ADVERTISEMENT

ಫೋನ್ ಇನ್ ಕಾರ್ಯಕ್ರಮ | ಯುಜಿಡಿ ದುರ್ವಾಸನೆ; ರಸ್ತೆಯಲ್ಲೇ ಪಾರ್ಕಿಂಗ್‌

ನಗರಪಾಲಿಕೆಯಲ್ಲಿ ಹೋಟೆಲ್‌, ಕೆಫೆಗಳ ಮುಂದೆ ವಾಹನ ನಿಲ್ಲಿಸುವುದಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:51 IST
Last Updated 29 ಜನವರಿ 2026, 7:51 IST
ಫೊನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ, ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌ ಹಾಗೂ ಮುಖ್ಯ ಎಂಜಿನಿಯರ್ ನರೇಶ್ ಶೆಣೈ ಪಾಲ್ಗೊಂಡಿದ್ದರು  
ಫೊನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ, ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌ ಹಾಗೂ ಮುಖ್ಯ ಎಂಜಿನಿಯರ್ ನರೇಶ್ ಶೆಣೈ ಪಾಲ್ಗೊಂಡಿದ್ದರು     

ಮಂಗಳೂರು: ರಸ್ತೆಯಲ್ಲಿ ಅಥವಾ ಫುಟ್‌ಪಾತ್ ಮೇಲೆ ವಾಹನ ನಿಲ್ಲಿಸುವುದರಿಂದ ಆಗುವ ಸಮಸ್ಯೆಗಳು ಮತ್ತು ನಿರ್ವಹಣೆ ಇಲ್ಲದ ಮೋರಿಗಳ ದುರ್ವಾಸನೆ ಮಹಾನಗರಪಾಲಿಕೆಯಲ್ಲಿ ಬುಧವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾರ್ದನಿಸಿತು. 

ಮಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರಿಗೆ ಬಂದ ಕರೆಗಳಲ್ಲಿ ಹೆಚ್ಚಿನವು ಅನಧಿಕೃತ ಪಾರ್ಕಿಂಗ್ ಮತ್ತು ಯುಜಿಡಿ ಅವ್ಯವಸ್ಥೆಗೆ ಸಂಬಂಧಿಸಿದ್ದು ಆಗಿದ್ದವು. ಅಪಾರ್ಟ್‌ಮೆಂಟ್‌ಗಳಲ್ಲಿ ಕೊಳಚೆ ನೀರನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ತೊಂದರೆಯಾಗುತ್ತಿರುವುದರ ಕುರಿತ ದೂರುಗಳೂ ಬಂದವು. 

ಸ್ಟ್ಯಾನಿ ಪಿಂಟೊ ಅವರು ಮುಕ್ಕದಲ್ಲಿ ಕೊಳಚೆ ನೀರು ಹರಿಯುತ್ತಿರುವುದನ್ನು ಗಮನಕ್ಕೆ ತಂದರು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಚರಂಡಿ ವ್ಯವಸ್ಥೆ ಇದೆ. ಆದರೆ ಅದು ಹೆದ್ದಾರಿ ಮೇಲೆ ಬಿದ್ದ ಮಳೆ ನೀರು ಹರಿದು ಹೋಗಲು ಮಾತ್ರ ಅನುಕೂಲಕರವಾಗಿದೆ. ಇತ್ತೀಚೆಗೆ ಸುತ್ತಮುತ್ತ ಅಪಾರ್ಟ್‌ಮೆಂಟ್‌ಗಳಿಂದ ಬರುವ ಕೊಳಚೆ ನೀರು ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ ಎಂದು ಹೇಳಿದರು.

ADVERTISEMENT

ಜಪ್ಪಿನಮೊಗರು ನಿವಾಸಿ ಚಂದ್ರಶೇಖರ ಶೆಟ್ಟಿ, ಕೃಷ್ಣಾಪುರದ ಮರಿಯ ಡಿಸೋಜ, ನವೀನ್‌ ಬೈಕಂಪಾಡಿ, ಮಿಷನ್ ಕಂಪೌಂಡ್‌ನ ಸುಭಾಷಿಣಿ ಭಟ್, ಶುಭಾ ಸುರತ್ಕಲ್ ಕಾನ ಕಟ್ಲ ಮುಂತಾದವರು ಕೂಡ ಇಂಥದೇ ಸಮಸ್ಯೆಗಳನ್ನು ಮುಂದಿಟ್ಟರು. 

