ADVERTISEMENT

ಮಂಗಳೂರು: ‘ಜನತಾ ಅದಾಲತ್‌’ ಪತ್ರಿಕಾಗೋಷ್ಠಿಗೂ ತಡೆ

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 17:05 IST
Last Updated 7 ಜನವರಿ 2020, 17:05 IST
ಗೋಲಿಬಾರ್‌ ಕುರಿತು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ಮಂಗಳೂರಿನಲ್ಲಿ ನಡೆದ ಜನತಾ ಅದಾಲತ್‌ನಲ್ಲಿ ಪಾಲ್ಗೊಂಡಿದ್ದ ಮಾಜಿ ಮೇಯರ್‌ ಕೆ.ಅಶ್ರಫ್‌ ಅವರು ಡಿ.19ರ ಘಟನೆಯನ್ನು ವಿವರಿಸುತ್ತಿರುವುದು. ಅದಾಲತ್‌ ಸದಸ್ಯರಾದ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಮತ್ತು ಹಿರಿಯ ವಕೀಲ ಬಿ.ಟಿ.ವೆಂಕಟೇಶ್‌ ಇದ್ದರು.– ಪ್ರಜಾವಾಣಿ ಚಿತ್ರ
ಗೋಲಿಬಾರ್‌ ಕುರಿತು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ಮಂಗಳೂರಿನಲ್ಲಿ ನಡೆದ ಜನತಾ ಅದಾಲತ್‌ನಲ್ಲಿ ಪಾಲ್ಗೊಂಡಿದ್ದ ಮಾಜಿ ಮೇಯರ್‌ ಕೆ.ಅಶ್ರಫ್‌ ಅವರು ಡಿ.19ರ ಘಟನೆಯನ್ನು ವಿವರಿಸುತ್ತಿರುವುದು. ಅದಾಲತ್‌ ಸದಸ್ಯರಾದ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಮತ್ತು ಹಿರಿಯ ವಕೀಲ ಬಿ.ಟಿ.ವೆಂಕಟೇಶ್‌ ಇದ್ದರು.– ಪ್ರಜಾವಾಣಿ ಚಿತ್ರ   

ಮಂಗಳೂರು: ನಗರದಲ್ಲಿ ಡಿಸೆಂಬರ್‌ 19ರಂದು ನಡೆದ ಪೊಲೀಸ್‌ ಗೋಲಿಬಾರ್‌ ಕುರಿತು ಅಧ್ಯಯನ ನಡೆಸಿ, ಸಾಕ್ಷ್ಯ ಸಂಗ್ರಹಿಸಲು ಬಂದಿದ್ದ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ನೇತೃತ್ವದ ‘ಜನತಾ ಅದಾಲತ್‌’ ತಂಡಕ್ಕೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸುವುದಕ್ಕೂ ಪೊಲೀಸರು ತಡೆಯೊಡ್ಡಿದರು.

ಬೆಂಗಳೂರಿನ ಇಂಡಿಯನ್‌ ಸೋಷಿಯಲ್‌ ಇನ್‌ಸ್ಟಿಟ್ಯೂಟ್‌ನ ಲಿಸೆನಿಂಗ್‌ ಪೋಸ್ಟ್‌, ಅಸೋಸಿಯೇಷನ್‌ ಫಾರ್ ದಿ ಪ್ರೊಟೆಕ್ಷನ್‌ ಆಫ್‌ ಸಿವಿಲ್‌ ರೈಟ್ಸ್‌ (ಎಪಿಸಿಆರ್‌) ಮತ್ತು ಸಂವಿಧಾನದ ಹಾದಿಯಲ್ಲಿ ಸಂಸ್ಥೆಗಳು ಜಂಟಿಯಾಗಿ ‘ಜನತಾ ಅದಾಲತ್‌’ ಆಯೋಜಿಸಿದ್ದವು. ಇದಕ್ಕಾಗಿ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಧ್ಯಕ್ಷತೆಯಲ್ಲಿ ಹಿರಿಯ ವಕೀಲ ಬಿ.ಟಿ.ವೆಂಕಟೇಶ್‌ ಮತ್ತು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿ ರಚಿಸಲಾಗಿತ್ತು.

