ADVERTISEMENT

ಹೊಸ ವರ್ಷದಲ್ಲಿ ರಂಗೇರಲಿದೆ ಕರಾವಳಿ ಉತ್ಸವ

ಚಲನ ಚಿತ್ರೋತ್ಸವ, ಶ್ವಾನ ಮೇಳ, ಸಂಗೀತ ಸಂಜೆ, ಕಾರು– ಬೈಕ್‌ ಪ್ರದರ್ಶನಗಳ ಮೆರುಗು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 14:07 IST
Last Updated 30 ಡಿಸೆಂಬರ್ 2024, 14:07 IST
ಚಲನಚಿತ್ರೋತ್ಸವದ ಭಿತ್ತಿಪತ್ರವನ್ನು ಡಾ.ಅರುಣ್ ಕುಮಾರ್‌, ಮುಲ್ಲೈ ಮುಗಿಲನ್ ಎಂ.ಪಿ ಹಾಗೂ ಯತೀಶ್‌ ಎನ್‌. ಸೋಮವಾರ ಬಿಡುಗಡೆ ಮಾಡಿದರು
ಚಲನಚಿತ್ರೋತ್ಸವದ ಭಿತ್ತಿಪತ್ರವನ್ನು ಡಾ.ಅರುಣ್ ಕುಮಾರ್‌, ಮುಲ್ಲೈ ಮುಗಿಲನ್ ಎಂ.ಪಿ ಹಾಗೂ ಯತೀಶ್‌ ಎನ್‌. ಸೋಮವಾರ ಬಿಡುಗಡೆ ಮಾಡಿದರು   

ಮಂಗಳೂರು: ಕರಾವಳಿ ಉತ್ಸವವು ಹೊಸ ವರ್ಷದಲ್ಲಿ ಮತ್ತಷ್ಟು ರಂಗೇರಲಿದೆ. ಈ ಉತ್ಸವದ ಅಂಗವಾಗಿ ಜಿಲ್ಲಾಡಳಿತವು ಚಲನಚಿತ್ರೋತ್ಸವ, ಶ್ವಾನ ಪ್ರದರ್ಶನ, ಕಾರು–ಬೈಕ್‌ಗಳ ಪ್ರದರ್ಶನ ಹಾಗೂ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ‘ಭಾರತ್ ಸಿನಿಮಾಸ್‌ ಸಹಭಾಗಿತ್ವದಲ್ಲಿ ಜ.2 ಮತ್ತು ಜ.3ರಂದು ಚಲನಚಿತ್ರೋತ್ಸವವು ನಡೆಯಲಿದೆ. ಬಿಜೈನ ಭಾರತ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಕನ್ನಡ, ತುಳು ಮತ್ತು ಕೊಂಕಣಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇವುಗಳಿಗೆ ಪ್ರವೇಶ ಉಚಿತ. ಜ. 2ರಂದು ಅರಿಷಡ್ವರ್ಗ (ಕನ್ನಡ, ಬೆಳಿಗ್ಗೆ 10ರಿಂದ), 19.20.21 (ಕನ್ನಡ, ಮಧ್ಯಾಹ್ನ 12.30ರಿಂದ), ರಾಜ್ ಸೌಂಡ್ಸ್‌ ಆ್ಯಂಡ್ ಲೈಟ್ಸ್‌ (ಮಧ್ಯಾಹ್ನ 3.30 ತುಳು) ಮಧ್ಯಂತರ (ಕನ್ನಡ ಕಿರುಚಿತ್ರ, ಸಂಜೆ 6.30ರಿಂದ), ಕಾಂತಾರ (ಕನ್ನಡ, ರಾತ್ರಿ 8ರಿಂದ) ಸಿನಿಮಾಗಳು ಪ್ರದರ್ಶನಗೊಳ್ಳಲಿವೆ’  ಎಂದರು.

‘ಜ.3ರಂದು ಸಾರಾಂಶ (ಕನ್ನಡ ಬೆಳಿಗ್ಗೆ 10.15ರಿಂದ), ತರ್ಪಣ (ಕೊಂಕಣಿ ಮಧ್ಯಾಹ್ನ 12.45ರಿಂದ) ಶುದ್ಧಿ (ಕನ್ನಡ ಮಧ್ಯಾಹ್ನ 3.15ರಿಂದ) ಕುಬಿ ಮತ್ತು ಇಯಾಲ (ಕನ್ನಡ, ಸಂಜೆ 5.45 ರಿಂದ) ಗರುಡ ಗಮನ ವೃಷಭ ವಾಹನ (ರಾತ್ರಿ 8ರಿಂದ) ಸಿನಿಮಾಗಳು ಪ್ರದರ್ಶನಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

