ADVERTISEMENT

‘ಅಂತರ್ಜಾತಿ, ಅಂತರ ಧರ್ಮೀಯ ವಿವಾಹಗಳಿಂದ ಸಮ ಸಮಾಜ’

ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 5:13 IST
Last Updated 12 ಅಕ್ಟೋಬರ್ 2025, 5:13 IST
ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು
ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು   

ಬೆಳ್ತಂಗಡಿ : ‘ಜನರ ತೆರಿಗೆಯ ಹಣವನ್ನು ಜನರಿಗೆ ನೀಡುವುದು ಸರ್ಕಾರದ ಜವಾಬ್ದಾರಿ. ಬಡ ಜನರ ಬದುಕು ಬೆಳಗಿ ಸಮ ಸಮಾಜ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಅನೇಕ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದೆ. ಇಂದಿರಾ ಕ್ಯಾಂಟಿನ್ ಮೂಲಕ ಹಲವರ ಹಸಿವು ತಣಿಸುವ ಕೆಲಸವನ್ನು ಸರ್ಕಾರ ಮಾಡುತ್ತಾ ಬಂದಿದೆ’ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬೆಳ್ತಂಗಡಿಯಲ್ಲಿ ಶನಿವಾರ ನೂತನವಾಗಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ ಹಾಗೂ 94ಸಿ ಹಾಗೂ 94 ಸಿಸಿ ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

'ಇಂದಿರಾ ಗಾಂಧಿಯವರು ಬಡವರ ಬಗ್ಗೆ ಅಪಾರ ಕಾಳಜಿ ಬೆಳೆಸಿಕೊಂಡವರಾಗಿದ್ದರು. ಹಾಗಾಗಿಯೇ ಸರ್ಕಾರದ ಅನೇಕ ಯೋಜನೆಗಳ ಹಿಂದೆ ಅವರ ಹೆಸರಿದೆ. 5 ಕೆ.ಜಿ ಅಕ್ಕಿಯ ಜತೆ ಇಂದಿರಾ ಕಿಟ್ ಕೊಡುವ ಕಾರ್ಯವೂ ಒಂದೆರಡು ತಿಂಗಳ ಒಳಗಾಗಿ ಜಾರಿಗೆ ಬರಲಿದೆ. ಆ ಮೂಲಕ ಮನೆಯೊಂದಕ್ಕೆ ಅಗತ್ಯ ವಸ್ತುಗಳು ದೊರೆತು ಜನ ನೆಮ್ಮದಿಯ ಜೀವನಕ್ಕೆ ಸಾಕಾರವಾಗಲಿದೆ' ಎಂದರು.

ADVERTISEMENT

'ಆರೋಗ್ಯ ಮತ್ತು ಶಿಕ್ಷಣ ಸರ್ಕಾರದ ಆದ್ಯ ಕೆಲಸವಾಗಿದೆ. ಕರ್ನಾಟಕ ಸಾಧನೆಯನ್ನು ಕೇಂದ್ರ ಸರ್ಕಾರವೇ ತನ್ನ ಅಂಕಿ ಅಂಶದಲ್ಲಿ ಗುರುತಿಸಿದೆ. ರಾಜ್ಯ ದಿವಾಳಿಯಾಗಿಲ್ಲ ಎಂಬುದನ್ನು ಇದು ಸಾಬೀತು ಮಾಡಿದೆ. ಸಾಮರಸ್ಯದ ಬದುಕಿನ ಮೂಲಕ ಸಮಾಜ ನಿರ್ಮಿಸುವ ಕೆಲಸವನ್ನು ರಾಜ್ಯ ಸರ್ಕಾರ ನಿರಂತರವಾಗಿ ಮಾಡುತ್ತಾ ಬಂದಿದೆ.ಸಮಾಜವನ್ನು ವಿಭಜಿಸುವ ಕೆಲಸವನ್ನು ರಾಜಕೀಯ ಪಕ್ಷಗಳು, ಸರ್ಕಾರಗಳು ಮಾಡಬಾರದು. ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದೇ ಸರ್ಕಾರಗಳ ಗುರಿಯಾಗಬೇಕು' ಎಂದರು.

'ಸತ್ಯ ಮತ್ತು ನ್ಯಾಯದ ಪರ ನಾವು ಬದುಕಬೇಕು. ಸಮಾಜದಲ್ಲಿ ಸಂಕುಚಿತ ಭಾವನೆ ಬಿಟ್ಟು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ಅಂತರ್ಜಾತಿಯ, ಅಂತರ್ ಧರ್ಮೀಯ ವಿವಾಹಗಳು ನಡೆದಲ್ಲಿ ಅದು ಸಮ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತದೆ. ಹಾಗಾಗಿ ಅದನ್ನು ವಿರೋಧಿಸದೆ ಪ್ರೋತ್ಸಾಹಿಸುವ ಕಡೆಗೆ ನಮ್ಮ ಚಿಂತನೆ ಬೆಳೆಸಿಕೊಳ್ಳಬೇಕು' ಎಂದರು.

