ಮಂಗಳೂರು: ‘ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ಥಳೀಯರ ಬೇಡಿಕೆಯಂತೆ ಆಹಾರ ಒದಗಿಸುವ ಉದ್ದೇಶದಿಂದ ಜಿಲ್ಲಾವಾರು ಮೆನು (ಆಹಾರ ಪಟ್ಟಿ) ಸಿದ್ಧಪಡಿಸಲಿದ್ದೇವೆ’ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದರು.
‘ಉಳ್ಳಾಲದ ಇಂದಿರಾ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಇಲ್ಲಿ ನೀಡುವ ಆಹಾರ ನಮಗೆ ಒಗ್ಗುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಬೇರೆ ಕಡೆಯೂ ಇಂತಹದ್ದೇ ದೂರುಗಳು ಬಂದಿವೆ. ಹಾಗಾಗಿ ಈ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದರು.
‘ರಾಜ್ಯದಲ್ಲಿ ಒಟ್ಟು 188 ಹೊಸ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಲಿದ್ದೇವೆ. ಇದು ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದರ ಪ್ರಯೋಜನ ಬಡವರಿಗೆ ಸಿಗಬೇಕು. ಕೆಲವೆಡೆ ಇಂದಿರಾ ಕ್ಯಾಂಟೀನ್ ಇರುವ ಜಾಗ ಸೂಕ್ತವಾಗಿಲ್ಲ. ಹೊಸ ಕ್ಯಾಂಟೀನ್‌ಗಳನ್ನು ಹೆಚ್ಚು ಜನರಿಗೆ ಅನುಕೂಲವಾಗುವಂತಹ ಬಸ್‌ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಮಾರುಕಟ್ಟೆ ಇರುವಂತಹ ಪ್ರದೇಶದಲ್ಲೇ ಸ್ಥಾಪಿಸಲಿದ್ದೇವೆ’ ಎಂದು ತಿಳಿಸಿದರು.
‘ಇಂದಿರಾ ಕ್ಯಾಂಟೀನ್‌ಗಳ ಮೆನು ಬದಲಾಗಲಿರುವುದರಿಂದ, ಆಹಾರ ಪೂರೈಕೆಯ ಹಿಂದಿನ ಗುತ್ತಿಗೆಯನ್ನೂ ರದ್ದುಪಡಿಸಲಿದ್ದೇವೆ. ಆದರೆ ಹೊಸತಾಗಿ ಟೆಂಡರ್ ಕರೆಯುವವರೆಗೆ ಹಿಂದಿನ ಗುತ್ತಿಗೆದಾರರನ್ನೇ ಮುಂದುವರಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.