ಮಂಗಳೂರು: ಹೊರರಾಜ್ಯ, ಹೊರ ದೇಶಗಳಲ್ಲಿ ಕನ್ನಡ ನೆಲದ ಕಲೆಯನ್ನು ಪರಿಚಯಿಸುವ ಮೂಲಕ ಕನ್ನಡ ಭಾಷೆಯ ಉಳಿವಿಗೆ ಶ್ರಮಿಸುವ ಸಂಘಟನೆಗಳಿಗೆ ರಾಜ್ಯ ಸರ್ಕಾರ ಧನ ಸಹಾಯ ನೀಡಬೇಕು ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ಮಂಜುನಾಥ್ ಎಜುಕೇಷನ್ ಟ್ರಸ್ಟ್, ಹೃದಯ ವಾಹಿನಿ ಕರ್ನಾಟಕ ಹಾಗೂ ಎಸ್.ಕೆ. ಮುನ್ಸಿಪಲ್ ಎಂಪ್ಲಾಯಿಸ್ ಅಸೋಸಿಯೇಶನ್ ಸಹಯೋಗದಲ್ಲಿ ಗುರುವಾರ ಇಲ್ಲಿ ನಡೆದ ಅನಿವಾಸಿ ಕನ್ನಡಿಗರ ದ್ವಿತೀಯ ಸಮ್ಮೇಳನ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡ ಭಾಷೆ ಉಳಿವಿನ ತುಡಿತ ಅನಿವಾಸಿ ಕನ್ನಡಿಗರಲ್ಲಿ ನಮಗಿಂತ ಹೆಚ್ಚು ಇದೆ. ಸರ್ಕಾರ ಮಾಡಲಾಗದ ಕಾರ್ಯವನ್ನು ಸಂಘಟನೆಗಳು ಮಾಡುತ್ತಿವೆ. ಕರ್ನಾಟಕದಲ್ಲಿ ಕನ್ನಡ ಮಾತನಾಡಿದರೆ ಸಾಲದು, ಹೊರರಾಜ್ಯ, ಹೊರದೇಶಗಳಲ್ಲಿ ಕನ್ನಡದ ಕಂಪು ಹರಡಬೇಕು. ಇದು ಭಾಷೆಯ ಉಳಿವಿಗೆ ಮಹತ್ವದ ಕೊಡುಗೆಯಾಗಲಿದೆ. ಇಂತಹ ಸಂಘಟನೆಗಳನ್ನು ಸರ್ಕಾರ ಗುರುತಿಸಬೇಕು’ ಎಂದರು.
ಅನಿವಾಸಿ ಕನ್ನಡಿಗರ ಮೂರನೇ ಸಮ್ಮೇಳನವನ್ನು ಉತ್ತರ ಕರ್ನಾಟಕ ಭಾಗದಲ್ಲಿ ನಡೆಸುವಂತೆ ಆಹ್ವಾನ ನೀಡಿದ ಅವರು, ಸಂಪೂರ್ಣ ಸಹಕಾರದ ಭರವಸೆ ನೀಡಿದರು.
ಪ್ರಥಮ ಸಮ್ಮೇಳನದ ಅಧ್ಯಕ್ಷರಾಗಿದ್ದ ಸರ್ವೋತ್ತಮ ಶೆಟ್ಟಿ ಅಬುದಾಬಿ ಮಾತನಾಡಿ, ಕೈಯೊಡ್ಡಿ ಬಂದ ಅಸಹಾಯಕರಿಗೆ ನೆರವಾಗುವ ಉದಾತ್ತ ಮನದ ನಾಡು ಕರ್ನಾಟಕ. ವಿವಿಧತೆಯಲ್ಲಿ ಏಕತೆ ಹೊಂದಿರುವ ಕನ್ನಡ ನೆಲದಲ್ಲಿ ಹಲವು ಭಾಷಿಕರು ನೆಲೆಯೂರಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ ಉಳಿಯಬೇಕು ಎಂದರು.
ಅನಿವಾಸಿ ಕನ್ನಡಿಗ ಡೇವಿಡ್ ಫ್ರಾಂಕ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಗುರು ಬೆಳದಿಂಗಳು ಫೌಂಡೇಷನ್ ಅಧ್ಯಕ್ಷ ಪದ್ಮರಾಜ್ ಪೂಜಾರಿ, ಪ್ರಮುಖರಾದ ರಾಮ್ ಕೆ. ಶಿರೂರು, ರಾಧಾಕೃಷ್ಣ ಶೆಟ್ಟಿ, ಶಿವರಾಜ್ ಪಾಂಡೇಶ್ವರ, ಯೋಗೇಶ್ ಶೆಟ್ಟಿ ಜೆಪ್ಪು ಉಪಸ್ಥಿತರಿದ್ದರು. ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಸ್ವಾಗತಿಸಿದರು.
ಐವರು ದಂಪತಿಗೆ ಗೋಲ್ಡನ್ ಕಪಲ್ ಅವಾರ್ಡ್ ಸಾಧಕರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್ ಪ್ರದಾನ ಕವಿಗೋಷ್ಠಿ, ನೃತ್ಯ ವೈವಿಧ್ಯ, ಪುಸ್ತಕ ಬಿಡುಗಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.