ADVERTISEMENT

ಕಮ್ಯುನಿಷ್ಟ್ ಪಕ್ಷಗಳು ಒಂದಾಗಲಿ: ಡಾ.ಸಿದ್ಧನಗೌಡ ಪಾಟೀಲ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 12:56 IST
Last Updated 11 ಆಗಸ್ಟ್ 2019, 12:56 IST

ಮಂಗಳೂರು: ‘ಕಮ್ಯುನಿಸ್ಟ್ ಪಕ್ಷಗಳು ಒಂದಾಗಬೇಕು ಮತ್ತು ಕಾಸರಗೋಡು ಕರ್ನಾಟಕದಲ್ಲಿ ಸೇರಬೇಕು’ ಎಂಬುದು ಬಿ.ವಿ.ಕಕ್ಕಿಲ್ಲಾಯ ಕನಸಾಗಿದ್ದರೆ, ‘ಕರಾವಳಿಯಲ್ಲಿನ ಕೋಮುವಾದದ ಬಗ್ಗೆ ಅವರಿಗೆ ತೀವ್ರ ಬೇಸರವಿತ್ತು.’ –ನಗರದಲ್ಲಿ ಭಾನುವಾರ ಬಿ.ವಿ.ಕಕ್ಕಿಲಾಯ ಶತಾಬ್ದಿ ಕಾರ್ಯಕ್ರಮದಲ್ಲಿ ‘ಬಿ.ವಿ. ಕಕ್ಕಿಲ್ಲಾಯ: ಮಲಬಾರಿನಿಂದ ಕರ್ನಾಟಕ ವಿಧಾನಸಭೆಯವರೆಗೆ’ವಿಷಯ ಕುರಿತು ಸಿಪಿಐ ಮುಖಂಡ ಡಾ. ಸಿದ್ಧನಗೌಡ ಪಾಟೀಲ್‌ ಹೇಳಿದರು.

‘ಮೇಲ್ವರ್ಗದಿಂದ ಕಮ್ಯುನಿಸ್ಟ್ ಹೋರಾಟಕ್ಕೆ ಬರುವವರಿಗೆ ಬಹಳ ಕಷ್ಟ. ಸೈದ್ಧಾಂತಿಕ ಬದ್ಧತೆಯೇ ಸವಾಲಾಗುತ್ತದೆ. ಅವರು ಕೆಳವರ್ಗೀಕರಣಗೊಳ್ಳಬೇಕಾಗುತ್ತದೆ. ಈ ನಿಟ್ಟಿನ ವೈಚಾರಿಕ ಹೆಜ್ಜೆಯಾಗಿ ಕಕ್ಕಿಲ್ಲಾಯರು ಜುಟ್ಟು ಮತ್ತು ಜನಿವಾರವನ್ನು ತ್ಯಜಿಸಿದ್ದರು’ ಎಂದ ಅವರು, ‘ತನ್ನನ್ನು ತಾನು ಗೆಲ್ಲುವ ಸಂಯಮವೇ ನೈಜ ಕಮ್ಯುನಿಸ್ಟ್‌ ಬದ್ಧತೆ’ ಎಂದರು.

‘ಕರಾವಳಿ, ನರಗುಂದ–ನವಲಗುಂದ, ಕೊಯ್ನಾ ಅಣೆಕಟ್ಟೆ ಸೇರಿದಂತೆ ರಾಜ್ಯದ ಹಲವಾರು ಹೋರಾಟಗಳಲ್ಲಿ ಅವರು ಪಾಲ್ಗೊಂಡಿದ್ದರು. ನನ್ನನ್ನು ಅಪ್ಪಟ್ಟ ಕಮ್ಯುನಿಸ್ಟ್ ಆಗಿ ರೂಪಿಸಲು ಜೈಲುವಾಸ ಸಹಕಾರಿಯಾಯಿತು’ ಎಂದು ಅವರು ಹೇಳಿಕೊಂಡಿದ್ದರು’ ಎಂದರು.

ADVERTISEMENT

‘ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿ ವಿರೋಧಿಯಾಗಿದ್ದ ಮತೀಯ ಶಕ್ತಿಗಳೇ, ಬಳಿಕ ಕಾಂಗ್ರೆಸ್‌ ಸೇರಿ ಅಧಿಕಾರದತ್ತ ಬಂದವು ಎಂದು ಅವರು ಹೇಳಿದ್ದರು. ಕರ್ನಾಟಕ ಏಕೀಕರಣದ ಬಗ್ಗೆ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರು ಎದುರು ದಿಟ್ಟವಾಗಿ ಮಾತನಾಡಿದ್ದ ಏಕೈಕ ಕನ್ನಡಿಗರಾಗಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.