ADVERTISEMENT

ಕಾಲಭೈರವ ದೇವಸ್ಥಾನ ಬ್ರಹ್ಮಕಲಶ: ಫೆ 3ರಿಂದ

ಕದ್ರಿ ದೇವಸ್ಥಾನದಿಂದ ಕದಳಿ ಯೋಗೇಶ್ವರ ಮಠಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 12:45 IST
Last Updated 30 ಜನವರಿ 2023, 12:45 IST
ಶ್ರೀಕಾಲಭೈರವ ದೇವಸ್ಥಾನ
ಶ್ರೀಕಾಲಭೈರವ ದೇವಸ್ಥಾನ   

ಮಂಗಳೂರು: ಕದ್ರಿ ಸುವರ್ಣ ಕದಳಿ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಫೆ.3ರಿಂದ ಫೆ. 6ರವರೆಗೆ ನಡೆಯಲಿವೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ‘ಶ್ರೀ ಕಾಲಭೈರವ ದೇವರ ಮತ್ತು ಪರಿವಾರ ಗುಡಿಗಳು ಹಾಗೂ ಪೌಳಿಯ ಪುನರ್ ನಿರ್ಮಾಣ ಕಾರ್ಯಗಳು ಸುಮಾರು ₹10 ಕೋಟಿ ವೆಚ್ಚದಲ್ಲಿ ನಡೆದಿವೆ. ಶ್ರೀಯೋಗೇಶ್ವರ ಮಠದ ಶ್ರೀ ರಾಜಯೋಗಿ ನಿರ್ಮಲನಾಥಜೀ ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವದ ಸಿದ್ಧತೆ ನಡೆಯುತ್ತಿದೆ. ರಾಜಸ್ಥಾನ, ಹರಿಯಾಣ, ಗುಜರಾತ್‌ನಿಂದ ಹಾಗೂ ರಾಜ್ಯದ ವಿವಿಧ ಭಾಗಗಳ ಭಕ್ತರು ಸೇರಿ ಒಟ್ಟು 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

‘ಬ್ರಹ್ಮಕಲಶೋತ್ಸವ ಪ್ರಯುಕ್ತ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ ಕದಳಿ ಶ್ರೀ ಯೋಗೇಶ್ವರ ಮಠಕ್ಕೆ ಫೆ.3ರಂದು ಸಂಜೆ 3ಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಫೆ.4ರಂದು ಬೆಳಿಗ್ಗೆ 9ಕ್ಕೆ ನಿರ್ಮಲನಾಥಜೀ ಪೂರ್ಣಕುಂಭ ಶೋಭಾಯಾತ್ರೆ ಮಠದಿಂದ ಹೊರಟು, ಪದವು, ನಂತೂರು, ಮಲ್ಲಿಕಟ್ಟೆ, ಕದ್ರಿ ದೇವಸ್ಥಾನ, ಸರ್ಕೀಟ್‌ ಹೌಸ್ ಮಾರ್ಗವಾಗಿ ಸಾಗಿ ಮಠಕ್ಕೆ ಮರಳಲಿದೆ. ಸಂಜೆ 5ರಿಂದ ಸಭಾ ಕಾರ್ಯಕ್ರಮ, ಸಂಜೆ 7ರೊಂದ ಸಾಂಸ್ಕೃತಿಕ ಕಾರ್ಯಕ್ರಮನಡೆಯಲಿದೆ. ಫೆ.5ರಂದು ಬೆಳಿಗ್ಗೆ 9ರಿಂದ ಪಂಚ ಕುಂಡ ರುದ್ರಯಾಗ ಹಾಗೂ ಸಂಜೆ 5ಕ್ಕೆ ನಿರ್ಮಲ್‌ನಾಥ್‌ಜೀ ಮಹಾರಾಜ್‌ ಚಂಡಿಕಾ ಹವನ ನೆರವೇರಿಸಲಿದ್ದಾರೆ. ಬಳಿಕ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಫೆ.6ರಂದು ಬೆಳಿಗ್ಗೆ 7ರಿಂದ ಶಿಖರ ಪ್ರತಿಷ್ಠೆ, ಕಾಲಭೈರವ ಹಾಗೂ ಪರಿವಾರ ದೇವರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಾಥ ಪಂಥದ ಪ್ರಕಾರ ನಡೆಯಲಿದೆ. ಕಾಲಬೈರವ ದೇವರಿಗೆ ರೋಟ್‌ಪೂಜೆ ಹಾಗೂ ಪ್ರಸನ್ನ ಪೂಜೆ ನೆರವೇರಲಿದೆ. ಸಂಜೆ 3ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ’ ಎಂದು ಅವರು ವಿವರಿಸಿದರು.

ADVERTISEMENT

ಸಲಹೆಗಾರ ಹರಿನಾಥ್‌, ‘ಕಾಲಭೈರವೇಶ್ವರ ದೇವಸ್ಥಾನಕ್ಕೆ 4 ಸಾವಿರ ವರ್ಷಗಳ ಇತಿಹಾಸವಿದೆ. ಜೋಗಿ ಸಮುದಾಯದವರ ಜೊತೆಗೆ ವಿವಿಧ ಜಾತಿ ಧರ್ಮಗಳ ಜನರು ಭಕ್ತಿಯಿಂದ ಈ ದೇವರನ್ನು ಆರಾಧಿಸುತ್ತಾರೆ’ ಎಂದರು.

ಬ್ರಹ್ಮಕಲ ಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಜೋಗಿ, ಖಜಾಂಚಿ ಶಿವರಾಮ್ ವಿ.ಜೋಗಿ, ಕಾರ್ಯದರ್ಶಿ ಡಾ.ಚಂದ್ರಶೇಖರ್ ಕೆ., ಸಲಹೆಗಾರರಾದ ಡಾ.ಕೇಶವನಾಥ್, ಗಂಗಾಧರ ಬಿ., ಕಿರಣ್ ಕುಮಾರ್ ಜೋಗಿ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.