
ಕಲ್ಲಡ್ಕ ಪ್ರಭಾಕರ ಭಟ್
ಪುತ್ತೂರು: ಕೋಮು ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡುವ ಭಾಷಣ ಮಾಡಿದ ಆರೋಪದಲ್ಲಿ ತನ್ನ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ನಿರೀಕ್ಷಣಾ ಜಾಮೀನು ಕೋರಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಿತು.
ಪ್ರಕರಣದ ದೂರುದಾರರಾದ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಅವರು ಪ್ರಾಸಿಕ್ಯೂಶನ್ ಜತೆ ವಾದ ಮಂಡನೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು, ಪ್ರಾಸಿಕ್ಯೂಶನ್ ಜತೆ ಸೇರಿ ವಾದ ಮಂಡನೆಗೆ ಅವಕಾಶ ಕಲ್ಪಿಸಿ, ವಿಚಾರಣೆಯನ್ನು ಡಿ.5ಕ್ಕೆ ಮುಂದೂಡಿದೆ.
ಡಾ.ಪ್ರಭಾಕರ ಭಟ್ ಅವರಿಗೆ ಈಗಾಗಲೇ ನ್ಯಾಯಾಲಯ ನೀಡಿರುವ ಮಧ್ಯಂತರ ಜಾಮೀನು ಅವಧಿ ವಿಸ್ತರಣೆಯಾಗಿದ್ದು, ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಸರ್ಕಾರಿ ಅಭಿಯೋಜಕರು ಈಗಾಗಲೇ ಆಕ್ಷೇಪಣೆ ಸಲ್ಲಿಸಿದ್ದಾರೆ. ಡಾ.ಪ್ರಭಾಕರ ಭಟ್ ಅವರ ಪರವಾಗಿ ವಕೀಲ ಮಹೇಶ್ ಕಜೆ ವಾದಿಸುತ್ತಿದ್ದಾರೆ.
ತಾಲ್ಲೂಕಿನ ಇರ್ದೆ ಗ್ರಾಮದ ಉಪ್ಪಳಿಗೆಯಲ್ಲಿ ಅ.20ರಂದು ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡುವ ಭಾಷಣ ಮಾಡಿದ ಆರೋಪದಲ್ಲಿ ಕಲ್ಲಡ್ಕ ಡಾ.ಪ್ರಭಾಕರ ಭಟ್ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.