ಸೋಮವಾರ ನಗರದ ಸೂರ್ಯ ಹೋಟೆಲ್‌ನಲ್ಲಿ ‘ಜನತಾ ಅದಾಲತ್‌’ ಹೇಳಿಕೆ ದಾಖಲು ಸಭೆ ನಿಗದಿಯಾಗಿತ್ತು. ಅದನ್ನು ನಡೆಸದಂತೆ ಪೊಲೀಸರು ಲಿಸೆನಿಂಗ್‌ ಪೋಸ್ಟ್‌ ಸಂಯೋಜಕ ಅಶೋಕ್‌ ಮರಿದಾಸ್‌ ಅವರಿಗೆ ನೋಟಿಸ್‌ ನೀಡಿದ್ದರು. ಈ ಕಾರಣದಿಂದ ಹೋಟೆಲ್‌ ವ್ಯವಸ್ಥಾಪಕರು ಸಭೆ ನಡೆಸಲು ಅವಕಾಶ ನಿರಾಕರಿಸಿದ್ದರು. ಗೊಂದಲದ ನಡುವೆಯೂ ಎರಡು ಸ್ಥಳಗಳಲ್ಲಿ ಅದಾಲತ್‌ ಸಭೆ ನಡೆದಿತ್ತು.

ADVERTISEMENT

ಮಂಗಳವಾರ ಹೈಲ್ಯಾಂಡ್‌ ಮತ್ತು ಯೂನಿಟಿ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ಭೇಟಿ ಮಾಡಿ ಹೇಳಿಕೆ ದಾಖಲಿಸಿಕೊಂಡ ಸಮಿತಿ, ಮೃತರ ಮನೆಗೂ ಭೇಟಿ ನೀಡಿತ್ತು. ಘಟನಾ ಸ್ಥಳಕ್ಕೂ ತೆರಳಿ ಪರಿಶೀಲನೆ ನಡೆಸಿತ್ತು. ಆ ಬಳಿಕ ಪತ್ರಿಕಾಗೋಷ್ಠಿ ನಡೆಸಲು ಸಮಿತಿಯ ಸದಸ್ಯರು ನಿರ್ಧರಿಸಿದ್ದರು.

ಬೆಳಿಗ್ಗೆಯಿಂದಲೇ ಹತ್ತಕ್ಕೂ ಹೆಚ್ಚು ಹೋಟೆಲ್‌ಗಳನ್ನು ಸಂಪರ್ಕಿಸಿ ಪತ್ರಿಕಾಗೋಷ್ಠಿಗೆ ಸ್ಥಳಾವಕಾಶ ಪಡೆಯಲು ಈ ತಂಡ ಯತ್ನಿಸಿತು. ಆ ಎಲ್ಲ ಹೋಟೆಲ್‌ಗಳನ್ನೂ ಸಂಪರ್ಕಿಸಿದ ಪೊಲೀಸರು ಅವಕಾಶ ನೀಡದಂತೆ ಒತ್ತಡ ಹೇರಿದರು. ಪೊಲೀಸರಿಂದ ಅನುಮತಿ ಪತ್ರ ತಂದರೆ ಮಾತ್ರವೇ ಅವಕಾಶ ನೀಡುವುದಾಗಿ ಹೋಟೆಲ್‌ ಮಾಲೀಕರು ಪ್ರತಿಕ್ರಿಯಿಸಿದರು. ಇದರಿಂದಾಗಿ ಪತ್ರಿಕಾಗೋಷ್ಠಿಯೇ ನಡೆಯಲಿಲ್ಲ.