ADVERTISEMENT

ಕಾರು ಮತ್ತು ಬೈಕ್‌ಗಳ ಪ್ರದರ್ಶನವು ಜ. 4ರಂದು ಕದ್ರಿ ಉದ್ಯಾನದಲ್ಲಿ ನಡೆಯಲಿದೆ. ಆ ದಿನ ಕದ್ರಿ ಉದ್ಯಾನ ರಸ್ತೆಯಲ್ಲಿ ಸಾರ್ವಜನಿಕ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ. ಕದ್ರಿ ಉದ್ಯಾನದ ಬಳಿಯ ಹಳೆಯ ಜಿಂಕೆ ಉದ್ಯಾನದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಸಂಜೆ 5ರಿಂದ 9ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಯುವ ಮನ ಕಾರ್ಯಕ್ರಮದ ಅಂಗವಾಗಿ ಮಂಗಳೂರು ರೌಂಡ್ ಟೇಬಲ್ 116, ಯಂಗ್ ಇಂಡಿಯನ್ಸ್‌ ಎಂಸಿಆರ್‌ಟಿ 190ರ ಆಶ್ರಯದಲ್ಲಿ ಉದಯ ರಾಗ ಕಾರ್ಯಕ್ರಮವನ್ನು ಜ.5ರಂದ ಬೆಳಿಗ್ಗೆ 7ರಿಂದ ಆಯೋಜಿಸಲಾಗುತ್ತದೆ. ಸಂಗೀತ ತಂಡಗಳು (ಬ್ಯಾಂಡ್‌) ಹಾಗೂ ಸ್ಥಳೀಯ ಕಲಾವಿದರು  ಸಂಜೆ 5ರಿಂದ 9.30ರವರೆಗೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು. 

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯಸೇವಾ ಇಲಾಖೆ ಉಪನಿರ್ದೇಶಕ ಡಾ.ಅರುಣ್‌ ಕುಮಾರ್‌ ಶೆಟ್ಟಿ ಭಾಗವಹಿಸಿದ್ದರು.

ಶ್ವಾನ ಪ್ರದರ್ಶನ ಜ.5ರಂದು

‘ಪಶುಪಾಲನಾ ಮತ್ತು ಪಶು ವೈದ್ಯಕೀಯಸೇವಾ ಇಲಾಖೆ ಆಶ್ರಯದಲ್ಲಿ ಕದ್ರಿ ಉದ್ಯಾನದಲ್ಲಿ ಜ.5ರಂದು ಶ್ವಾನಗಳ ಪ್ರದರ್ಶನ ಏರ್ಪಡಿಸಲಾಗಿದೆ.  ಮಿನಿ ಪಾಮ್‌ ಪೋಡಲ್‌ಅಕಿತಾ ಬೆಲ್ಜಿಯನ್ ಮಾಲಿನಾಯ್ಸ್‌ ಸೇರಿದಂತೆ 20ಕ್ಕೂ ಹೆಚ್ಚು ತಳಿಗಳ 150ರಿಂದ 200 ನಾಯಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದ ಜಿಲ್ಲಾಧಿಕಾರಿ ತಿಳಿಸಿದರು. 

‘ನಾಯಿಗಳಿಗೆ ತಳಿವಾರು ವಿವಿಧ ಸ್ಪರ್ಧೆಗಳು ಪಪ್ಪಿ ( 3 ತಿಂಗಳಿನಿಂದ 6 ತಿಂಗಳ ನಾಯಿಮರಿ) ಅಡಲ್ಟ್‌ ವಿಭಾಗಗಳಲ್ಲಿ (ಒಂದು ವರ್ಷಕ್ಕಿಂತ ಮೇಲಿನ ನಾಯಿಗಳು)  ನಡೆಯಲಿವೆ. ಪ್ರತಿ ವಿಭಾಗದಲ್ಲಿ ಮೊದಲ ಬಹುಮಾನ ಗೆದ್ದ ನಾಯಿಗಳು  ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತಿಗೆ ಆಯ್ಕೆಯಾಗಲಿವೆ. ನಾಯಿಗಳ ತಳಿಯ ಗುಣಮಟ್ಟ ಚಲನವಲನ ಹಾಗೂ ನಡವಳಿಕೆ ಆಧಾರದಲ್ಲಿ ತೀರ್ಪು ನೀಡಲಾಗುತ್ತದೆ. ಅತ್ಯುತ್ತಮ ಪ್ರದರ್ಶನ ನೀಡುವ  ಮೂರು ನಾಯಿಗಳ ಮಾಲೀಕರಿಗೆ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಶ್ವಾನ ದಳಗಳು ಚುರುಕುತನ ಮತ್ತು ನಿಯತ್ತಿನ ನಡವಳಿಕೆ ಕುರಿತ ಪ್ರಾತ್ಯಕ್ಷಿಕೆ ನೀಡಲಿದ್ದು ಇದು ಶ್ವಾನ ಪ್ರದರ್ಶನದ ಪ್ರಮುಖ ಆಕರ್ಷಣೆ ಆಗಲಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.