
ಮಂಗಳೂರು: ಸಿಂಗಪುರದಲ್ಲಿ ನಡೆದ ಏಷಿಯನ್ ಫೋಟೊಗ್ರಫಿಕ್ ಯೂನಿಯನ್ ಹಾಗೂ ಗೋಲ್ಡನ್ ಪಿಕಾಕ್ ಅವಾರ್ಡ್ ನೀಡುವ ‘ಗೋಲ್ಡ್ ಆಫ್ ಗೋಲ್ಡನ್ ಮೆಡಲ್’ ಪ್ರಶಸ್ತಿಯು ಮೂಡುಬಿದಿರೆಯ ಜಿನೇಶ್ ಪ್ರಸಾದ್ ಅವರಿಗೆ ದೊರೆತಿದೆ.
ಈ ಪ್ರಶಸ್ತಿಗೆ ಆಯ್ಕೆಯಾಗುವ ಪೂರ್ವದಲ್ಲಿ ವಿಶ್ವದ ವಾರ್ಷಿಕ ಟಾಪ್ 10 ಛಾಯಾಚಿತ್ರಕಾರ ಮತ್ತು ಪ್ರದರ್ಶನಕಾರರಾಗಿ ಅರ್ಹತೆ ಹೊಂದಿರಬೇಕಾಗುತ್ತದೆ. ಸತತ ಮೂರು ವರ್ಷಗಳಿಂದ ಟಾಪ್ ಟೆನ್ ಛಾಯಾಚಿತ್ರ ಪ್ರದರ್ಶನಕಾರರ ಪಟ್ಟಿಯಲ್ಲಿ ಜಿನೇಶ್ ಹೆಸರಿತ್ತು ಎಂದು ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಕಾಪಿಕಾಡ್ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಈ ಪ್ರಶಸ್ತಿಗೆ ಆಯ್ಕೆಯಾಗಲು ವರ್ಷದಲ್ಲಿ 12 ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದ ಛಾಯಾಚಿತ್ರಗಳು ಪ್ರದರ್ಶನಗೊಂಡಿರಬೇಕು. ಜಿನೇಶ್ ಅವರ ಛಾಯಾಚಿತ್ರಗಳು ಸಿಂಗಪುರ, ರಷ್ಯಾ, ಉಕ್ರೇನ್, ಬೋಸ್ನಿಯಾ, ಮಲೇಷ್ಯಾ, ಗ್ರೀಸ್ ಮೊದಲಾದ ದೇಶಗಳಲ್ಲಿ ಪ್ರದರ್ಶನಗೊಂಡಿವೆ’ ಎಂದರು.
30 ವರ್ಷಗಳಿಂದ ಛಾಯಾಚಿತ್ರಕಾರರಾಗಿರುವ ಜಿನೇಶ್ ಈ ಹಿಂದೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ನೀಡುವ ಚಿತ್ರಾಂಜಲಿ ಪ್ರಶಸ್ತಿ ಪಡೆದಿದ್ದರು ಎಂದರು.
ವಿದೇಶಗಳ ಪ್ರಶಸ್ತಿ, ಛಾಯಾಚಿತ್ರ ಪ್ರದರ್ಶನಗಳು ದೇಶೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುತ್ತವೆ ಎಂದು ಜಿನೇಶ್ ಪ್ರಸಾದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.