ADVERTISEMENT

ಕೋವಿಡ್‌; ಮೃತಪಟ್ಟವರ ವಿವರ ನೀಡಿ

ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಎಐಸಿಸಿ ಕಾರ್ಯದರ್ಶಿ ಐವನ್‌ ಡಿಸೋಜ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 2:54 IST
Last Updated 3 ಆಗಸ್ಟ್ 2021, 2:54 IST
ಐವನ್‌ ಡಿಸೋಜ
ಐವನ್‌ ಡಿಸೋಜ   

ಮಂಗಳೂರು: ಕೋವಿಡ್‌–19 ನಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ ₹1 ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿ, ಬಹಳ ಸಮಯವಾದರೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಈ ಬಗ್ಗೆ ನಿರ್ದೇಶನವೇ ಬಂದಿಲ್ಲ. ಸಾವಿನ ಆಡಿಟ್ ಕೂಡ ಆಗಿಲ್ಲ. ಕೂಡಲೇ ಎಷ್ಟು ಮಂದಿ ಈ ಪರಿಹಾರ ಪಡೆಯಲು ಅರ್ಹರು ಎಂಬ ಮಾಹಿತಿಯನ್ನು ಜಿಲ್ಲಾಡಳಿತ ನೀಡಬೇಕು. ಇಲ್ಲದಿದ್ದರೆ ಕೋರ್ಟ್ ಮೊರೆ ಹೋಗುವುದಾಗಿ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್–19 ನಿಂದ ವಾರಕ್ಕೆ 40-50 ಸಾವು ಸಂಭವಿಸುತ್ತಿವೆ. ಎಲ್ಲರಿಗೂ ಲಸಿಕೆ ನೀಡಿದ್ದರೆ ಇಷ್ಟೊಂದು ಸಾವು ಸಂಭವಿಸುತ್ತಿರಲಿಲ್ಲ. 15 ಲಕ್ಷ ಜನಸಂಖ್ಯೆಯಲ್ಲಿ ಎಷ್ಟು ಮಂದಿಗೆ ಲಸಿಕೆ ನೀಡಲಾಗಿದೆ ಎಂಬ ನಿಖರ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡುತ್ತಿಲ್ಲ. ನಾಲ್ಕು ತಿಂಗಳು ಕಳೆದರೂ ಶೇ 25ರಷ್ಟು ಜನರಿಗೆ ಲಸಿಕೆ ನೀಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲೇ ಅತಿ ಹೆಚ್ಚು ಪಾಸಿಟಿವಿಟಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗುತ್ತಿದೆ. ಲಸಿಕೆ ನೀಡಲು ಸರ್ಕಾರ ವಿಫಲವಾಗಿದ್ದೇ 3ನೇ ಅಲೆ ಈ ಮಟ್ಟಕ್ಕೆ ಏರಲು ಕಾರಣ. ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಲಸಿಕೆ ಜನಸಾಮಾನ್ಯರಿಗೆ ಉಚಿತವಾಗಿ ಸಿಗುತ್ತಿಲ್ಲ ಎಂದರು.

ADVERTISEMENT

ಜಿಲ್ಲೆಯಲ್ಲಿ 1.10 ಲಕ್ಷ ಮಂದಿ ಕಾಲೇಜು ವಿದ್ಯಾರ್ಥಿಗಳಿದ್ದು, ತರಗತಿಗೆ ಹಾಜರಾಗಬೇಕಾದರೆ ಲಸಿಕೆ ಕಡ್ಡಾಯ ಆದೇಶ ಮಾಡಲಾಗಿದೆ. ಆದರೆ ಈವರೆಗೆ ಕೇವಲ 63 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಮೊದಲ ಡೋಸ್ ನೀಡಲಾಗಿದೆ. ಲಸಿಕೆಯ ಕೂಪನ್‌ಗಳು ಬಿಜೆಪಿ ಕಾರ್ಯಕರ್ತರ ಕೈಯಲ್ಲಿವೆ. ಅವರಿಗೆ ಬೇಕಾದವರಿಗೆ ಮಾತ್ರ ಲಸಿಕೆ ನೀಡುತ್ತಿದ್ದಾರೆ. ಜಿಲ್ಲಾಡಳಿತ ಇದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸುಮ್ಮನಿರಲು ಆಗದು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ವಿವೇಕ್‌ರಾಜ್ ಪೂಜಾರಿ, ಮುಹಮ್ಮದ್ ಕುಂಜತ್ತಬೈಲ್, ಶುಭೋದಯ ಆಳ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.