ಫಕ್ಕೀರಪ್ಪ ಹಣಮಪ್ಪ ಮಾದರ
ಮಂಗಳೂರು: ಜೋಕಟ್ಟೆಯ ಮನೆಯೊಂದರಲ್ಲಿ 13 ವರ್ಷದ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಲೆ ಮಾಡಿದ ಪ್ರಕರಣದ ಆರೋಪಿಯನ್ನು ಪಣಂಬೂರು ಠಾಣೆಯ ಪೊಲೀಸರು ಕೃತ್ಯ ನಡೆದ 24 ಗಂಟೆಯ ಒಳಗೆ ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಪರಸಘಡ ಹಂಚಿನಾಳದ ಫಕ್ಕೀರಪ್ಪ ಹಣಮಪ್ಪ ಮಾದರ (51) ಬಂಧಿತ ಆರೋಪಿ. ಆರು ತಿಂಗಳಿನಿಂದ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಆರೋಪಿ ಬಾಲಕಿ ವಾಸವಿದ್ದ ಮನೆಯವರಿಗೆ ಪರಿಚಿತನಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಕೊಲೆಯಾದ ಬಾಲಕಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನವಳು. ಆಕೆ ಕೈ ನೋವಿನ ಚಿಕಿತ್ಸೆ ಸಲುವಾಗಿ ಜೋಕಟ್ಟೆಯಲ್ಲಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಳು. ಆ ಮನೆಯವರೆಲ್ಲ ಮಂಗಳವಾರ ಕೆಲಸಕ್ಕೆ ತೆರಳಿದ ಬಳಿಕ ಫಕ್ಕೀರಪ್ಪ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಬಾಲಕಿ ಪ್ರತಿಭಟಿಸಿದ್ದರಿಂದ ಆಕೆಯನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. ಆತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೋ, ಇಲ್ಲವೋ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ದೃಢಪಡಲಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ತನಿಖೆಯು ಮುಂದುವರೆದಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಪಣಂಬೂರು ಠಾಣಾಧಿಕಾರಿ ಮೊಹಮ್ಮದ್ ಸಲೀಂ ಅಬ್ಬಾಸ್, ಕಾನೂನು ಸುವ್ಯವಸ್ಥೆ ವಿಭಾಗದ ಎಸ್‌ಐ ಶ್ರೀಕಲಾ ಕೆ.ಟಿ, ಎ.ಎಸ್.ಐ ಕೃಷ್ಣ ಬಿ.ಕೆ. ಹೆಡ್ ಕಾನ್‌ಸ್ಟೆಬಲ್‌ಗಳಾದ ಸತೀಶ್ ಎಂ.ಆರ್, ಸಯ್ಯದ್ ಇಮ್ತಿಯಾಜ್, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಶಶಿಕುಮಾರ್, ರಾಕೇಶ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
‘ಅಮಾಯಕನಂತೆ ನಟಿಸಿದ್ದ ಆರೋಪಿ’
‘ಕೃತ್ಯವೆಸಗಿದ್ದ ಆರೋಪಿಯು ಪೊಲೀಸರು ಮಹಜರು ನಡೆಸುವಾಗಲೂ ಸ್ಥಳದಲ್ಲೇ ಇದ್ದ. ಕೃತ್ಯದ ಬಗ್ಗೆ ಏನೂ ಗೊತ್ತಿಲ್ಲದ ಅಮಾಯಕನಂತೆ ನಟಿಸಿದ್ದ. ಕೃತ್ಯ ನಡೆದ ಮನೆಗೆ ಆತ ಹೋಗಿ ಬರುತ್ತಿದ್ದ ಬಗ್ಗೆ ಕೆಲವರು ಮಾಹಿತಿ ನೀಡಿದ್ದರು. ಆತನ ಚಲನವಲನದಿಂದ ಸಂಶಯಗೊಂಡು ವಶಕ್ಕೆ ಪಡೆದು ವಿಚಾರಣೆ ನಡಸಿದಾಗಿ ಕೊಲೆ ನಡೆಸಿದ್ದನ್ನು ಒಪ್ಪಿಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.