ADVERTISEMENT

ಮೂಲ್ಕಿ | ಆಳಗುಂಡಿ ಬ್ರಹ್ಮಸ್ಥಾನ: ಕೃತಿ ಬಿಡುಗಡೆ, ಸಂವಾದ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:56 IST
Last Updated 17 ಫೆಬ್ರುವರಿ 2026, 2:56 IST
ಕಿನ್ನಿಗೋಳಿ ಬಳಿಯ ಸಚ್ಚೇರಿಪೇಟೆ ಸೇತುವೆ ಬಳಿಯ ಶಾಂಭವಿ ನದಿ ತಟದಲ್ಲಿರುವ ಆಳಗುಂಡಿ ಬ್ರಹ್ಮಸ್ಥಾನದಲ್ಲಿ ಕೃತಿಗಳ ಬಿಡುಗಡೆ ಹಾಗೂ ಸಂವಾದ ನಡೆಯಿತು
ಕಿನ್ನಿಗೋಳಿ ಬಳಿಯ ಸಚ್ಚೇರಿಪೇಟೆ ಸೇತುವೆ ಬಳಿಯ ಶಾಂಭವಿ ನದಿ ತಟದಲ್ಲಿರುವ ಆಳಗುಂಡಿ ಬ್ರಹ್ಮಸ್ಥಾನದಲ್ಲಿ ಕೃತಿಗಳ ಬಿಡುಗಡೆ ಹಾಗೂ ಸಂವಾದ ನಡೆಯಿತು   

ಮೂಲ್ಕಿ: ತುಳುನಾಡಿನ ದೈವಾರಾಧನೆಯ ಕ್ಷೇತ್ರಗಳಲ್ಲಿ ಪ್ರಧಾನ ದೈವವಾಗಿ ಆರಾಧನೆಗೊಳ್ಳುವ ದೈವಿಕಶಕ್ತಿಯಾದ ಬೆರ್ಮರು ಚತುರ್ಮುಖ ಬ್ರಹ್ಮನಲ್ಲ. ಬೆರ್ಮರು ಎನ್ನುವ ಪದ ತಮಿಳು ಭಾಷೆಯ ಪೆರುಮಾಳ್ ಪದದ ಹಾಗೆ ದೇವರು ಎಂಬ ಅರ್ಥ ಕೊಡುವ ರೂಢನಾಮವಾಗಿದೆ. ಬೆರ್ಮರು ಪದವನ್ನು ಬ್ರಹ್ಮ ಎಂದು ಬರೆಯುವ ಕ್ರಮವು ತುಳುಪದಗಳನ್ನು ಕನ್ನಡದಲ್ಲಿ ಬರೆಯುವ ಕ್ರಮದಂತೆ ಬಂದಿದೆ. ತುಳುವರ ಪ್ರಧಾನ ದೈವ ಬೆರ್ಮರು ಅಂದರೆ ಶಾಸ್ತಾವು ಅಥವಾ ಶಾಲುವಾಹನ ಎಂದು ಸಾಹಿತಿ ಬಿ.ಜನಾರ್ದನ ಭಟ್ ಹೇಳಿದರು.

