ADVERTISEMENT

‘ಶಿಸ್ತಿನ ಓದಿನಿಂದ ಯಶಸ್ಸು ಖಚಿತ’

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 14:49 IST
Last Updated 2 ನವೆಂಬರ್ 2021, 14:49 IST
ತಾಯಿ ಅನಿತಾ ಜೊತೆ ಜಶಾನ್
ತಾಯಿ ಅನಿತಾ ಜೊತೆ ಜಶಾನ್   

ಮಂಗಳೂರು: ‘ಕಲಿಕೆಯನ್ನು ನನ್ನ ಖುಷಿಯಾಗಿಸಿಕೊಂಡು, ಓದಿದ್ದೇನೆ. ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡು, ಸ್ವಯಂ ಶಿಸ್ತನ್ನು ಮೀರದೆ, ಓದಿನಲ್ಲಿ ತೊಡಗಿಕೊಳ್ಳಬೇಕು. ನಮ್ಮ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇಟ್ಟುಕೊಳ್ಳಬೇಕು’ ಎಂದು ನೀಟ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರ್‍ಯಾಂಕ್ ಪಡೆದಿರುವ ಜಶಾನ್ ಛಾಬ್ರಾ ಅಭಿಪ್ರಾಯಪಟ್ಟರು.

ಇಲ್ಲಿನ ಆಕಾಶ್ ಇನ್‌ಸ್ಟಿಟ್ಯೂಟ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನರ ಪ್ರಾಣ ಉಳಿಸುವ ಉತ್ತಮ ವೈದ್ಯನಾಗುವುದು ನನ್ನ ಗುರಿ. ಶಿಕ್ಷಕಿಯಾಗಿರುವ ನನ್ನ ತಾಯಿ ಅನಿತಾ ಸಾಧನೆಗೆ ಮೊದಲ ಪ್ರೇರಣೆ’ ಎಂದರು.

ನೀಟ್ ಪರೀಕ್ಷೆಯಲ್ಲಿ ಜಶಾನ್, 720 ಅಂಕಗಳಲ್ಲಿ 717 ಅಂಕಗಳಿಸಿ ಸಾಧನೆ ಮಾಡಿದ್ದಾರೆ. ಪಂಜಾಬ್‌ನ ಪಟಿಯಾಲದ ಜಶಾನ್ ತಂದೆ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದವರು ಇಲ್ಲಿಯೇ ನೆಲೆಸಿದ್ದಾರೆ. ಜೆಇಇ 2020ರ ಪರೀಕ್ಷೆಯಲ್ಲಿ ಶೇ 99.1 ಅಂಕ ಗಳಿಸಿರುವ ಅವರು, ಕೇಂದ್ರ ಸರ್ಕಾರದ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹ್ ಯೋಜನೆಯ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದರು. ಆಕಾಶ್ ರಾಷ್ಟ್ರೀಯ ಸ್ಕಾಲರ್‌ಷಿಪ್‌ ಪಡೆದಿದ್ದರು. ಜಶಾನ್, ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಶೇ 97.2 ಪಡೆದು ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು ಎಂದು ಆಕಾಶ್ ಇನ್‌ಸ್ಟಿಟ್ಯೂಟ್ ಮಂಗಳೂರು ಶಾಖೆ ಮುಖ್ಯಸ್ಥ ಅಶ್ವಿನ್ ಪ್ರಭು ತಿಳಿಸಿದರು.

ADVERTISEMENT

ಕೇಂದ್ರದ ಹಿರಿಯ ಶೈಕ್ಷಣಿಕ ನಿರ್ದೇಶಕ ಸುಧೀರ್ ಕುಮಾರ್, ಜಶಾನ್ ತಾಯಿ ಅನಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.