
ಮಂಗಳೂರು: 'ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಅನುಕೂಲ ಆಗಿದೆ. ಜನರ ಬದುಕು ಬದಲಾಗಿದೆ. ಈ ಯೋಜನೆಗಳು ಜನರ ಆರ್ಥಿಕ ಮಟ್ಟ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ’ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಕುರಿತ ಕಾರ್ಯಾಗಾರ, ಪ್ರಗತಿ ಪರಿಶೀಲನೆ ಸಭೆ ಹಾಗೂ ಮಾದಕ ನಶೆ ಮುಕ್ತ ಕರ್ನಾಟಕ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಜಿಎಸ್‌ಟಿ ಪಾವತಿ ಹಾಗೂ ಆದಾಯ ತೆರಿಗೆ ರಿಟರನ್ ಸಲ್ಲಿಕೆಯಂತಹ ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಸುಮಾರು 50 ಸಾವಿರ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆ ತಲುಪಿಲ್ಲ. ಈ ತಾಂತ್ರಿಕ ಸಮಸ್ಯೆ ನೀಗಿಸಲಿದ್ದೇವೆ. ಅವರಿಗೂ ಯೋಜನೆಯ ಪ್ರಯೋಜನ ತಲುಪಿಸಲು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಗಳು ನೆರವಾಗಬೇಕು. ಈ ಯೋಜನೆ ಬಗ್ಗೆ ಫಲಾನುಭವಿಗಳು ಮಾತನಾಡಬೇಕು’ ಎಂದರು.
ಜಾಗೃತ ಕರ್ನಾಟಕದ ಸಂಚಾಲಕ ವಾಸು ಎಚ್.ವಿ. ‘ಒಟ್ಟು ಶ್ರಮದಲ್ಲಿ ಮಹಿಳೆಯರ ಪಾಲು 66 ರಷ್ಟಿದೆ. ಆದರೆ ಒಟ್ಟು ಆದಾಯದಲ್ಲಿ ಅವರಿಗೆ ಸಿಗುತ್ತಿರುವ ಪಾಲು ಶೇ 15ರಷ್ಟೂ ಇಲ್ಲ. ಒಟ್ಟು ಆಸ್ತಿಗಳಲ್ಲಿ ಶೇ 10ರಷ್ಟೂ ಮಹಿಳೆಯರ ಬಳಿ ಇಲ್ಲ. ಅವರ ದುಡಿಮೆಗೆ ಸಂಬಳವೇ ಇರಲಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ, ಶಕ್ತಿಯಂತಹ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯ ಅಲ್ಲ, ಅವರ ದುಡಿಮೆಗೆ ಸಿಕ್ಕ ಸಂಬಳ’ ಎಂದರು.
‘ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗಲಿದೆ ಎಂದರು. ಆದರೆ, ರಾಜ್ಯದ ತಲಾ ಆದಾಯ ಹೆಚ್ಚಾಗಿದೆ. ಜಿಎಸ್‌ಟಿ ಸಂಗ್ರಹ ಜಾಸ್ತಿಯಾಗಿದೆ. ಮಹಿಳಾ ಉದ್ಯೋಗಶೀಲತೆ ದರ ಹೆಚ್ಚಿದೆ. ರಾಜ್ಯದ ಸಾಲವು ಜಿಡಿಪಿಯ ಶೇ.2.9ರಷ್ಟಿದ್ದರೆ, ಕೇಂದ್ರ ಸರ್ಕಾರದ ಸಾಲದ ಪ್ರಮಾಣ ದೇಶದ ಜಿಡಿಪಿಯ ಶೆ 4.4ರಷ್ಟಿದೆ. ಅರ್ಥಶಾಸ್ತ್ರದ ಗಮಧ ಗಾಳಿ ಇಲ್ಲದವರು ಮಾತ್ರ ಈ ಯೋಜನೆಯ ಟೀಕೆಯಲ್ಲಿ ಮುಳುಗಿದ್ದಾರೆ’ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ‘ದ.ಕ ಜಿಲ್ಲೆಯನ್ನು ನೋಡೆಲ್ ಜಿಲ್ಲೆಯನ್ನಾಗಿ ಪರಿಗಣಿಸಿ ಗ್ಯಾರಂಟಿ ಯೋಜನೆಗಳ ಅಧ್ಯಯನ ನಡೆಸಬೇಕು’ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಎಳ್ಳಿನಿತೂ ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ಟಿಲ್ಲ’ ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಉಡುಪಿ ಜಿಲ್ಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಭಾಗವಹಿಸಿದ್ದರು ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಸ್ವಾಗತಿಸಿದರು.
‘5 ವರ್ಷದಲ್ಲಿ ಸಿಗಲಿದೆ
₹ 3 ಲಕ್ಷ’ ‘ಹತ್ತು ಕೆ.ಜಿ ಅಕ್ಕಿಗೆ ₹ 400 ಬಸ್ ಪ್ರಯಾಣ ವೆಚ್ಚ ದಿನಕ್ಕೆ ₹70ರಂತೆ ತಿಂಗಳಿಗೆ ₹ 2100 ಗೃಹಲಕ್ಷ್ಮೀ ಯೋಜನೆಯಿಂದ ₹ 2000 ವಿದ್ಯುತ್ ಬಿಲ್ ₹ 500ರಂತೆ ಲೆಕ್ಕಹಾಕಿದರೂ ಬಿಪಿಎಲ್ ಕುಟುಂಬದ ಸದಸ್ಯೆಗೆ ತಿಂಗಳಿಗೆ ಏನಿಲ್ಲವೆಂದರೂ ₹ 5 ಸಾವಿರ ಗ್ಯಾರಂಟಿ ಯೋಜನೆಗಳಿಂದ ಸಿಗುತ್ತಿದೆ. ಅಂದರೆ ವರ್ಷಕ್ಕೆ ₹60 ಸಾವಿರ ಐದು ವರ್ಷಗಳಿಗೆ ₹ 3 ಲಕ್ಷ ಹಣವನ್ನು ಸರ್ಕಾರ ನೇರವಾಗಿ ಫಲಾನುಭವಿಗೆ ತಲುಪಿಸುತ್ತಿದೆ. ಯಾವುದಾದರೂ ಸರ್ಕಾರ ಇಷ್ಟೊಂದು ಹಣವನ್ನು ಜನರಿಗೆ ಕೊಟ್ಟಿದೆಯೇ’ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಪ್ರಶ್ನಿಸಿದರು. ‘ಗ್ಯಾರಂಟಿ ಯೋಜನೆ ಬಗ್ಗೆ ಕೇವಲವಾಗಿ ಮಾತನಾಡುವವರಿಗೆ ತಕ್ಕ ಉತ್ತರ ಕೊಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.