ಉಪ್ಪಿನಂಗಡಿ: ‘ಇರಾನಿನ ಅಣು ಸ್ಥಾವರದ ಮೇಲೆ ಇಸ್ರೇಲಿನ ಭೀಕರ ದಾಳಿಯ ಬಳಿಕ ಉಂಟಾಗಿರುವ ಪ್ರತಿ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್ ದೇಶದಾದ್ಯಂತ ಕಟ್ಟೇಚ್ಚರ ವಹಿಸಲಾಗಿದ್ದು, ಇರಾನ್ ಆಕ್ರಮಣಗಳು ನಡೆಯುತ್ತಿದ್ದಂತೆಯೇ ಸೈರನ್‌ಗಳು ಮೊಳಗಿದಾಗ ಸೆಲ್ಟರ್‌ನೊಳಗೆ ಆಶ್ರಯ ಪಡೆಯುತ್ತಿದ್ದೇವೆ ಎಂದು ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿರುವ ಉಪ್ಪಿನಂಗಡಿ ನಿವಾಸಿ ಅರುಣ್ ಗೋಡ್ವಿನ್ ಮಿನೇಜಸ್ ತಿಳಿಸಿದ್ದಾರೆ.
ಈ ಕುರಿತು ಸ್ಥಳೀಯ ಪತ್ರಿಕಾಯೊಂದಿಗೆ ಅನುಭವ ಹಂಚಿಕೊಂಡಿರುವ ಅವರು, ಇಸ್ರೇಲ್ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು, ವೈರಿ ರಾಷ್ಟ್ರದ ಕ್ಷಿಪಣಿಗಳನ್ನು ಆಕಾಶದಲ್ಲೇ ಬೆನ್ನಟ್ಟಿ ಧ್ವಂಸಗೊಳಿಸಲಾಗುತ್ತಿದೆ. ಆದರೂ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದಾಗ ಕೆಲ ಮಿಸೈಲ್‌ಗಳು ಅಪ್ಪಳಿಸುತ್ತಿದೆ. ಶುಕ್ರವಾರ ರಾತ್ರಿ ಟೆಲ್ ಅವೀವ್ ನಲ್ಲಿರುವ ನಮ್ಮ ಮನೆಯ ಸಮೀಪದಲ್ಲೇ ಒಂದು ಮಿಸೈಲ್ ಅಪ್ಪಳಿಸಿತ್ತು. ದೊಡ್ಡ ಶಬ್ದ ಕೇಳಿಸಿ ಭಯದಿಂದ ಸೆಲ್ಟರ್‌ನಿಂದ ಹೊರಗೆ ಬಂದಿದ್ದೇವೆ. ದಾಳಿ ಪ್ರತಿದಾಳಿಗಳು ರಾತ್ರಿ ವೇಳೆಯಲ್ಲೇ ನಡೆಯುತ್ತಿರುವುದರಿಂದ ಸಹಜವಾಗಿ ಭಯದ ವಾತಾವರಣ ಉಂಟಾಗಿದೆ ಎಂದು ಹೇಳಿದ್ದಾರೆ.
ಕಳೆದ ರಾತ್ರಿ ಮೂರು ಬಾರಿ ಸೈರನ್ ಮೊಳಗಿದ್ದು, ಮನೆ ಸಮೀಪದ ಸೆಲ್ಟರ್ (ಬಂಕರ್)ನಲ್ಲಿ ರಕ್ಷಣೆ ಪಡೆದಿದ್ದೇವೆ. ಅಂಗಡಿ ಮುಂಗಟ್ಟುಗಳು ಮುಚ್ಚಿದೆ. ಬಸ್ ಸಂಚಾರ ಸ್ಥಗಿತಗೊಂಡಿದೆ. ಹೊರಗೆ ಸುತ್ತಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಇರಾನ್‌ನಿಂದ ಪ್ರತಿದಾಳಿಯ ನಿರೀಕ್ಷೆಯಿಂದ ಹೆಚ್ಚಿನ ಅಲಾರ್ಟ್ ಇದೆ. ಯಾವುದೇ ಸಮಯದಲ್ಲಿ ಏನಾದರೂ ಸಂಭವಿಸಬಹುದೆಂಬ ಭೀತಿ ಮಾತ್ರ ಎಲ್ಲರಲ್ಲೂ ಇದೆ. ಸದ್ಯಕ್ಕೆ ಇಸ್ರೇಲ್ ಸೈನ್ಯದ ಸ್ವರಕ್ಷಣಾ ವ್ಯವಸ್ಥೆಯ ಬಲದಲ್ಲಿ ಸುರಕ್ಷಿತವಾಗಿದ್ದೇವೆ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.