ADVERTISEMENT

ತುಳುಗೆ ಅಧಿಕೃತ ಭಾಷಾ ಸ್ಥಾನಮಾನ: ಆಂಧ್ರಕ್ಕೆ ಭೇಟಿ ನೀಡಿದ ಅಧ್ಯಯನ ತಂಡ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:18 IST
Last Updated 22 ಜನವರಿ 2026, 6:18 IST
ಆಂಧ್ರಪ್ರದೇಶದ ಎನ್.ಟಿ.ಆರ್. ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಶ ಅವರೊಂದಿಗೆ ಅಧ್ಯಯನ ತಂಡ
ಆಂಧ್ರಪ್ರದೇಶದ ಎನ್.ಟಿ.ಆರ್. ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಶ ಅವರೊಂದಿಗೆ ಅಧ್ಯಯನ ತಂಡ   

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ರೂಪಿಸಬೇಕಾದ ಕಾನೂನು ಪ್ರಕ್ರಿಯೆಗಳ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ಸರ್ಕಾರವು ನೇಮಿಸಿರುವ ಸಮಿತಿಯು ಆಂಧ್ರ ಪ್ರದೇಶಕ್ಕೆ ತೆರಳಿ ಎರಡು ದಿನಗಳ ಕಾಲ ಆಂಧ್ರ ಸರ್ಕಾರದ ವಿವಿಧ ಇಲಾಖೆಗಳ ಜೊತೆಗೆ ಮಾತುಕತೆ ನಡೆಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ನೇತೃತ್ವದಲ್ಲಿ 7 ಮಂದಿಯ ಅಧ್ಯಯನ ಸಮಿತಿಯು ಜ.19 ಮತ್ತು 20ರಂದು ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಹಾಗೂ ಎನ್.ಟಿ. ಆರ್. ಜಿಲ್ಲೆಯ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

ತಂಡವು ಮೊದಲ ದಿನ ಸಚಿವಾಲಯದಲ್ಲಿ ಆಂಧ್ರದ ಮುಖ್ಯ ಕಾರ್ಯದರ್ಶಿ ವಿಜಯಾನಂದ ಅವರನ್ನು ಭೇಟಿ ನೀಡಿ ಸಮಾಲೋಚನೆ ನಡೆಸಿತು. ‘ಆಂಧ್ರಪ್ರದೇಶದಲ್ಲಿ ಉರ್ದುವನ್ನು ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿರುವುದರಿಂದ ಉರ್ದು ಭಾಷಾ ಬೆಳವಣಿಗೆ ಸಹಕಾರಿಯಾಗಿದೆ’ ಎಂದು ವಿಜಯಾನಂದ ತಿಳಿಸಿದರು.

ADVERTISEMENT

ವಿಧಾನಸಭೆಯ ಸ್ಪೀಕರ್ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಿಗೂ ಅಧ್ಯಯನ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಆಂಧ್ರ ಪ್ರದೇಶ ಅಲ್ಪಸಂಖ್ಯಾಂತರ ಇಲಾಖೆಯ ಕಾರ್ಯದರ್ಶಿ, ಉರ್ದು ಅಕಾಡೆಮಿಯ ಅಧ್ಯಕ್ಷ, ಉರ್ದು ಭಾಷಾ ಅಭಿವೃದ್ಧಿ ಮಂಡಳಿಯ ನಿರ್ದೇಶಕರನ್ನು ಸಹ ತಂಡ ಭೇಟಿ ಮಾಡಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆಯಿತು.

2ನೇ ದಿನ ಅಮರಾವತಿ ಮಹಾನಗರ ಪಾಲಿಕೆಯ ವಲಯ ಕಮಿಷನರ್, ಸ್ಥಳೀಯ ಪೋಲಿಸ್ ಠಾಣೆ, ಸ್ಥಳೀಯ ಉರ್ದು ಮಾಧ್ಯಮ ಶಾಲೆ, ಆಂಗ್ಲ ಮಾಧ್ಯಮ ಶಾಲೆ, ತೆಲುಗು ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಎನ್.ಟಿ .ಆರ್ ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಶ ಅವರನ್ನು ತಂಡವು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿತು.

ಅಧ್ಯಯನ ಸಮಿತಿಯಲ್ಲಿ ಕಾನೂನು ಇಲಾಖೆಯ ಉಪಕಾರ್ಯದರ್ಶಿ ವನಿತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉಪಕಾರ್ಯದರ್ಶಿ ಮೂರ್ತಿ ಕೆ.ಎನ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪಕಾರ್ಯದರ್ಶಿ ಶುಭಶ್ರಿ ಕೆ.ಎಂ., ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್., ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸುಧಾಕರ ಶೆಟ್ಟಿ, ಉಸ್ಮಾನಿಯಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಪ್ರೊ. ಲಿಂಗಪ್ಪ ಗೋನಾಳ್ ಇದ್ದರು.

ಅಧ್ಯಯನ ವರದಿಯು ಕೆಲವೇ ದಿನಗಳಲ್ಲಿ ಸರಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.