‘ಹೆಜ್ಜೆಹೆಜ್ಜೆಗೂ ಅಡ್ಡಿ’

ನ್ಯಾ.ಗೋಪಾಲಗೌಡ ನೇತೃತ್ವದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯ ಸದಸ್ಯರು, ‘ನಾವು ಡಿ.19ರ ಗೋಲಿಬಾರ್‌ ಕುರಿತು ನಿಷ್ಪಕ್ಷಪಾತವಾಗಿ ಮಾಹಿತಿ ಸಂಗ್ರಹಿಸಲು ಬಂದಿದ್ದೆವು. ಹೆಜ್ಜೆ ಹೆಜ್ಜೆಗೂ ಪೊಲೀಸರು ನಮಗೆ ಅಡ್ಡಿಪಡಿಸಿದರು. ಯಾವ ಕಾನೂನುಗಳ ಅಡಿಯಲ್ಲಿ ಹೀಗೆ ಮಾಡಿದರು ಎಂಬುದು ಈಗಲೂ ತಿಳಿದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

14 ಜನರ ಹೇಳಿಕೆ ದಾಖಲು: ಜಗದೀಶ್

ನಗರದಲ್ಲಿ ನಡೆದ ಗೋಲಿಬಾರ್‌ಗೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್‌ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ, ಉಡುಪಿ ಜಿಲ್ಲಾಧಿಕಾರಿಯೂ ಆದ ಜಗದೀಶ್‌, ಮಂಗಳವಾರ ನಗರದ ಮಿನಿ ವಿಧಾನಸೌಧದಲ್ಲಿ 14 ಜನರಿಂದ ಹೇಳಿಕೆಗಳನ್ನು ಪಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಗದೀಶ್‌,
‘ಪೊಲೀಸರು ಹಾಗೂ ಮೃತರ ಕುಟುಂಬದವರಿಗೆ ಖುದ್ದಾಗಿ ನೋಟಿಸ್ ನೀಡಿ, ಹೇಳಿಕೆ ಪಡೆಯಲಾಗುವುದು. ‘ಪೊಲೀಸ್ ಫೈರಿಂಗ್ ಅಗತ್ಯ ಇತ್ತೇ? ಘಟನೆಗೆ ಕಾರಣ ಏನು? ಎಂಬುದನ್ನು ಸುಪ್ರೀಂ ಕೋರ್ಟ್‌ನ ನಿಯಮಾವಳಿಗಳ ಪ್ರಕಾರ ತನಿಖೆ ನಡೆಸಲಾಗುವುದು. 3 ತಿಂಗಳಲ್ಲಿ ವರದಿಯನ್ನು ಸರ್ಕಾರ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಲಾಗುವುದು’ ಎಂದರು.

14 ಜನರ ಹೇಳಿಕೆ ದಾಖಲು: ಜಗದೀಶ್

ನಗರದಲ್ಲಿ ನಡೆದ ಗೋಲಿಬಾರ್‌ಗೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್‌ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ, ಉಡುಪಿ ಜಿಲ್ಲಾಧಿಕಾರಿಯೂ ಆದ ಜಗದೀಶ್‌, ಮಂಗಳವಾರ ನಗರದ ಮಿನಿ ವಿಧಾನಸೌಧದಲ್ಲಿ 14 ಜನರಿಂದ ಹೇಳಿಕೆಗಳನ್ನು ಪಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಗದೀಶ್‌,‘ಪೊಲೀಸರು ಹಾಗೂ ಮೃತರ ಕುಟುಂಬದವರಿಗೆ ಖುದ್ದಾಗಿ ನೋಟಿಸ್ ನೀಡಿ, ಹೇಳಿಕೆ ಪಡೆಯಲಾಗುವುದು. ‘ಪೊಲೀಸ್ ಫೈರಿಂಗ್ ಅಗತ್ಯ ಇತ್ತೇ? ಘಟನೆಗೆ ಕಾರಣ ಏನು? ಎಂಬುದನ್ನು ಸುಪ್ರೀಂ ಕೋರ್ಟ್‌ನ ನಿಯಮಾವಳಿಗಳ ಪ್ರಕಾರ ತನಿಖೆ ನಡೆಸಲಾಗುವುದು. 3 ತಿಂಗಳಲ್ಲಿ ವರದಿಯನ್ನು ಸರ್ಕಾರ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.