ಮಂಗಳೂರು: ಜಪ್ಪಿನಮೊಗರುವಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಮುಂಜಾನೆ ಫೋಕ್ಸ್‌ವ್ಯಾಗನ್ ಕಾರು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದಕ್ಕೆ ಚಾಲಕ ಮದ್ಯಪಾನ ಮಾಡಿದ್ದುದೇ ಕಾರಣ ಎಂದು ಗೊತ್ತಾಗಿದೆ.
‘ಬುಧವಾರ ಮುಂಜಾನೆ ಸಂಭವಿಸಿದ್ದ ಈ ಅಪಘಾತಕ್ಕೆ ಅಮನ್ ರಾವ್ ಮದ್ಯ ಸೇವನೆ ಮಾಡಿ ಅತೀವೇಗದಲ್ಲಿ ಕಾರು ಚಲಾಯಿಸಿದ್ದುದೇ ಕಾರಣ ಎಂದು ತನಿಖೆಯಲ್ಲಿ ಕಂಡುಬಂದಿದೆ’ ಎಂದು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಜಪ್ಪಿನಮೊಗರುವಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಅಮನ್ ರಾವ್ (22) ಹಾಗೂ ಸಹ ಪ್ರಯಾಣಿಕ ಓಂಶ್ರೀ (24) ಮೃತಪಟ್ಟಿದ್ದರು. ಸಹ ಪ್ರಯಾಣಿಕರಾದ ಆಶಿಷ್, ವಿದೇಶಿ ಪ್ರಜೆ ಜೆರಿ ಹಾಗೂ ವಂಶಿ ಗಾಯಗೊಂಡಿದ್ದರು.
‘ಈ ಅಪಘಾತದ ಬಗ್ಗೆ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 281 (ಸಾರ್ವಜನಿಕ ರಸ್ತೆಯಲ್ಲಿ ಅತಿವೇಗದ ಚಾಲನೆ) , 125(ಎ) ಮತ್ತು 125(ಬಿ) (ಬೇರೆಯವರ ಜೀವದ ಸುರಕ್ಷತೆಗೆ ಧಕ್ಕೆ ತರುವುದು, ಅಪಾಯಕ್ಕೆ ಒಡ್ಡುವುದು), ಸೆಕ್ಷನ್ 106(1)ರ (ನಿರ್ಲಕ್ಷ್ಯದಿಂದ ಸಾವು ಸಂಭವಿಸುವುದಕ್ಕೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 183 (ಮಿತಿ ಮೀರಿದ ವೇಗದಲ್ಲಿ ವಾಹನ ಚಲಾವಣೆ) ಮತ್ತು 185 (ಪಾನಮತ್ತರಾಗಿ ವಾಹನ ಚಲಾವಣೆ) ಅನ್ನೂ ಈ ಪ್ರಕರಣದಲ್ಲಿ ಅನ್ವಯಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
‘ಪಾನಮತ್ತರಾಗಿ ವಾಹನ ಚಲಾಯಿಸಿದಲ್ಲಿ ರಸ್ತೆ ಅಪಘಾತ ಉಂಟಾಗಿ ಸಾವು ನೋವುಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಇದರಿಂದ ಸಂತ್ರಸ್ತ ಕುಟುಂಬ ಮತ್ತು ಅವಲಂಬಿತರು ದುಃಖ ಅನುಭವಿಸಬೇಕಾಗುತ್ತದೆ. ಪಾನಮತ್ತರಾಗಿ ವಾಹನ ಚಲಾಯಿಸಿದರೆ ಭಾರತೀಯ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 185 ಅನ್ವಯ ಪ್ರಕರಣ ದಾಖಲಿಸಿ ₹10 ಸಾವಿರ ದಂಡ ವಿಧಿಸಲಾಗುತ್ತದೆ. ಅತೀವೇಗದಿಂದ ವಾಹನ ಚಲಾಯಿಸಿದರೆ ಐಎಂವಿ ಕಾಯ್ದೆಯ ಸೆಕ್ಷನ್ 183ರನ್ವಯ ಪ್ರಕರಣ ದಾಖಲಿಸಿ ಲಘು ವಾಹನಗಳಿಗೆ ₹ 1 ಸಾವಿರ ಹಾಗೂ ಭಾರಿ ವಾಹನಗಳಿಗೆ ₹ 2 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ‘ ಎಂದು ಅವರು ತಿಳಿಸಿದ್ದಾರೆ.
‘ಮದ್ಯ ಸೇವಿಸಿರುವಾಗ ವಾಹನ ಚಾಲನೆ ಮಾಡಬಾರದು. ಅತೀವೇಗದಿಂದ ವಾಹನ ಚಲಾಯಿಸಬಾರದು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.