ಈ ಕುರಿತು ಪತ್ರಕರ್ತರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ, ಮಲಿನ ನೀರನ್ನು ಸಮರ್ಪಕವಾಗಿ ಸಂಸ್ಕರಣಾ ಘಟಕಗಳಿಗೆ ಕಳುಹಿಸುವಂತೆ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘಗಳಿಗೆ ಸೂಚಿಸಲಾಗಿದೆ. ಸೂಚನೆಯನ್ನು ‍ಪಾಲಿಸದವರನ್ನು ಪತ್ತೆಮಾಡಿ ಶುಲ್ಕ ಹೇರಲಾಗುತ್ತಿದೆ ಎಂದರು. 

ಪಾರ್ಕಿಂಗ್ ಕಿರಿಕಿರಿ

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವವರ ಕುರಿತು ಫೋನ್‌ ಇನ್‌ನಲ್ಲಿ ಭಾರಿ ಆಕ್ರೋಶ ಕೇಳಿಬಂತು. ಕದ್ರಿಯಲ್ಲಿರುವ ಕೆಫೆಯೊಂದರ ಮುಂದೆ ರಸ್ತೆಯಲ್ಲೇ ಕಾರುಗಳನ್ನು ನಿಲ್ಲಿಸಿ ಆಹಾರ ಸೇವಿಸಲು ಹೋಗುತ್ತಾರೆ. ಇದರಿಂದ ಪಾದಚಾರಿಗಳಿಗೂ ವಾಹನ ಚಾಲಕರಿಗೂ ಸಮಸ್ಯೆಯಾಗುತ್ತದೆ ಎಂದು ಶೈಲೇಶ್ ಕದ್ರಿ ದೂರಿದರು. ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸುವುದರಿಂದ ಇತರ ವಾಹನಗಳ ಸಾಗಾಟಕ್ಕೆ ತೊಂದರೆಯಾಗುತ್ತದೆ ಎಂದು ಮುಳಿಹಿತ್ಲು ಲಿಲ್ಲಿ ಗಿಲ್ಬರ್ಟ್ ಹೇಳಿದರು. ಹರೀಶ್ ಬೈಕಂಪಾಡಿ ಕೂಡ ಇದೇ ರೀತಿಯ ದೂರು ಹೇಳಿದರು.

‘ಜಲಸಿರಿ ಸಮಸ್ಯೆ ಆಲಿಸಿರಿ’

ಜಲಸಿರಿ ಯೋಜನೆಯಡಿ ನಗರದ ಕೆಲವು ಕಡೆಗಳಿಗೆ ನೀರು ಸಮರ್ಪಕವಾಗಿ ಲಭ್ಯ ಆಗುತ್ತಿಲ್ಲ ಎಂದು ಹಲವರು ದೂರಿದರು. ‘ಸಮೀಪದ ಮನೆಗೆ ನೀರು ಬರುತ್ತದೆ, ನಮ್ಮಲ್ಲಿಗೆ ಮಾತ್ರ ಬರುತ್ತಿಲ್ಲ’ ಎಂದು ನಿತ್ಯಾ ಕಂಕನಾಡಿ ಹೇಳಿದರು. ಚೊಕ್ಕಬೆಟ್ಟುವಿಗೂ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂದು ಹಮೀದ್ ಸುರತ್ಕಲ್ ಹೇಳಿದರು. ಕೇವಲ ಎರಡು ತಾಸು ನೀರು ಬರುತ್ತದೆ. ಸಮೀಪದ ಟ್ಯಾಂಕ್‌ನಿಂದ ಟ್ಯಾಂಕರ್‌ನಲ್ಲಿ ನೀರು ಬೇರೆ ಕಡೆಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ರಮೇಶ್ ಅಳಪೆ ಹೇಳಿದರು. 

‘ನಗರದ ಕೆಲವು ಎತ್ತರದ ಪ್ರದೇಶಗಳಲ್ಲಿ ಜಲಸಿರಿ ಯೋಜನೆಯ ನೀರು ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ಅದಕ್ಕೆ ಪರಿಹಾರ ಕಾಣುವ ಪ್ರಯತ್ನ ನಡೆಯುತ್ತಿದೆ. ಜನಸಂಖ್ಯೆ ಮತ್ತು ವಾಣಿಜ್ಯ ಮಳಿಗೆಗಳ ಹೆಚ್ಚಳದಿಂದಾಗಿ ಬೇಸಿಗೆಯಲ್ಲಿ ಪ್ರತಿವರ್ಷ ಸಮರ್ಪಕ ನೀರು ಸರಬರಾಜು ದೊಡ್ಡ ಸವಾಲು. ಜಿಲ್ಲೆಯ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಗುರುವಾರ ಸಭೆ ಕರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬಿಳಿ ಕೂದಲಿನವರು ಎಂದು ಮಾಡಿ ಪ್ಲೀಸ್‌...

