ADVERTISEMENT

ಎನ್‍ಎಂಸಿ ನಿಬಂಧನೆಗಳ ತಿದ್ದುಪಡಿಗೆ ಐಎಂಎ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 6:03 IST
Last Updated 30 ಜುಲೈ 2021, 6:03 IST
ಡಾ.ವೆಂಕಟಾಚಲಪತಿ
ಡಾ.ವೆಂಕಟಾಚಲಪತಿ   

ಮಂಗಳೂರು: ಆಧುನಿಕ ವೈದ್ಯ ಕ್ಷೇತ್ರಕ್ಕೆ ಮಾರಕವಾಗಿರುವ ಹಾಗೂ ಅರ್ಧ ಕಲಿತ ವೈದ್ಯರನ್ನು ಸೇವೆಗೆ ಕರೆತರುವ ಮೂಲಕ ಜನರ ಜೀವದ ಜತೆಗೆ ಚೆಲ್ಲಾಟವಾಡಲು ಕಾರಣವಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯ ನಿಯಮ ಮತ್ತು ನಿಬಂಧನೆಗಳಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ.ವೆಂಕಟಾಚಲಪತಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯ್ದೆಯ ಸೆಕ್ಷನ್ 32, 50 ಮತ್ತು 51ಅನ್ನು ತೆಗೆದು ಹಾಕಬೇಕು ಎಂದರು.

ದೇಶದಲ್ಲಿ 10 ಲಕ್ಷಕ್ಕೂ ಅಧಿಕ ಅನರ್ಹ ವೈದ್ಯರಿದ್ದಾರೆ. ಪದವಿ ಪಡೆದ ವೈದ್ಯರನ್ನು ನಿಯಂತ್ರಿಸಲು ಹಲವು ಕಾನೂನುಗಳಿದ್ದರೂ, ನಕಲಿ ವೈದ್ಯರ ಹಾವಳಿ ತಡೆಗೆ ಯಾವುದೇ ಕಾಯ್ದೆಗಳಿಲ್ಲ. ಇರುವ ಕಾಯ್ದೆಗಳೂ ಪರಿಣಾಮಕಾರಿಯಾಗಿಲ್ಲ. ಕೂಡಲೇ ಸರ್ಕಾರ ಪರಿಣಾಮಕಾರಿ ಕಾಯ್ದೆ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ADVERTISEMENT

ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಮೇಲೆ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣಗಳು, ವೈದ್ಯರ ಮಾನಸಿಕ ಬಲ ಕುಗ್ಗಿಸುತ್ತಿವೆ. ಹಲ್ಲೆ ಮಾಡುವವರನ್ನು ಬೇಗನೇ ಬಂಧಿಸಿ ಶಿಕ್ಷಿಸುವ ಕಾನೂನು ಜಾರಿಗೊಳಿಸಬೇಕು. ತಪ್ಪಿತಸ್ಥರಿಗೆ ಜಾಮೀನು ಸಿಗದಂತೆ ಕಾನೂನಿನಲ್ಲಿ ಬದಲಾವಣೆ ತರಬೇಕು ಎಂದು ಸಲಹೆ ಮಾಡಿದರು.

ಕರ್ನಾಟಕ ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಯಡಿ ಆಸ್ಪತ್ರೆಗಳನ್ನು ಏಕ ಗವಾಕ್ಷಿ ಮೂಲಕ, ನೋಂದಾಯಿಸುವ ಪ್ರಕ್ರಿಯೆನ್ನು ಸರಳ ಮಾಡಬೇಕು. ಗ್ರಾಹಕ ರಕ್ಷಣಾ ಕಾನೂ ನಿನಡಿ ವೈದ್ಯರು ನೀಡಬೇಕಾದ ಪರಿಹಾರ ಧನಕ್ಕೆ ಮಿತಿ ಹೇರಬೇಕು ಎಂದು ಒತ್ತಾಯಿಸಿದರು.

ಸಿಸಿಐಎಂನ ಇತ್ತೀಚಿನ ಆದೇಶದಲ್ಲಿ ಶಲ್ಯತಂತ್ರದ ಆಯುರ್ವೇದ ಸ್ನಾತಕೋತ್ತರ ಕೋರ್ಸ್‍ಗಳಿಗೆ ಎಂಎಸ್ (ಜನರಲ್ ಸರ್ಜರಿ) ಎಂಬ ನಾಮಾಂಕಿತವನ್ನೂ ನೀಡಿದೆ. ಸಿಸಿಐಎಂ ತನ್ನ ವಿದ್ಯಾರ್ಥಿಗಳಿಗೆ ಆಧುನಿಕ ಔಷಧ ಶಸ್ತ್ರಚಿಕಿತ್ಸೆಯನ್ನು ಮತ್ತು ಅವರ ಅಭ್ಯಾಸವನ್ನು ಸ್ವತಂತ್ರವಾಗಿ ಅಭ್ಯಾಸ ಮಾಡಲು ಅವಕಾಶ ನೀಡಿದೆ. ಆಯುರ್ವೇದ, ಯುನಾನಿ ಮತ್ತಿತರ ವ್ಯವಸ್ಥೆಗಳು ತಮ್ಮದೇ ಆದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿವೆ ಮತ್ತು ಐಎಂಎ ಇದರ ಬಗ್ಗೆ ಹೆಮ್ಮೆ ಪಡುತ್ತದೆ. ಈ ನಿಟ್ಟಿನಲ್ಲಿ ಸರಕಾರ ಈ ಪ್ರಾಚೀನ ವೈದ್ಯಕೀಯ ಸಂಪತ್ತಿನ ಅತ್ಯಂತ ಶುದ್ಧ ರೂಪದ ಸಂರಕ್ಷಣೆಗೆ ಶ್ರಮವಹಿಸಬೇಕು. ಸಂಶೋಧನೆ ಮತ್ತು ಬೆಳವಣಿಗೆಗಳು ಆಯಾ ವೈದ್ಯಕೀಯ ಕ್ಷೇತ್ರಗಳಲ್ಲಿ ನಡೆಯಬೇಕು ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ವೈದ್ಯಕೀಯ ಪದ್ಧತಿಯನ್ನು ಅನುಸರಿಸಬೇಕು ಎಂದರು.

ಮಂಗಳೂರು ಐಎಂಎ ಅಧ್ಯಕ್ಷ ಎಂ.ಎ.ಆರ್.ಕುಡ್ವಾ, ಕಾರ್ಯದರ್ಶಿ ಡಾ.ಅನಿಮೇಶ್ ಜೈನ್, ಪಿಆರ್‍ಓ ಡಾ.ಜಿ.ಕೆ.ಭಟ್ ಸಂಕಬಿತ್ತಿಲು, ವೈದ್ಯ ಬರಹಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಣ್ಣಯ್ಯ ಕುಲಾಲ್, ಡಾ.ಕೆ.ಆರ್.ಕಾಮತ್, ಡಾ.ರವೀಂದ್ರ, ಡಾ.ಕುಮಾರಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.