿಂದ ಇಳಿದುಕೊಂಡು ಬರುವ ವಾಹನಗಳು ತಿರುವು ಪಡೆದುಕೊಳ್ಳುವಾಗ ನಿಯಂತ್ರಣ ತಪ್ಪಿದರೆ ಪಲ್ಟಿಯಾಗಿ ಕೆಳಗಿರುವ ಮನಗಳ ಮೇಲೆ ಬೀಳುವುದು ಖಚಿತ. ಇಲ್ಲಿ ಗೋಡೆ ನಿರ್ಮಿಸುವುದಕ್ಕೆ ಸಾಧ್ಯವಾಗದೇ ಇದ್ದರೂ ಅಪಾಯದ ಸೂಚನೆ ನೀಡುವ ಫಲಕಗಳನ್ನಾದರೂ ಅಳವಡಿಸಬೇಕು ಎಂಬುದು ಸ್ಥಳೀಯರ ಆಗ್ರಹ.

‘ವಾಸ್ತವದಲ್ಲಿ ಇಲ್ಲಿ ತಡೆಗೋಡೆ ಬೇಕೇಬೇಕು. ಅದು ಆಗುತ್ತಿಲ್ಲ. ರಾತ್ರಿ ವೇಳೆ ಅಪಾಯದ ಸಾಧ್ಯತೆಗಳು ಹೆಚ್ಚು ಇವೆ. ಆದ್ದರಿಂದ ಮಿನುಗುವ ಸ್ಟಿಕ್ಕರ್‌ಗಳನ್ನಾದರೂ ಅಳವಡಿಸಲು ಸಂಬಂಧಪಟ್ಟವರು ಮುಂದಾಗಬೇಕು’ ಎಂದು ಗುಡ್ಡದ ಮೇಲಿನ ಮನೆ ನಿವಾಸಿ ಮಹಿಳೆಯೊಬ್ಬರು ಹೇಳಿದರು. 

ಸೌಂದರ್ಯಕ್ಕೆ ಕಪ್ಪುಚುಕ್ಕೆ ಕಸದ ರಾಶಿ

ಈ ಭಾಗದಲ್ಲಿ ಬೃಹತ್‌ ಮರಗಳು ಮತ್ತು ಕುರುಚಲು ಕಾಡಿನಿಂದ ಕೂಡಿದ ಹಸಿರು ನಳನಳಿಸುತ್ತಿದೆ. ಸೂರು ನೆತ್ತಿನ ಮೇಲೆ ಇದ್ದಗಲೂ ವಾತಾವರಣ ತಂಪಾಗಿದೆ. ಇಂಥ ಸುಂದರ, ಆರೋಗ್ಯಕರ ವಾತಾವರಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹಾಕಿ ಕೆಲವರು ಹಾಳುಗೆಡವುತ್ತಿದ್ದಾರೆ. ರೈಲ್ವೆ ಹಳಿಯತ್ತ ಸಾಗುವ ತಿರುವಿನ ಜಾಗ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯುವ ಪ್ರದೇಶವಾಗಿ ಮಾರ್ಪಟ್ಟಿದೆ.

ಇಳಿಜಾರು ಪ್ರದೇಶದಲ್ಲಿ ಅಪಾಯಕಾರಿ ತಿರುವಿಗೆ ಗೋಡೆಯಾಗಲಿ ಸೂಚನಾ ಫಲಕವಾಗಲಿ ಇಲ್ಲ
ಹಸಿರಿನಿಂದ ಕೂಡಿದ ಸುಂದರ ಪ್ರದೇಶದ ರಸ್ತೆಬದಿಯಲ್ಲಿ ‍ಪರಿಸರ ವಾತಾವರಣವನ್ನು ಹದಗೆಡಿಸುವ ಕಸದ ರಾಶಿ
ಪ್ರಯತ್ನ ಆಗಿದೆ; ಸಮಸ್ಯೆ ಇದೆ
ಅಪಾಯ ಕಾದಿರುವ ಜಾಗದ ಕೆಲವು ಭಾಗಗಳು ಖಾಸಗಿಯವರಿಗೆ ಸೇರಿದ್ದು. ಆದ್ದರಿಂದ ಗೋಡೆ ನಿರ್ಮಿಸಲು ಅನೇಕ ತೊಂದರೆಗಳು ಇವೆ. ಈ ಕುರಿತು ಅನೇಕ ಸುತ್ತಿನ ಮಾತುಕತೆ ನಡೆದಿದೆ. ಇದು ಹೆದ್ದಾರಿಯನ್ನು ಸುಲಭವಾಗಿ ಸಂಪರ್ಕಿಸುವ ರಸ್ತೆಯಾಗಿರುವುದರಿಂದ ಬಹಳ ಮಂದಿ ಈ ಮೂಲಕವೇ ಸಾಗಲು ಬಯಸುತ್ತಾರೆ. ಹೀಗಾಗಿ ಈ ರಸ್ತೆಯ ಬಳಕೆ ಈಚೆಗೆ ತುಂಬ ಹೆಚ್ಚಾಗಿದೆ. ಅಪಾಯಕಾರಿ ತಿರುವು ಇರುವಲ್ಲಿ ಮತ್ತು ಆಳ ಇರುವಲ್ಲಿ ವಾಹನ ಸವಾರರಿಗೆ ಅನುಕೂಲ ಆಗುವಂಥ ಸೌಲಭ್ಯಗಳನ್ನು ಕಲ್ಪಿಸಲಾಗುವುದು. -ಚಂದ್ರಾವತಿ ವಿಶ್ವನಾಥ್ ಮಹಾನಗರ ಪಾಲಿಕೆ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.