ಉಪ್ಪಿನಂಗಡಿ: ನಿರಂತರ ಮಳೆಯಿಂದಾಗಿ ವಿವಿಧೆಡೆ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಸಹಿತ ಅಲ್ಲಲ್ಲಿ ರಸ್ತೆಗೆ ಮರಗಳು ಉರುಳಿ ವಾಹನ ಸಂಚಾರಕ್ಕೂ ತಡೆ ಉಂಟಾಗಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆವರೆಗೆ ಉಪ್ಪಿನಂಗಡಿಯಲ್ಲಿ 23 ಸೆ.ಮೀಂ. ಮಳೆಯಾಗಿದ್ದು, ತೊರೆಗಳು ತುಂಬಿ ಗದ್ದೆ, ತೋಟದೊಳಗೆ ನೀರು ನುಗ್ಗಿದೆ. ರಸ್ತೆ ಬದಿಯ ಚರಂಡಿಗಳು ತುಂಬಿ ರಸ್ತೆಯಲ್ಲೇ ಮಳೆ ನೀರು ಹರಿಯಿತು.
ಹಿರೇಬಂಡಾಡಿ-ಕೊಯಿಲ ರಸ್ತೆಯಲ್ಲಿ ಅಲ್ಲಲ್ಲಿ ಧರೆ, ಮರ, ವಿದ್ಯುತ್ ಕಂಬ ಕುಸಿದು ರಸ್ತೆಗೆ ಉರುಳಿವೆ. ಉಪ್ಪಿನಂಗಡಿ-ಹಿರೇಬಂಡಾಡಿ-ಕೊಯಿಲ ರಸ್ತೆಯ ನಿನ್ನಿಕಲ್ ಸಮೀಪ ಅರ್ತಿಲ ಸಂಪರ್ಕಿಸುವಲ್ಲಿ ಧರೆ ಕುಸಿದು ರಸ್ತೆಗೆ ಬಿದ್ದಿದೆ. ದಾಸರಮೂಲೆ ಸಮೀಪ ಸುಮಾರು 200 ಮೀಟರ್ ಉದ್ದಕ್ಕೂ ರಸ್ತೆಯ ಬದಿಯಲ್ಲಿ ಧರೆ ಕುಸಿದು ರಸ್ತೆಗೆ ಬಿದ್ದಿದೆ. ನೆಹರೂತೋಟದಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದು, ಅದರ ಸಮೀಪದಲ್ಲೇ ಮರ ರಸ್ತೆಗೆ ಬಿದ್ದು, ವಾಹನ ಸಂಚಾರಕ್ಕೂ ತಡೆ ಉಂಟಾಗಿತ್ತು.
ನೆಕ್ಕಿಲಾಡಿ ಗ್ರಾಮದ ಆದರ್ಶ ನಗರದ ಅಶೋಕ್ ಎಂಬುವರ ಮನೆಯ ಮೇಲೆ ಗುಡ್ಡ ಕುಸಿದಿದೆ. ನೆಕ್ಕಿಲಾಡಿಯ ರಾಜ್ಯ ಹೆದ್ದಾರಿಯ ಅಲ್ಲಲ್ಲಿ ಗುಡ್ಡ, ಮರಗಳು ಉರುಳಿವೆ. ಕಜೆಯ ಮಹಮ್ಮದ್ ಎಂಬುವರ ಮನೆಯ ಬಳಿ ಗುಡ್ಡ ಕುಸಿದು ಅಂಗಳದಲ್ಲಿ ಮಣ್ಣು ರಾಶಿ ಬಿದ್ದಿದೆ.
ಶಿವಾನಂದ ಎಂಬುವರ ಮನೆ ಬಳಿ ಗುಡ್ಡ ಕುಸಿದು ಮನೆ ಅಪಾಯದ ಸ್ಥಿತಿಯಲ್ಲಿದೆ. ಹಮೀದ್ ಅವರ ಮನೆಗೆ ಸಂಪರ್ಕಿಸುವ ದಾರಿ ಮುಚ್ಚಿಹೋಗಿದೆ. ಹನೀಫ್ ಎಂಬುವರ ಮನೆಗೆ ಮರ ಬಿದ್ದು ಅಡುಗೆ ಕೋಣೆಗೆ ಹಾನಿಯಾಗಿದೆ. ಅಬ್ದುಲ್‌ರಹ್ಮಾನ್ ಯುನಿಕ್ ಅವರ ಮಳಿಗೆಗೆ ನೀರು ನುಗ್ಗಿದ್ದು, ಪೀಠೋಪಕರಣಗಳಿಗೆ ಹಾನಿಯಾಗಿವೆ. ಶಬೀರ್ ನೆಕ್ಕಿಲಾಡಿ, ಮಹಮ್ಮದ್ ಪಿ.ಪಿ. ಅವರ ಮನೆಗೆ ಹಾನಿಯಾಗಿದೆ. ಆನೆಮಜಲು, ಅದರ್ಶನಗರ, ಶಾಂತಿನಗರದಲ್ಲೂ ಗುಡ್ಡ ಕುಸಿದು ಹಾನಿಯಾಗಿದೆ.
ಪೆರಿಯಡ್ಕದ ನೆಕ್ಕರೆ ಎಂಬಲ್ಲಿ ರಸ್ತೆಗೆ ಗುಡ್ಡ, ಮರ ಕುಸಿದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹರಿನಗರದಲ್ಲಿ ಕಿಶೋರ್ ಅವರ ಮನೆ ಸಮೀಪದ ಗುಡ್ಡ ಕುಸಿದು ಉಷಾಚಂದ್ರ ಮುಳಿಯ ಅವರ ಮನೆಯೊಳಗೆ ಮಣ್ಣು ಹಾಗೂ ನೀರು ನುಗ್ಗಿದೆ. ಉಷಾಚಂದ್ರ ಅವರ ಆವರಣ ಗೋಡೆ ಮೀನಾಕ್ಷಿ ಎಂಬುವರ ಮನೆಗೆ ಬಿದ್ದು ಹಾನಿಯಾಗಿದೆ.
ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ತಡೆ: ರಾಷ್ಟ್ರೀಯ ಹೆದ್ದಾರಿಯ ಕೂಟೇಲು ಎಂಬಲ್ಲಿ ರಸ್ತೆ ಬದಿಯ ಗುಡ್ಡ ಕುಸಿದು ವಿದ್ಯುತ್ ಕಂಬ, ಮರಗಳು ಧರೆಗುರುಳಿವೆ. ಇಳಂತಿಲ ಗ್ರಾಮದ ಕಾಯರ್ಪಾಡಿಯಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತೊಡಕಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.