ವಿಟ್ಲ (ದಕ್ಷಿಣ ಕನ್ನಡ): ರಂಜಾನ್ ಉಪವಾಸವಿದ್ದ ಕಾರಣ, ಮುಸ್ಲಿಂ ಸ್ನೇಹಿತರು ಮದುವೆಯಲ್ಲಿ ಊಟ ಮಾಡಲಿಲ್ಲ ಎಂಬ ಕಾರಣಕ್ಕೆ ಇಲ್ಲಿಯ ಮದುಮಗನೊಬ್ಬ ಊರಿನ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದು, ಇದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಹಿಜಾಬ್, ಹಲಾಲ್- ಜಟ್ಕಾ ಕಟ್, ವ್ಯಾಪಾರ ಬಹಿಷ್ಕಾರದಂತಹ ಬೆಳವಣಿಗೆಗಳ ಮಧ್ಯದಲ್ಲೇ ಸಮೀಪದ ಬೈರಿಕಟ್ಟೆ ಎಂಬ ಪುಟ್ಟ ಊರು ಇದಕ್ಕೆ ಸಾಕ್ಷಿಯಾಗಿದೆ.
‘ಗೆಳೆಯರ ಬಳಗ– ಬೈರಿಕಟ್ಟೆ’ಯ ಸದಸ್ಯ ಚಂದ್ರಶೇಖರ ಜೆಡ್ಡು ಅವರ ವಿವಾಹ ಏ.24 ರಂದು ನಡೆಯಿತು. ರಂಜಾನ್ ತಿಂಗಳಲ್ಲಿ ಉಪವಾಸ ಆಚರಿಸುವುದರಿಂದಮುಸ್ಲಿಂ ಸಮುದಾಯದವರು ಮದುವೆ ಕಾರ್ಯಕ್ರಮದಲ್ಲಿ ಊಟ ಮಾಡಿಲ್ಲ ಎಂಬ ಕಾರಣದಿಂದ, ಚಂದ್ರಶೇಖರ್ ಅವರು ಬೈರಿಕಟ್ಟೆ ಜುಮ್ಮಾ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದರು.
‘ಬೈರಿಕಟ್ಟೆ ಸೌಹಾರ್ದಕ್ಕೆ ಹೆಸರಾಗಿದೆ. ಶಾಮಿಯಾನ ಹಾಕಲು, ವಿದ್ಯುತ್ ದುರಸ್ತಿ ಕಾರ್ಯಕ್ಕೆ ಹಿಂದೂ, ಮುಸ್ಲಿಂ ಎನ್ನದೆ ಎಲ್ಲ ಧರ್ಮೀಯರ ಮನೆಗಳಿಗೆ ಹೋಗುತ್ತೇನೆ. ನಮ್ಮ ಗೆಳೆಯರ ಬಳಗದಲ್ಲಿ ಎಲ್ಲ ಸಮುದಾಯದವರೂ ಇದ್ದಾರೆ. ಊರಿನಲ್ಲಿ ಅನ್ಯೋನ್ಯ ಬಾಂಧವ್ಯ ಇದೆ. ಮುಸ್ಲಿಂ ಸ್ನೇಹಿತರಿಗಾಗಿ ಇಫ್ತಾರ್ ಕೂಟ ಹಮ್ಮಿಕೊಂಡಿದ್ದೆ’ ಎಂದು ನವ ವಿವಾಹಿತ ಚಂದ್ರಶೇಖರ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.