‘ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಬೆಳ್ತಂಗಡಿ ತಾಲ್ಲೂಕಿನ ಜನರಿಗೆ ಬಂದಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ₹227 ಕೋಟಿ, ಗೃಹ ಜ್ಯೋತಿಗೆ ₹96 ಕೋಟಿ, ಯುವ ನಿಧಿ ಮೂಲಕ ₹2 ಕೋಟಿ 14 ಲಕ್ಷ, ಅನ್ನ ಭಾಗ್ಯದ ಮೂಲಕ ₹55.49 ಈಗಾಗಲೇ ದೊರೆತಿದ್ದು, ಶಕ್ತಿ ಯೋಜನೆಯಲ್ಲಿ 1.62 ಕೋಟಿ ಜನ ಪ್ರಯಾಣ ಬೆಳೆಸಿದ್ದಾರೆ' ಎಂದರು.

'ಬೆಳ್ತಂಗಡಿ ಮತ್ತು ಮೂಡಬಿದಿರೆಯಲ್ಲಿ ಇಂದಿರಾ ಕ್ಯಾಂಟಿನ್ ಕಾಮಗಾರಿ ಗುತ್ತಿಗೆ ತೆಗೆದುಕೊಂಡವರು ಅದನ್ನು ಸಮರ್ಪಕವಾಗಿ ಮಾಡಿಲ್ಲ. ಕಳಪೆ ಕಾಮಗಾರಿಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಾಗುತ್ತದೆ. ಅದನ್ನು ಗುತ್ತಿಗೆದಾರರಿಂದಲೇ ಸರಿ ಮಾಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು’ ಎಂದು ತಿಳಿಸಿದರು.

'ಮಹಿಳಾ ಮತ್ತು ಮಕ್ಕಳ ಬದುಕಿಗೆ ವಿಶೇಷ ಒತ್ತು ನೀಡುವ ಕೆಲಸವನ್ನು ಸರ್ಕಾರ ನಿರಂತರವಾಗಿ ಮಾಡುತ್ತಾ ಬಂದಿದೆ. ಇದೀಗ ಉದ್ಯೋಗಿ ಮಹಿಳೆಯರಿಗೆ ಅವರ ಋತುವಿನ ಅವಧಿಯಲ್ಲಿ 1 ದಿನ ವೇತನ ಸಹಿತ ರಜೆಯನ್ನು ಘೋಷಣೆ ಮಾಡಿದೆ. ಇದು ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಎಲ್ಲೆಡೆ ಕೆಲಸ ಮಾಡುವ ನೌಕರರಿಗೂ ಅನ್ವಯವಾಗುವುದು. ಜನರಿಗೆ ಸರ್ಕಾರದ ಯೋಜನೆಗಳು ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು' ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, 'ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುವ ಕೆಲಸವನ್ನು ಇಂದಿರಾ ಕ್ಯಾಂಟಿನ್ ಮಾಡಿದೆ. ಯಾವುದೇ ಸರ್ಕಾರ ಬಂದರೂ ಬಡ ಜನರನ್ನು ಮುಖ್ಯ ವಾಹಿನಿಗೆ ತರುವುದು ಮುಖ್ಯ ಉದ್ದೇಶವಾಗಬೇಕು ' ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ, 'ಬಾಕಿ ಇರುವ 94 ಸಿ ಹಾಗೂ 94ಸಿಸಿ ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ಸಕ್ರಮ ಸಿಟ್ಟಿಂಗ್‌ನಲ್ಲಿ ಇರುವ ಕಾನೂನುಗಳನ್ನು ಸಡಿಲ ಮಾಡಬೇಕು. ತಾಲ್ಲೂಕಿನ ಗ್ರಾಮೀಣ ರಸ್ತೆಗಳು ತೀರಾ ಕೆಟ್ಟು ಹೋಗಿದ್ದು ವಿಶೇಷ ಅನುದಾನ ಕೊಡಿಸುವಂತೆ ಮಂತ್ರಿಗಳ ಬಳಿ ಒತ್ತಡ ಹಾಕಿ ಸಹಕರಿಸಬೇಕು ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ವಿನಂತಿಸಿದರು.

ವೇದಿಕೆಯಲ್ಲಿ ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣೀಕರಣ ಸಂಸ್ಥೆ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಜೈನ್, ಕರ್ನಾಟಕ ಪರಿಸರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಟಿ, ಉಪಾಧ್ಯಕ್ಷೆ ಗೌರಿ, ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಶೇಖರ ಕುಕ್ಕೇಡಿ, ತಾಲ್ಲೂಕು ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ತಹಸೀಲ್ದಾರ್ ಪೃಥ್ವಿ ಸಾನಿಕಂ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಇದ್ದರು.

ವಿವಿಧ ಕಾಮಗಾರಿಗಳ ಉದ್ಘಾಟನೆ: ಸಚಿವ ದಿನೇಶ್ ಗುಂಡೂರಾವ್ ಅವರು ಪೂಂಜಾಲಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಮಾಲಾಡಿ ಸಬರ ಬೈಲಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟಿಸಿದರು. ಕಾಶಿಬೆಟ್ಟುವಿನಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಉಜಿರೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಬೆಳ್ತಂಗಡಿ ಇದರ ಶಿಲಾನ್ಯಾಸ ನೆರವೇರಿಸಿದರು. 140 ಫಲಾನುಭವಿಗಳಿಗೆ 94 ಸಿ ಹಾಗೂ 94 ಸಿಸಿ ಹಕ್ಕು ಪತ್ರ ವಿತರಣೆ ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್ ಸ್ವಾಗತಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.