
ಮಂಗಳೂರು: ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಅಮೂಲ್ಯ ನಿಧಿಯಾಗಿದ್ದು, ಅವರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ ಹೇಳಿದರು.
ಧಾರ್ಮಿಕ ಮತ್ತು ಸಾಮಾಜಿಕ ಭಿನ್ನತೆಗಳನ್ನು ಮೀರಿ ಭಾತೃತ್ವ ಬೆಳೆಸುವ ನಿಟ್ಟಿನಲ್ಲಿ ಕೊಡಿಯಾಲ್‌ಬೈಲ್‌ನ ಬಿಷಪ್ ಹೌಸ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಬಂಧುತ್ವ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೂ, ಕ್ರೈಸ್ತ, ಮುಸ್ಲಿಂ, ಜೈನ, ಬೌದ್ಧ, ಸಿಖ್ ಧರ್ಮಗಳು ಕೈ ಬೆರಳುಗಳಿದ್ದಂತೆ. ಪ್ರತಿ ಧರ್ಮವೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಆದರೆ ಮನುಕುಲದ ಹಿತದೃಷ್ಟಿಯಿಂದ ಇವೆಲ್ಲವೂ ಒಟ್ಟಾಗಿ ಕೆಲಸ ಮಾಡಬೇಕು. ದುರ್ಬಲ ಬೆರಳಿಗೆ ನಾವು ಉಂಗುರ ತೊಡಿಸಿ ಅಲಂಕರಿಸುವಂತೆ, ಸಮಾಜದ ಅಂಚಿನಲ್ಲಿರುವ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ನಾವು ಪ್ರೀತಿಯಿಂದ ಗೌರವಿಸಬೇಕು. ದ್ವೇಷ ಮತ್ತು ಯುದ್ಧಗಳಿಂದಾಗಿ ಜಗತ್ತೇ ನರಕವಾಗುತ್ತಿದೆ. ಕೋಮು ಗಡಿಗಳನ್ನು ದಾಟಿ ಪರಸ್ಪರ ಸ್ಪಂದಿಸುವುದು ಮಾತ್ರ ಶಾಶ್ವತ ಶಾಂತಿಗೆ ದಾರಿ ಎಂದು ಹೇಳಿದರು.
ಆದಾಯ ತೆರಿಗೆ ಇಲಾಖೆಯ ಕಮಿಷನರ್ ಎಸ್. ರಂಗರಾಜನ್ ಮಾತನಾಡಿ, ‘ಮಂಗಳೂರು ನಗರವು ಶಾಂತಿ, ಸಹಬಾಳ್ವೆಗೆ ಐತಿಹಾಸಿಕ ಮಾದರಿಯಾಗಿದೆ. ಕೋಮು ದ್ವೇಷವು ಒಂದು 'ವಿಷ'ವಾಗಿದ್ದು ಅದನ್ನು ಎಂದಿಗೂ ಪೋಷಿಸಬಾರದು. ದ್ವೇಷದ ಸಂದೇಶ ಹರಡುವುದನ್ನು ನಿಲ್ಲಿಸಿ, ಮಕ್ಕಳಲ್ಲಿ ಭ್ರಾತೃತ್ವದ ಕಥೆಗಳನ್ನು ಬಿತ್ತಬೇಕು’ ಎಂದು ಮನವಿ ಮಾಡಿದರು.
ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ರಿಜಿಸ್ಟ್ರಾರ್ ಸಂದೀಪ್ ಥಿಯೋಫಿಲ್ ಪ್ರಾರ್ಥನಾ ವಿಧಿ ನಡೆಸಿಕೊಟ್ಟರು.
ಕೇಕ್ ಕತ್ತರಿಸುವ ಮೂಲಕ ಕ್ರಿಸ್‌ಮಸ್ ಸಂತೋಷ ಹಂಚಿಕೊಳ್ಳಲಾಯಿತು. ಸಿಎಸ್‌ಐ ಬಿಷಪ್ ಹೇಮಚಂದ್ರ ಕುಮಾರ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಐವನ್ ಡಿಸೋಜ, ಶಾಸಕ ಅಶ್ರಫ್ (ಮಂಜೇಶ್ವರ), ಐಜಿಪಿ ಅಮಿತ್ ಸಿಂಗ್, ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್.ಧರ್ಮ, ರಾಮಕೃಷ್ಣ ಮಠ, ಬ್ರಹ್ಮಕುಮಾರಿ, ಉಳ್ಳಾಲ ದರ್ಗಾದ ಪ್ರತಿನಿಧಿಗಳು ಭಾಗವಹಿಸಿದ್ದರು.
ಜೆ. ಬಿ. ಸಲ್ಡಾನ ವಂದಿಸಿದರು. ರಾಯ್ ಕ್ಯಾಸ್ಟಲಿನೊ ಕಾರ್ಯಕ್ರಮ ಸಂಯೋಜಿಸಿದರು. ಉಷಾ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಫಾ. ರೂಪೇಶ್ ಮಾಡ್ತ ಕ್ರಿಸ್‌ಮಸ್ ಕ್ರೀಡೆಗಳನ್ನು ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.