ADVERTISEMENT

ಖರ್ಗೆಗೆ ನೋಟಿಸ್ ರಾಜಕೀಯ ಪ್ರೇರಿತ: ಯು.ಟಿ.ಖಾದರ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 12:54 IST
Last Updated 25 ಏಪ್ರಿಲ್ 2022, 12:54 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮಂಗಳೂರು: ಪಿಎಸ್‌ಐ ಹುದ್ದೆಯ ಅಕ್ರಮ ನೇಮಕಾತಿಗೆ ಸಂಬಂಧಿಸಿ ಸಾರ್ವಜನಿಕವಾಗಿ ಧ್ವನಿ ಎತ್ತಿದ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ಸಿಐಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ವಿಧಾನಸಭೆ ವಿಪಕ್ಷದ ಉಪ ನಾಯಕ ಯು.ಟಿ.ಖಾದರ್ ಹೇಳಿದರು.‌

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಪಿಎಸ್‍ಐ ಹುದ್ದೆ ಅಕ್ರಮ ನೇಮಕಾತಿಗೆ ಸಂಬಂಧಿಸಿ ನೇಮಕಾತಿ ಮುಖ್ಯಸ್ಥರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು.
ಕಾನೂನು ಬದ್ಧ ನೇಮಕಾತಿಗೆ ಬದಲಾಗಿ ಮೋಸದ ನೇಮಕಾತಿ ಆಗಿದೆ. ನೇಮಕಾತಿ ಮೊದಲೇ ಕೆಲವರು ಬ್ಯಾಡ್ಜ್ ಹಾಕಿಕೊಂಡು ತಿರುಗಾಡುತ್ತಿದ್ದರು. ಇಂತಹವರ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ನೇಮಕಾತಿ ನಡೆದಿಲ್ಲ. ಈಗ ನೇಮಕಾತಿ ನಡೆಯುವ ಮುನ್ನವೇ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. 545 ಪಿಎಸ್‍ಐ ಹುದ್ದೆಗೆ 1.50 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. 59 ಸಾವಿರ ಮಂದಿ ಪರೀಕ್ಷೆ ಬರೆದಿದ್ದಾರೆ. ಇದು ನಿರುದ್ಯೋಗ ಸಮಸ್ಯೆಯನ್ನು ಬಿಂಬಿಸುತ್ತದೆ. ಕಪ್ಪುಪಟ್ಟಿಗೆ ಸೇರಿರುವ ಕಾಲೇಜನ್ನು ಪರೀಕ್ಷಾ ಕೇಂದ್ರ ಮಾಡಲಾಗಿದೆ. ಈ ವಿಚಾರದಲ್ಲಿ ನೈಜ ಆರೋಪಿಗಳನ್ನು ಬಂಧಿಸುವ ಬದಲು ಸರ್ಕಾರ ರಾಜಕೀಯ ನಡೆಸುತ್ತಿದೆ ಎಂದರು.

ADVERTISEMENT

ಪೊಲೀಸ್ ಇಲಾಖೆಯ ನೇಮಕಾತಿ ಬಗ್ಗೆ ಇದೇ ಇಲಾಖೆಯ ಇನ್ನೊಂದು ವಿಭಾಗ ಹೇಗೆ ತನಿಖೆ ನಡೆಸಲು ಸಾಧ್ಯ? ಇದರಿಂದ ನ್ಯಾಯ ಸಿಗುತ್ತದೆಯೇ? ಈ ಕುರಿತು ನ್ಯಾಯಾಂಗ ಅಥವಾ ಸಿಬಿಐ ತನಿಖೆಯೇ ನಡೆಸಬೇಕು ಅರ್ಹ ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಗೆ ಜೆಡಿಎಸ್, ಕಾಂಗ್ರೆಸ್‍ನಿಂದ ಶಾಸಕರು ವಲಸೆ ಬರಲಿದ್ದಾರೆ ಎಂಬ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿಜೆಪಿ
ನಳಿನ್ ಕುಮಾರ್ ಹೇಳಿಕೆ ಬಾಲಿಶವಾಗಿದೆ. ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಯಾರೆಲ್ಲ ಸೇರುತ್ತಾರೆ ಎಂಬುದು ಸೂಕ್ತ ಸಮಯದಲ್ಲಿ ಗೊತ್ತಾಗಲಿದೆ ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಮುಖಂಡರಾದ ಈಶ್ವರ್ ಉಳ್ಳಾಲ್, ಸದಾಶಿವ ಉಳ್ಳಾಲ್, ಸುಧೀರ್ ಟಿ.ಕೆ, ಸುರೇಶ್ ಭಟ್ನಾಗರ್, ದೀಪಕ್, ನಾಗೇಶ್ ಶೆಟ್ಟಿ, ವಿನೋದ್ ಕುಂಪಲ ಇದ್ದರು.

‘ಸರ್ಕಾರದ ಧೋರಣೆ ಸಮಸ್ಯೆ’

ಅಕ್ಷಯ ತೃತೀಯ ದಿನದಂದು ಮುಸ್ಲಿಮರ ಅಂಗಡಿಯಿಂದ ಚಿನ್ನ ಖರೀದಿಸಬಾರದು ಎಂಬ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ‘ಇದು ಕರೆ ಕೊಡುವವರ ಸಮಸ್ಯೆ ಅಲ್ಲ, ಅವರಿಗೆ ಕಡಿವಾಣ ಹಾಕದ ಸರ್ಕಾರದ ಧೋರಣೆ ಸಮಸ್ಯೆ ಸೃಷ್ಟಿಸಿದೆ’ ಎಂದರು.

ಮುತಾಲಿಕ್ ಅಂತಹವರಿಗೆ ಬೇಕಾಬಿಟ್ಟಿ ಮಾತನಾಡಲು ಅವಕಾಶ ನೀಡಬಾರದು. ಇಂಥ ವಾತಾವರಣ ಕರ್ನಾಟಕದಲ್ಲಿ ಮಾತ್ರ ಇದೆ, ಭಾರತದ ಬೇರೆ ಕಡೆಗಳಲ್ಲಿ ಹೀಗೆ ಇಲ್ಲ. ಆದರೆ, ಸರ್ಕಾರ ಮಾತ್ರ ಮೌನವಾಗಿದೆ. ಇದರಿಂದ ದೇಶದ ಘನತೆ, ಗೌರವಕ್ಕೆ ಚ್ಯುತಿ ಬರುತ್ತದೆ ಎಂದು ಖಾದರ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.