ಕಿನ್ನಿಗೋಳಿ ಬಳಿಯ ಸಚ್ಚೇರಿಪೇಟೆ ಸೇತುವೆ ಬಳಿಯ ಶಾಂಭವಿ ನದಿ ತಟದಲ್ಲಿರುವ ಆಳಗುಂಡಿ ಬ್ರಹ್ಮಸ್ಥಾನದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮೂಲ್ಕಿ ತಾಲ್ಲೂಕು ಘಟಕದ ವತಿಯಿಂದ ಅವರೇ ಬರೆದ ತುಳುನಾಡಿನ ಬೆರ್ಮರು ಹಾಗೂ ಹೊಸಹೊಳಲು ಕೃತಿಗಳ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೈನರ ಬ್ರಹ್ಮ ಯಕ್ಷನೂ ಕಾರಣಿಕದ ದೈವ. ಮೊದಲು ಕೆಂಪುಕಲ್ಲು, ಆ ಬಳಿಕ ಗ್ರಾನೈಟ್ ಕಲ್ಲು, ಪದ್ಮಕಲ್ಲುಗಳಲ್ಲಿ ನಾಗಬೆರ್ಮರನ್ನು ನಂಬುವುದನ್ನು ಕಾಣುತ್ತೇವೆ. ಬೆರ್ಮರಿಗೆ ಸಾಂಕೇತಿಕವಾಗಿ ಪ್ರಧಾನ ದೈವವೆಂದು ಆರಾಧನೆ ಇರುತ್ತದೆ. ದೇವಸ್ಥಾನಗಳಲ್ಲಿ ನೈಋತ್ಯ ಭಾಗದಲ್ಲಿ ಶಾಸ್ತಾವು ಬೆರ್ಮರ ಆರಾಧನೆ ಇದೆ ಎನ್ನುವುದನ್ನು ಗುರುತಿಸಬಹುದು. ಚಿತ್ತಾರಿ ಹೆಸರಿನ ದೇವಸ್ಥಾನ ಅಥವಾ ದೈವಸ್ಥಾನಗಳು ಉಡುಪಿ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವು ಬೆರ್ಮೆರ್ ದೈವದ ಮೂಲ ಆರಾಧನಾ ಸ್ಥಳವಾಗಿರಬೇಕು. ದೈವಕ್ಕೆ ಸಲ್ಲುವಂತಹ ಕೋಲ ಅಥವಾ ಕೋಲಬಲಿ ಕೆಲವು ಕಡೆ ಬೆರ್ಮರಿಗೆ ನಡೆಯುತ್ತದೆ ಎಂದು ಹೇಳಿದರು.

ADVERTISEMENT

ತುಳುನಾಡಿನ ಬೆರ್ಮರು ಕೃತಿಯನ್ನು ಪೊಸ್ರಾಲು ದೇಗುಲದ ಅರ್ಚಕ ರಾಘವೇಂದ್ರ ಭಟ್, ಮುಂಡ್ಕೂರು ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಗದೀಶ ಶೆಟ್ಟಿ ನಡಿಗುತ್ತು ಬಿಡುಗಡೆ ಮಾಡಿದರು.

ಮುಂಡ್ಕೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತ್ಯಶಂಕರ ಶೆಟ್ಟಿ ಮಾತನಾಡಿ, ಬೆರ್ಮಸ್ಥಾನದಲ್ಲಿ ಪ್ರಕೃತಿಯೊಂದಿಗೆ ಕೃತಿ ಬಿಡುಗಡೆ, ಸಂವಾದ ಕಾರ್ಯಕ್ರಮ ವಿಶಿಷ್ಟ ಅನುಭೂತಿಯನ್ನು ಕೊಡುತ್ತಿದೆ ಎಂದರು.

ಇತಿಹಾಸ ತಜ್ಞ ‌ಪುಂಡಿಕಾಯಿ ಗಣಪಯ್ಯ ಭಟ್ ಮಾತನಾಡಿದರು‌.

ಕಸಾಪ ಮೂಲ್ಕಿ ಘಟಕದ ಅಧ್ಯಕ್ಷ ಮಿಥುನ ಕೊಡೆತ್ತೂರು, ಪದಾಧಿಕಾರಿಗಳಾದ ವೀಣಾ ಶಶಿಧರ್, ಎರಿಕ್ ಪಾಯಸ್, ಪ್ರಕಾಶ್ ಆಚಾರ್, ಸ್ವರಾಜ್ ಶೆಟ್ಟಿ, ದೇವದಾಸ ಮಲ್ಯ, ಕೃಷ್ಣರಾಜ ಭಟ್, ಮಾಧವ ಕೆರೆಕಾಡು, ಪಂಚಾಯಿತಿ ಸದಸ್ಯ ಜಿತೇಂದ್ರ ಕರ್ಕೇರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.