
ಮಂಗಳೂರು: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬೆಳ್ತಂಗಡಿ ತಾಲ್ಲೂಕಿನ ಮಾಲಾಡಿ ಗ್ರಾಮಸ್ಥರು ಸೇರಿ ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ತಲಪಾಡಿಯ ನಿವಾಸಿ ಕಿರಣ್ (30) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
‘ಬೆಳ್ತಂಗಡಿ ತಾಲ್ಲೂಕಿನ ಮಾಲಾಡಿ ಗ್ರಾಮದಲ್ಲಿ ಪ್ರೇಮಾ ಶೆಟ್ಟಿ ಎಂಬುವರ ಮನೆ ಇದೆ. ಪ್ರೇಮಾ ಶೆಟ್ಟಿ ಅವರು ಕೆಲ ಸಮಯದಿಂದ ವಿದೇಶದಲ್ಲಿ ನೆಲೆಸಿದ್ದಾರೆ. ಅವರ ಮನೆಯಲ್ಲಿ ಯಾರೂ ವಾಸವಿಲ್ಲ. ಮನೆಗೆ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಾನುವಾರ ಬೆಳಿಗ್ಗೆ ಅವರ ಮನೆಗೆ ಕಳ್ಳ ಬಂದಿದ್ದು, ಆತ ಮನೆ ಪರಿಸರದಲ್ಲಿ ಓಡಾಡುವ ದೃಶ್ಯವನ್ನು ಪ್ರೇಮಾ ಅವರ ಮಗಳು ವಿದೇಶದಲ್ಲೇ ಮೊಬೈಲ್‌ನಲ್ಲಿ ವೀಕ್ಷಿಸಿದ್ದರು. ಅವರು ಸ್ಥಳೀಯ ನಿವಾಸಿ ಪ್ರಕಾಶ್ ಶೆಟ್ಟಿ ಅವರಿಗೆ ಕರೆ ಮಾಡಿದ್ದು, ತಮ್ಮ ಮನೆಗೆ ಕಳ್ಳ ಬಂದಿರುುದು ಸಿಸಿಟಿವಿ ಕ್ಯಾಮೆರಾದ ದೃಶ್ಯದಲ್ಲಿ ಕಾಣಿಸುತ್ತಿದೆ ಎಂದು ತಿಳಿಸಿದ್ದರು.’
‘ಪ್ರೇಮಾ ಶೆಟ್ಟಿ ಅವರ ಮನೆಯ ಬಳಿಗೆ ಪ್ರಕಾಶ ಶೆಟ್ಟಿ ಅವರು ಹೋಗಿ ನೋಡಿದಾಗ, ಚಾವಣಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ನಿಂತುಕೊಂಡಿದ್ದ. ಅವರನ್ನು ನೋಡಿದ ಆತ ಚಾವಣಿಯಿಂದ ಕೆಳಗೆ ಹಾರಿ ಓಡಿ ತಪ್ಪಿಸಲು ಪ್ರಯತ್ನಿಸಿದ್ದ. ಪ್ರಕಾಶ ಶೆಟ್ಟಿ ಅವರು ಆತನನ್ನು ಹಿಡಿಯಲು ಪ್ರಯತ್ನಿಸಿದ್ದರು. ಆಗ ಆತ ಕೈಯಲ್ಲಿದ್ದ ರಾಡಿನಿಂದ ಹಲ್ಲೆ ನಡೆಸಿದ್ದ. ಬಳಿಕ ಸ್ಥಳೀಯು ಸೇರಿ ಆ ವ್ಯಕ್ತಿಯನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕೃತ್ಯದ ಬಗ್ಗೆ ಪ್ರಕಾಶ ಶೆಟ್ಟಿ ಅವರು ದೂರು ನೀಡಿದ್ದು, ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ, ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಸೇರಿ ಒಟ್ಟು 13 ಪ್ರಕರಣಗಳು ದಾಖಲಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.