ADVERTISEMENT

ಮಂಗಳೂರು: ಅಗಲಿದ ಮುಮ್ತಾಜ್‌ ಅಲಿಗೆ ಅಭಿಮಾನಿಗಳ ಶ್ರದ್ಧಾಂಜಲಿ

ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 2:41 IST
Last Updated 8 ಅಕ್ಟೋಬರ್ 2024, 2:41 IST
<div class="paragraphs"><p>ಬಿ.ಎಂ. ಮುಮ್ತಾಜ್ ಅಲಿ</p></div>

ಬಿ.ಎಂ. ಮುಮ್ತಾಜ್ ಅಲಿ

   

ಮಂಗಳೂರು: ಅಗಲಿದ ಮುಸ್ಲಿಂ ಮುಖಂಡ, ಉದ್ಯಮಿ ಮುಮ್ತಾಜ್‌ ಅಲಿ ಅವರಿಗೆ ಅಭಿಮಾನಿಗಳು ಸೋಮವಾರ ಕಂಬನಿ ಮಿಡಿದರು. ಕೃಷ್ಣಾಪುರದ ಅವರ ತರವಾಡು ಮನೆಯಲ್ಲಿ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು. ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗಳನ್ನು ಕೊಂಡಾಡಿದರು.

ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದ ಅಲಿ ಬಳಿಕ ನಾಪತ್ತೆಯಾಗಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಸೇತುವೆಯ ಬಳಿ ಅವರು ಕಾರು ಭಾನುವಾರ ಪತ್ತೆಯಾಗಿತ್ತು. ಸೋಮವಾರ ಬೆಳಿಗ್ಗೆ 10.10ರ ಸುಮಾರಿಗೆ ಅವರ ದೇಹವು ಫಲ್ಗುಣಿ ನದಿಯಲ್ಲಿ ಪತ್ತೆಯಾಯಿತು. ಅಲಿ ಅವರ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತುತ್ತಿದ್ದಂತೆಯೇ ಸ್ಥಳದಲ್ಲಿದ್ದ ಅಲಿ ಕುಟುಂಬಸ್ಥರಿಗೆ ದುಃಖ ಉಮ್ಮಳಿಸಿ ಬಂತು. ಅಲ್ಲಿ ಸೇರಿದ್ದ ಅಭಿಮಾನಿಗಳು ಕಣ್ಣೀರಿಡುತ್ತಲೇ ಮೃತದೇಹವನ್ನು ಆಸ್ಪತ್ರೆಗೆ ಒಯ್ಯಲು ಹೆಗಲು ಕೊಟ್ಟರು.

ADVERTISEMENT

ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ ಬಳಿಕ ಮುಮ್ತಾಜ್ ಅಲಿ ಅವರ ಪಾರ್ಥೀವ ಶರೀರವನ್ನು ಕೃಷ್ಣಾಪುರ ಚೊಕ್ಕಬೆಟ್ಟುವಿನ ತರವಾಡು ಮನೆಗೆ ತರಲಾಯಿತು. ಇದಕ್ಕೂ ಮುನ್ನವೇ ಅಲಿ ಅವರ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಖಾಜಿ ಇಬ್ರಾಹಿಂ ಮುಸ್ಲಿಯಾರ್ ಅವರು ಅಂತಿಮ ವಿಧಿಗಳನ್ನು ನಡೆಸಿಕೊಟ್ಟರು. ಕೃಷ್ಣಾಪುರದ ಈದ್ಗಾ ಮಸೀದಿಯ ಖಬರಸ್ಥಾನದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು. 

ಶೋಧ ಕಾರ್ಯಕ್ಕೆ ಮೆಚ್ಚುಗೆ: ಅಲಿ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನವಿದ್ದುದರಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಕರಾವಳಿ ರಕ್ಷಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡಗಳು ಫಲ್ಗುಣಿ ನದಿಯಲ್ಲಿ ಶೋಧ ನಡೆಸಿದ್ದವು. ಅಲ್ಲದೇ ಮುಳುಗು ತಜ್ಞ ಈಶ್ವರ್ ಮಲ್ಪೆಯವರೂ ಶೋಧ ಕಾರ್ಯಕ್ಕೆ ಕೈಜೋಡಿಸಿದ್ದರು. ಭಾನುವಾರ ಬೆಳಿಗ್ಗೆ 8 ಗಂಟೆಗೆ ಶುರುವಾಗಿದ್ದ ಶೋಧ ಕಾರ್ಯ ರಾತ್ರಿ 10ರವರೆಗೂ ಮುಂದುವರಿದಿತ್ತು. ದೋಣಿಯ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಸೋಮವಾರ ಮುಂಜಾನೆ 6 ಗಂಟೆಯಿಂದಲೇ ಮತ್ತೆ ಹುಡುಕಾಟ ಮುಂದುವರಿಸಿದ್ದರು. ಅವರ ಶ್ರಮಕ್ಕೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.