ADVERTISEMENT

ಮೂಡುಬಿದಿರೆ: ಅಬ್ಬಕ್ಕ ಗ್ರಾಮದಲ್ಲಿ ಕಂಬಳ ವೈಭವ

ಕರಾವಳಿಯ ಕ್ರೀಡೆ ಸಂರಕ್ಷಣೆಗೆ ಯುವಜನರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 16:31 IST
Last Updated 1 ಅಕ್ಟೋಬರ್ 2021, 16:31 IST
ಕಂಬಳದ ಕರೆಯಲ್ಲಿ ಕೋಣಗಳನ್ನು ಓಡಿಸುವ ತಾಲೀಮು
ಕಂಬಳದ ಕರೆಯಲ್ಲಿ ಕೋಣಗಳನ್ನು ಓಡಿಸುವ ತಾಲೀಮು   

ಮೂಡುಬಿದಿರೆ: ಕಂಬಳ ಕ್ರೀಡೆಯಲ್ಲಿ ಯುವ ಜನರನ್ನು ತೊಡಗಿಸುವ ಉದ್ದೇಶದೊಂದಿಗೆ ಮೂಡುಬಿದಿರೆಯ ಕಡಲಕೆರೆ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯು 15 ದಿನಗಳ ಕಂಬಳ ಕ್ರೀಡಾ ತರಬೇತಿಯನ್ನು ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿರುವ ಕೋಟಿ–ಚನ್ನಯ ಕಂಬಳ ಕ್ರೀಡಾ ಮೈದಾನದಲ್ಲಿ ಆಯೋಜಿಸಿದೆ.

ಶುಕ್ರವಾರ ಮೂಡುಬಿದಿರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಪ್ರೊ. ಕೆ. ಗುಣಪಾಲ ಕಡಂಬ ಅವರು, ‘ಆರನೇ ಬಾರಿಯ ತರಬೇತಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿದ್ದು, ಅಕ್ಟೋಬರ್ 4ರಂದು ಕೊನೆಗೊಳ್ಳಲಿದೆ. ಈ ವರ್ಷ 18ರಿಂದ 25ರ ವಯೋಮಾನದ ಸುಮಾರು 219 ಜನರು ಅರ್ಜಿ ಸಲ್ಲಿಸಿದ್ದು, ಅಂತಿಮವಾಗಿ 33 ಜನರನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯವರು ಇದ್ದಾರೆ’ ಎಂದರು.

‘ಶಿಬಿರಾರ್ಥಿಗಳಿಗೆ ವೇಳಾಪಟ್ಟಿ ನಿಗದಿಪಡಿಸಿ, ಅದರಂತೆ ತರಬೇತಿ ನೀಡಲಾಗುತ್ತದೆ. ಕಂಬಳ ತರಬೇತಿಯ ಜೊತೆಗೆ ಯೋಗ, ಕಂಬಳ ಕೋಣಗಳ ಆರೈಕೆ, ಅವುಗಳ ಆಹಾರ ಸಿದ್ಧತೆ, ‘ಬಡು’ (ಬಿದಿರಿನ ಕೋಲು) ತಯಾರಿಕೆ, ‘ಪೊನಕೆ’ ಹೆಣಿಕೆ ತಯಾರಿಕೆಯನ್ನು ಕಲಿಸಲಾಗುತ್ತದೆ. ತುಳುನಾಡಿನ ಸಂಸ್ಕೃತಿಯ ಬಗ್ಗೆಯೂ ತಿಳಿಸಲಾಗುತ್ತದೆ. ಕೋಣಗಳ ಮಾಲೀಕರು 40 ಕೋಣಗಳನ್ನು ತರಬೇತಿಗಾಗಿ ನೀಡಿದ್ದಾರೆ’ ಎಂದರು.

