ADVERTISEMENT

ಬೆಳ್ತಂಗಡಿ: ಹೆದ್ದಾರಿಗೆ ಉರುಳಿದ ಮರ, ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 13:56 IST
Last Updated 23 ಜುಲೈ 2023, 13:56 IST
ಮುಂಡಾಜೆ ಗ್ರಾಮದ ಅಂಬಡ್ತ್ಯಾರು ಬಳಿ ರಾಷ್ಟ್ರೀಯ ಹೆದ್ದಾರಿಗೆ ಉರುಳಿದ ಬೃಹತ್ ಮರ 
ಮುಂಡಾಜೆ ಗ್ರಾಮದ ಅಂಬಡ್ತ್ಯಾರು ಬಳಿ ರಾಷ್ಟ್ರೀಯ ಹೆದ್ದಾರಿಗೆ ಉರುಳಿದ ಬೃಹತ್ ಮರ    

ಬೆಳ್ತಂಗಡಿ: ಮಂಗಳೂರು - ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಮುಂಡಾಜೆ ಗ್ರಾಮದ ಅಂಬಡ್ತ್ಯಾರು ಬಳಿ ಬೃಹತ್ ಮರ ರಸ್ತೆಗೆ ಉರುಳಿ ಸುಮಾರು ಒಂದೂವರೆ ತಾಸು ಸಂಚಾರ ವ್ಯತ್ಯಯ ಉಂಟಾಯಿತು.

ಮರ ಬೀಳುವ ಸಮಯ  ರಸ್ತೆಯಲ್ಲಿ ಸಂಚರಿಸುತ್ತಿದ್ದ ಮೋಹನ್ ಕುಮಾರ್ ಎಂಬವರ ಪಿಕಪ್ ವಾಹನ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದೆ.

ಮರವು ವಿದ್ಯುತ್ ತಂತಿಯ ಮೇಲೆ ಅಪ್ಪಳಿಸಿದ್ದು 6 ಎಚ್‌.ಟಿ ಕಂಬಗಳು ಹಾಗೂ ಒಂದು ವಿದ್ಯುತ್ ಪರಿವರ್ತಕ ಮುರಿದು ಬಂದಿದೆ. ಹೀಗಾಗಿ ಮುಂಡಾಜೆ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿತು.

ADVERTISEMENT

ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆದ ಕಾರಣ ಲಾರಿ, ಬಸ್ಸು ಹಾಗೂ ಇತರ ವಾಹನಗಳು ಸಾಲುಗಟ್ಟಿ ನಿಂತವು. ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರು, ಅರಣ್ಯ ಇಲಾಖೆ, ಮೆಸ್ಕಾಂ ಹಾಗೂ ಸ್ಥಳೀಯರು ಸೇರಿ ಹರಸಾಹಸ ನಡೆಸಿ ಮರ ತೆರವುಗೊಳಿಸಿದರು.

ಬದಲಿ ರಸ್ತೆ

ಗುಂಡಿ -ಬಲ್ಯಾರ್ ಕಾಪು ಮೂಲಕ ಬದಲಿ ರಸ್ತೆ ಇದ್ದು ಇದು ರಾಷ್ಟ್ರೀಯ ಹೆದ್ದಾರಿಯನ್ನು ಸೇರುತ್ತದೆ. ಕಿರಿದಾದ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದರಿಂದ ಸವಾರರು ಪರದಾಡಿದರು. ಸ್ಥಳೀಯರ ಸಹಕಾರದಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.

ಕೆಲವೊಂದು ವಾಹನಗಳು ಮುಂಡಾಜೆಯ ಭಿಡೆ ರಸ್ತೆಯ ಮೂಲಕ ಧರ್ಮಸ್ಥಳದ ಕಡೆ ಪ್ರಯಾಣ ನಡೆಸಿದವು. ಉಜಿರೆ ಕಡೆಯಿಂದ ಬಂದ ವಾಹನಗಳು ಮತ್ತೆ ಧರ್ಮಸ್ಥಳಕ್ಕೆ ತೆರಳಿ ಈ ರಸ್ತೆಯ ಮೂಲಕ ಸಂಚಾರ ನಡೆಸಿದವು. ಘನವಾಹನಗಳ ಸಂಚಾರಕ್ಕೆ ಈ ರಸ್ತೆ ಯೋಗ್ಯವಿಲ್ಲದ ಕಾರಣ, ಅವು ಈ ರಸ್ತೆಯಲ್ಲಿ ಸಂಚಾರ ನಡೆಸದಂತೆ ಸ್ಥಳೀಯರು ಎಚ್ಚರಿಕೆ ವಹಿಸಿದರು.

ಮರ ಬಿದ್ದ ಸಮಯ ಚಿಕ್ಕಮಗಳೂರು ಕಡೆಯಿಂದ ಮಂಗಳೂರಿಗೆ ರೋಗಿಯನ್ನು ಹೊತ್ತ ಆಂಬುಲೆನ್ಸ್ ಮರ ಬಿದ್ದಲ್ಲಿವರೆಗೆ ಬಂದಿದ್ದು ಸ್ಥಳೀಯರು ಅದನ್ನು ವಾಪಾಸು ಕಳುಹಿಸಿ ಧರ್ಮಸ್ಥಳ ರಸ್ತೆಯ ಮೂಲಕ ಸಾಗಲು ವ್ಯವಸ್ಥೆ ಮಾಡಿಕೊಟ್ಟರು.

ರಸ್ತೆಗೆ ಬಿದ್ದ ಮರದಿಂದಾಗಿ ಸಾಲುಗಟ್ಟಿ ನಿಂತ ವಾಹನಗಳು.
ವಿದ್ಯುತ್ ಪ್ರವರ್ತಕ ಮುರಿದು ಬಿದ್ದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.