ಕೊಟ್ಟಾರದ ಪ್ರೆಸಿಲ್ಲ ಫೆರ್ನಾಂಡಿಸ್ ಅವರು ತಮ್ಮ ಮತ್ತು ಒಟ್ಟಾರೆ ಹಿರಿಯ ನಾಗರಿಕರ ಸಮಸ್ಯೆಯನ್ನು ಹಾಸ್ಯದ ಲೇಪ ಇರುವ ಶೈಲಿಯಲ್ಲಿ ಮಂಡಿಸಿದರು. ‘ಬಸ್‌ಗಳಲ್ಲಿ ವಯಸ್ಸಾದವರಿಗೆ ಆಸನಗಳನ್ನು ಮೀಸಲಿಟ್ಟಿರುತ್ತಾರೆ. ಆದರೆ ನಿಲ್ದಾಣದಿಂದ ಬಸ್ ಹೊರಡುವಾಗಲೇ ಅವುಗಳನ್ನು ಬೇರೆಯವರು ಆಕ್ರಮಿಸಿಕೊಂಡಿರುತ್ತಾರೆ. ವಯಸ್ಸಾದವರು ನಿಂತುಕೊಂಡೇ ಪ್ರಯಾಣಿಸಬೇಕಾಗಿದೆ. ಕುಳಿತವರು ಕೆಲವೊಮ್ಮೆ  ಹಿರಿಯ ನಾಗರಿಕರನ್ನು ಕಂಡರೂ ನಗಣ್ಯ ಮಾಡುತ್ತಾರೆ. ಅವರಿಗೆ ಹಿರಿಯರನ್ನು ಪತ್ತೆ ಮಾಡಲು ಆಗುತ್ತಿಲ್ಲವೋ ಏನೋ... ಆದ್ದರಿಂದ ಬರಹವನ್ನು ಬದಲಿಸಿ ತಲೆ ಬೆಳ್ಳಗಾದವರಿಗೆ ಮೀಸಲು ಎಂದು ಮಾಡಿಕೊಳ್ಳಬೇಕು...’ ಎಂದು ಪ್ರೆಸಿಲ್ಲ ಸಲಹೆ ನೀಡಿದರು.  ಇದು ಕೇಳಿ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರೂ ನಕ್ಕರು. ಉತ್ತರಿಸಿದ ಜಿಲ್ಲಾಧಿಕಾರಿ ‘ಈ ಕುರಿತು ನನಗೂ ಮಾಹಿತಿ ಬಂದಿದೆ. ಆರ್‌ಟಿಒ ಮತ್ತು ಸಂಬಂಧಪಟ್ಟ ಇತರರ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದರು. 

ಇ–ಖಾತಾ ಸಮಸ್ಯೆಗೆ ಶೀಘ್ರ ಪರಿಹಾರ

ಒಂದೂವರೆ ತಿಂಗಳಿಂದ ಇ–ಖಾತೆಗೆ ಸಂಬಂಧಿಸಿ ಉಂಟಾಗಿರುವ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗುವ ಭರವಸೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.  ಬಿಜೈಯ ಗೋಕುಲ್‌ದಾಸ್ ಅವರು ಕರೆಗೆ ಉತ್ತರಿಸಿದ ಅವರು ಈ ಭರವಸೆ ವ್ಯಕ್ತಪಡಿಸಿದರು. ಎನ್‌ಐಸಿ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ ಬಳಸಿ ಇ–ಖಾತಾ ನೀಡಲಾಗುತ್ತಿತ್ತು. ಆದರೆ ಈಚೆಗೆ ರಾಜ್ಯ ಸರ್ಕಾರ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರಲ್ಲಿ ತಾಂತ್ರಿಕ ಸಮಸ್ಯೆಗಳು ತಲೆದೋರಿವೆ ಎಂದು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ವಿವರಿಸಿದರು.  

ಉಳ್ಳಾಲ ಹೊಯ್ಗೆಯನ್ನು ನಗರದೊಂದಿಗೆ ಸಂಪರ್ಕಿಸುವ ಕಿರುಸೇತೆಯನ್ನು ಜಪ್ಪಿನಮೊಗರುವಿನಲ್ಲಿ ನೇತ್ರಾವತಿ ನದಿಯ ಹಿನ್ನೀರಿಗೆ ನಿರ್ಮಿಸುವ ಯೋಜನೆ ಇದೆ. ಇದಕ್ಕೆ ಸಿಆರ್‌ಝಡ್ ಅನುಮತಿ ಸಿಗಬೇಕು.
–ದರ್ಶನ್‌ ಎಚ್‌.ವಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.