ADVERTISEMENT

ಉಪ್ಪಿನಂಗಡಿ| ನೇತ್ರಾವತಿ ಒಡಲಲ್ಲೇ ಅಕ್ರಮ ಗಣಿಗಾರಿಕೆ

ಅಣೆಕಟ್ಟೆ ಅಡಿಯಲ್ಲೇ ಯಂತ್ರದಿಂದ ಅಗೆತ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 23:51 IST
Last Updated 4 ಜೂನ್ 2023, 23:51 IST
ಉಪ್ಪಿನಂಗಡಿ ಸಮೀಪ ಪೆರ್ನೆ ಬಳಿ ನೇತ್ರಾವತಿ ನದಿಯಲ್ಲಿ ಯಂತ್ರದ ಮೂಲಕ ಬಂಡೆಕಲ್ಲುಗಳನ್ನು ಒಡೆಯಲಾಗುತ್ತಿದೆ
ಉಪ್ಪಿನಂಗಡಿ ಸಮೀಪ ಪೆರ್ನೆ ಬಳಿ ನೇತ್ರಾವತಿ ನದಿಯಲ್ಲಿ ಯಂತ್ರದ ಮೂಲಕ ಬಂಡೆಕಲ್ಲುಗಳನ್ನು ಒಡೆಯಲಾಗುತ್ತಿದೆ   

ಸಿದ್ದಿಕ್ ನೀರಾಜೆ

ಉಪ್ಪಿನಂಗಡಿ: ಅಕ್ರಮ ಮರಳುಗಾರಿಕೆ ಮೂಲಕ ನೇತ್ರಾವತಿಯ ಒಡಲನ್ನು ಬರಿದಾಗಿಸುತ್ತಿರುವ ಮಧ್ಯೆಯೇ ಪೆರ್ನೆ ಬಳಿ ನದಿಯಲ್ಲಿರುವ ಬೃಹತ್ ಬಂಡೆ ಕಲ್ಲುಗಳನ್ನು ಒಡೆದು ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.

ಪೆರ್ನೆ ಮತ್ತು ತೆಕ್ಕಾರು ಗ್ರಾಮದಲ್ಲಿ ನೇತ್ರಾವತಿ ನದಿಗೆ ಸುಮಾರು ₹ 50 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಯೋಜನೆ ಅಡಿಯಲ್ಲಿ ಕಿಂಡಿ ಅಣೆಕಟ್ಟೆ ಮತ್ತು ಸೇತುವೆ ನಿರ್ಮಾಣ ನಡೆಯುತ್ತಿದೆ. ಇದರ ಪಕ್ಕದಲ್ಲೇ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಬೃಹತ್ ಯಂತ್ರಗಳನ್ನು ಬಳಸಿ ಬಂಡೆಕಲ್ಲುಗಳನ್ನು ಒಡೆಯಲಾಗುತ್ತಿದೆ. ಒಡೆದ ಕಲ್ಲುಗಳನ್ನು ಯಂತ್ರದ ಮೂಲಕ ಹೊರ ತೆಗೆಯಲಾಗುತ್ತಿದೆ. ಕಲ್ಲು ಸಿಡಿಸುವಾಗ ಭಾರಿ ಶಬ್ದದಿಂದ ಪರಿಸರದಲ್ಲಿ ಕಂಪನ ಉಂಟಾಗುತ್ತಿದೆ ಎಂದು ಸ್ಥಳೀಯತರು ದೂರಿದ್ದಾರೆ.

ADVERTISEMENT

ನಿರ್ಮಾಣ ಹಂತದಲ್ಲಿರುವ ಕಿಂಡಿ ಅಣೆಕಟ್ಟೆ, ಸೇತುವೆ ಸಮೀಪದಲ್ಲೇ ಸ್ಫೋಟ ಮಾಡುತ್ತಿರುವುದರಿಂದ ಅಣೆಕಟ್ಟೆಯ ಅಡಿಪಾಯಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ರೈತರ ಉಪಯೋಗಕ್ಕೆ ಅಣೆಕಟ್ಟೆ ಲಭಿಸುವ ಮುನ್ನವೇ ಬಿರುಕು ಬಿಡಲಾರಂಭಿಸಿದರೆ ಸರ್ಕಾರದ ಯೋಜನೆ ವ್ಯರ್ಥವಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಮರಳುಗಾರಿಕೆ ತಡೆ ಹಿಡಿಯಲಾಗಿತ್ತು: ಇದೇ ಪರಿಸರದಲ್ಲಿ ಕೆಲ ತಿಂಗಳ ಹಿಂದೆ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿತ್ತು. ಅಣೆಕಟ್ಟೆ ಮತ್ತು ಸೇತುವೆಗೆ ಅಪಾಯ ಉಂಟಾಗುವ ಸಾಧ್ಯತೆಯ ಬಗ್ಗೆ ಮನಗಂಡ ಗ್ರಾಮಸ್ಥರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದರಿಂದ ಅದನ್ನು ತಡೆ ಹಿಡಿಯಲಾಗಿತ್ತು. ಆದರೆ, ಇದೀಗ ಕಲ್ಲು ಗಣಿಗಾರಿಕೆಯನ್ನು ತಡೆಯುವ ಪ್ರಯತ್ನ ಆಗಿಲ್ಲ ಎಂಬ ದೂರು ಕೇಳಿಬಂದಿದೆ.

ಅಣೆಕಟ್ಟೆ ಹೆಸರ ಅಕ್ರಮ ದಂಧೆ: ಪೆರ್ನೆ-ತೆಕ್ಕಾರು ಮಧ್ಯೆ ನಡೆಯುತ್ತಿರುವ ಅಣೆಕಟ್ಟೆ ಮತ್ತು ಸೇತುವೆ ಬಹುಕಾಲದ ಬೇಡಿಕೆಯಾಗಿದ್ದು, ಸುಮಾರು ₹ 50 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ಸೇತುವೆಯಿಂದ ಕೇವಲ 50 ಮೀಟರ್ ಅಂತರದಲ್ಲಿ ಕಲ್ಲು ಒಡೆಯಲಾಗುತ್ತಿದೆ. ಇದೊಂದು ಅಕ್ರಮ ದಂಧೆಯಾಗಿದ್ದು, ಇಲ್ಲಿ ತೆಗೆಯುವ ಕಲ್ಲುಗಳನ್ನು ಬೇರೆ ಕಡೆಗೆ ಸಾಗಿಸಲಾಗುತ್ತಿದೆ. ಸಂಬಂಧಿಸಿದ ಇಲಾಖೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳಬೇಕು ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೋಬ್ಬರು ಆಗ್ರಹಿಸಿದ್ದಾರೆ.

ಉಪ್ಪಿನಂಗಡಿ ಸಮೀಪದ ಪೆರ್ನೆ ಬಳಿ ನೇತ್ರಾವತಿ ನದಿಯಲ್ಲಿ ಒಡೆದು ಕಲ್ಲುಗಳನ್ನು ಯಂತ್ರದ ಮೂಲಕ ಲಾರಿಗೆ ತುಂಬಿಸುತ್ತಿರುವುದು

ಸೇತುವೆ ಅಡಿಯಲ್ಲಿ ಯಂತ್ರ ಬಳಸಿ ಗಣಿಗಾರಿಕೆ ‌ಬಂಡೆ ಒಡೆಯುವಾಗ ಪರಿಸರದಲ್ಲಿ ಕಂಪನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.