ADVERTISEMENT

ಕಾಲಿಯ ರಫೀಕ್ ಕೊಲೆ ಆರೋಪಿಗಳು ಖುಲಾಸೆ

ಕೋಟೆಕಾರು: ಕಾರಿಗೆ ಲಾರಿ ಗುದ್ದಿಸಿ, ಗುಂಡು ಹೊಡೆದು, ತಲವಾರಿನಿಂದ ಕಡಿದು ಕೊಲೆ ಮಾಡಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 15:55 IST
Last Updated 25 ಸೆಪ್ಟೆಂಬರ್ 2024, 15:55 IST
.
.   

ಮಂಗಳೂರು: ಉಳ್ಳಾಲ ತಾಲ್ಲೂಕಿನ ಕೋಟೆಕಾರಿನಲ್ಲಿ ಕಾಲಿಯ ರಫೀಕ್ ಎಂಬಾತನ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯವು ಖುಲಾಸೆಗೊಳಿಸಿದೆ.

2017 ಫೆ. 14ರಂದು ಕೋಟೆಕಾರು ಗ್ರಾಮದ ಪೆಟ್ರೋಲ್‌ ಬಂಕ್‌ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲಿಯ ರಫೀಕ್‌ ಮತ್ತು ಆತನ ಸಹಚರರು ಪ್ರಯಾಣಿಸುತ್ತಿದ್ದ ಕಾರಿಗೆ ಟಿಪ್ಪರ್‌ ಲಾರಿಯನ್ನು ಡಿಕ್ಕಿ ಹೊಡೆಸಲಾಗಿತ್ತು. ಕಾರಿನಿಂದ  ಇಳಿದು ಪೆಟ್ರೋಲ್ ಬಂಕ್‌ನತ್ತ ಓಡಿದ್ದ ರಫೀಕ್‌ನನ್ನು ಬೆನ್ನತ್ತಿದ್ದ ದುಷ್ಕರ್ಮಿಗಳು ಪಿಸ್ತೂಲಿನಿಂದ ಗುಂಡು ಹಾರಿಸಿ ಹಾಗೂ ತಲವಾರಿನಿಂದ  ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳಾದ ನೂರಲಿ, ಜಿಯಾ ಅಲಿಯಾಸ್‌ ಇಸುಬು ಶಿಯಾದ್, ಹುಸೈನಬ್ಬ, ಕಲಂದರ್ ಶಾಫಿ, ರಶೀದ್ ಟಿ.ಎಸ್‌,  ಮಜೀಬ್ ಅಲಿಯಾಸ್‌ ನಜೀಬ್‌, ಹ್ಯಾರಿಸ್‌, ತಸ್ಲಿಮ್‌ ಹಾಗೂ ಷೆಲಿತ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದ ಕೆ.ಆ‌ರ್.ಗೋಪಿಕೃಷ್ಣ ಅವರು ನ್ಯಾಯಾಲಯಕ್ಕೆ 2017ರಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. 

ADVERTISEMENT

ನೂರಲಿ ಹಾಗೂ ಇತರ ಆರೋಪಿಗಳು ಕೃತ್ಯಕ್ಕೆ ಮುನ್ನ ಕೇರಳ ರಾಜ್ಯದ ಮಂಜೇಶ್ವರ ತಾಲ್ಲೂಕಿನ ಹಿದಾಯತ್ ನಗರ ಕ್ಲಬ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಸೇರಿಕೊಂಡು ಕೊಲೆಗೆ ಸಂಚುರೂಪಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಆರೋಪಿ ಹುಸೈನಬ್ಬ ತಲೆಮರೆಸಿಕೊಂಡಿದ್ದ. ತಸ್ಲಿಮ್‌ ಮೃತಪಟ್ಟಿದ್ದ. ಕಲಂದರ್ ಶಾಫಿ ಹಾಗೂ ಹ್ಯಾರಿಸ್‌ನನ್ನು ಪೊಲೀಸರು ಬಂಧಿಸಿರಲಿಲ್ಲ. ಆರೋಪಿಗಳಾದ ನೂರಲಿ, ಜಿಯಾ, ರಶೀದ್, ಮಜೀಬ್‌ನನ್ನು ನಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. 31 ಮಂದಿ ಸಾಕ್ಷ್ಯ ಹೇಳಿದ್ದರು. 68 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಅವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ ಎಂದು ವಕೀಲ ಅಬ್ದುಲ್‌ ಅಜೀಜ್‌ ತಿಳಿಸಿದರು. ಆರೋಪಿಗಳ ಪರವಾಗಿ ವಕೀಲ  ವೈ. ವಿಕ್ರಮ್ ಹೆಗ್ಡೆ , ರಾಜೇಶ್ ಕೆ.ಜಿ. ಹಾಗೂ ಅಬ್ದುಲ್ ಅಜೀಜ್ ಬಾಯರ್ ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.