ADVERTISEMENT

ವಸಂತ್ ಜೋಗಿ, ಜಾನ್ ಡಿಸಿಲ್ವ, ವಿಶ್ವನಾಥ ಪ್ರಭು ಶಿರ್ವ, ಸುರೇಶ್ ಶೆಟ್ಟಿ, ಅಜಿತ್‌ಕುಮಾರ್ ಜೈನ್, ಆದಿರಾಜ್ ಜೈನ್, ಶ್ರೀಧರ್, ದಿಲೀಪ್ ವಿನಯ್, ದಯಾನಂದ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡುತ್ತಿದ್ದಾರೆ. ತರಬೇತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಒಬ್ಬರಿಗೆ ಬಹುಮಾನ ನೀಡಲಾಗುತ್ತದೆ. ಅ.10ರಂದು ಆಯ್ದ ಶಿಬಿರಾರ್ಥಿಗಳಿಂದ ಪ್ರಾಯೋಗಿಕ ಕಂಬಳ ನಡೆಸಲಾಗುವುದು.ಕಂಬಳದ ಸಂಶೋಧನಾ ಕೇಂದ್ರ ಪ್ರಾರಂಭಿಸುವ ಯೋಚನೆ ಇದೆ. ಅಧ್ಯಯನಕ್ಕಾಗಿ ಕಂಬಳದ ಬಗ್ಗೆ ದಾಖಲಾತಿ ಮಾಡುವ ಯೋಜನೆಯೂ ಇದೆ ಎಂದು ವಿವರಿಸಿದರು.

ಅಕಾಡೆಮಿ ನಿರ್ದೇಶಕರಾದ ಸುರೇಶ್ ಪೂಜಾರಿ, ಅಪ್ಪಣ್ಣ, ಸೀತಾರಾಮ್ ಶೆಟ್ಟಿ, ಅಜಿತ್‌ ಕುಮಾರ್, ವಿಶ್ವನಾಥ್ ಇದ್ದರು.

‘ತರಬೇತಿಯಿಂದ ಕ್ರೀಡೆ ಕಲಿಯಲು ಅನುಕೂಲ’
‘ಕಂಬಳದಲ್ಲಿ ತುಂಬಾ ಆಸಕ್ತಿ ಇತ್ತು. ತರಬೇತಿಯಿಂದ ಕಂಬಳ ಕ್ರೀಡೆ ಕಲಿತುಕೊಳ್ಳಲು ಅನುಕೂಲವಾಯಿತು. ಶಾಲೆಗಳಲ್ಲಿ ಸದ್ಯ ಕ್ರೀಡಾ ಚಟುವಟಿಕೆ ನಡೆಯುತ್ತಿಲ್ಲ. ಈ ಸಂದರ್ಭವನ್ನು ಕಂಬಳ ಕ್ರೀಡೆ ಕಲಿಯಲು ಬಳಸಿಕೊಂಡೆ’ ಎಂದು ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಶಿಬಿರಾರ್ಥಿ ಶ್ರೀಜನ್ ರೈ ಅಭಿಪ್ರಾಯ ವ್ಯಕ್ತಪಡಿಸಿದರು.

‘ಕಂಬಳದ ಕೋಣಗಳಿಗೆ ಹುಲ್ಲಿನ ಜತೆಗೆ ನಿರ್ದಿಷ್ಟ ಆಹಾರವನ್ನು ಪ್ರತಿದಿನ ಪೂರೈಕೆ ಮಾಡಬೇಕಾಗುತ್ತದೆ. ತೀವ್ರ ಬಿಸಿಲು ಇದ್ದಾಗ ಸ್ನಾನ ಮಾಡಿಸಿ, ಅವುಗಳ ದೇಹವನ್ನು ತಂಪಾಗಿಡಬೇಕಾಗುತ್ತದೆ’ ಎಂದು ಕೋಣಗಳ ಮಾಲೀಕ ಗೋಪಾಲಕೃಷ್ಣ ಭಟ್ಟ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.