ADVERTISEMENT

‘ಬೋಡುಂದಾಡ ಬರ್ಪುಜಿ, ಬೊಡ್ಚಿಂದಾಂಡ ಬುಡ್ಪುಜಿ’

‘ಚಾವಡಿ ತಮ್ಮನ ಬೊಕ್ಕ ಪಾತೆರಕತೆ’ಯಲ್ಲಿ ಕುಮಾರದರ್ಶನ ಪಾತ್ರಧಾರಿ, ಬಂಟ್ವಾಳದ ಮುತ್ತಪ್ಪ ಮೂಲ್ಯ ನೈನಾಡು

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 14:32 IST
Last Updated 22 ಜೂನ್ 2019, 14:32 IST

ಮಂಗಳೂರು:‘ಬೋಡುಂದಾಡ ಬರ್ಪುಜಿ, ಬೊಡ್ಚಿಂದಾಂಡ ಬುಡ್ಪುಜಿ’ (ಬೇಕು ಅನ್ನಿಸಿದಾಗ ಬರುವುದಿಲ್ಲ, ಬೇಡ ಅನಿಸಿದರೂ ಬಿಡುವುದಿಲ್ಲ) –ಸಿರಿ ಆರಾಧನೆಯ ಕುಮಾರದರ್ಶನ ಪಾತ್ರಧಾರಿ, ಬಂಟ್ವಾಳದ ಮುತ್ತಪ್ಪ ಮೂಲ್ಯ ನೈನಾಡು ಶನಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಚಾವಡಿಯಲ್ಲಿ ‘ಚಾವಡಿ ತಮ್ಮನ ಬೊಕ್ಕ ಪಾತೆರಕತೆ’(ಚಾವಡಿಯ ಸನ್ಮಾನ ಮತ್ತು ಮಾತುಕತೆ)ಯಲ್ಲಿ ಸನ್ಮಾನ ಸ್ವೀಕರಿಸಿ, ಸಂವಾದದಲ್ಲಿ ಉತ್ತರಿಸಿದರು.

‘ಮೈಮೇಲೆ ಆವೇಶ (ದರ್ಶನ) ಬರುವುದು ಕಾಲ್ಪನಿಕವೇ?, ನೈಜವೇ?, ಅಧ್ಯಾತ್ಮವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆವೇಶವು (ದರಿಪುನ) ಯಾವಾಗ ಬರುತ್ತದೆ? ಯಾವಾಗ ಬಿಡುತ್ತದೆ? ನನ್ನ ಮುಂದಿರುವವರು ಯಾರು? ನಾನೇನು ಮಾತನಾಡುತ್ತಿದ್ದೇನೆ? ಎಂಬ ಪ್ರಜ್ಞೆಯೂ ನಮಗಿರುವುದಿಲ್ಲ. ದೈವದ ನಂಬಿಕೆಯಲ್ಲಿ ಸಂಪೂರ್ಣ ಲೀನವಾಗಿರುತ್ತೇನೆ. ಅದು ದೈವಲೀಲೆ’ ಎಂದರು.

‘ನಾನು 8 ವರ್ಷದಿಂದ ಕುಮಾರದರ್ಶನದ ಪಾತ್ರಧಾರಿಯ ಸೇವೆ ಮಾಡಿಕೊಂಡು ಬಂದಿದ್ದೇನೆ. ನನಗೆ ಇದು ವಂಶಪಾರಂಪರ್ಯವಾಗಿ ಬಂದಿದೆ. ಈ ವ್ಯವಸ್ಥೆಯೇ ಬೇಡ ಒಂದು ಒಂದು ಬಾರಿ ಎಲ್ಲವನ್ನೂ ಬಿಟ್ಟು ಮುಂಬೈಗೆ ಹೋಗಿದ್ದೆನು. ಹೋಟೆಲ್ ಕೆಲಸಕ್ಕೆ ಸೇರಿದ್ದೆನು. ಅಲ್ಲಿ ಹೆಚ್ಚು ಕಾಲ ನಿಲ್ಲಲು ಆಗಲಿಲ್ಲ. ಮತ್ತೆ ಇಲ್ಲಿಗೆ ಕರೆಯಿಸಿಕೊಂಡಿತು. ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿದ್ದೇನೆ. ಇದು, ನನ್ನ ವ್ಯಾಪಾರ ಅಥವಾ ಉದ್ದಿಮೆಯಲ್ಲ. ಸೇವೆ. ಹೀಗಾಗಿಯೇ, ಇನ್ನೂ ಬಡತನದಲ್ಲಿಯೇ ಇದ್ದೇನೆ. ಆದರೆ, ಸಂತೃಪ್ತಿ ಇದೆ. ನನಗೀಗ 62 ವರ್ಷ’ ಎಂದರು.

ADVERTISEMENT

‘ಬಡವರಿಗೆ ಮಾತ್ರ ಸಿರಿ ದರ್ಶನ ಬರುತ್ತದೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿರಿ ದರ್ಶನ ಬರುವವರಲ್ಲಿ ಶ್ರೀಮಂತರೂ ಇದ್ದಾರೆ. ಆದರೆ, ಅವರು ಬಹಿರಂಗವಾಗಿ ಬಂದು ತೋರಿಸಿಕೊಳ್ಳುವುದಿಲ್ಲ. ಎಲ್ಲೋ ಎಲೆಮರೆಯಂತೆ ತಮ್ಮ ಸೇವೆ ಸಲ್ಲಿಸಿ ಹೋಗುತ್ತಾರೆ. ಆದರೆ, ‘ಆರ್ಥಿಕ ವ್ಯವಸ್ಥೆಗಳಿದ್ದಲ್ಲಿ , ದೈವವೂ ಸುಳಿಯುವುದಿಲ್ಲ’ ಎಂಬ ಮಾತಿನಂತೆ ಕಷ್ಟಕಾರ್ಪಣ್ಯಗಳೂ ಬಡವರಿಗೆ ಹೆಚ್ಚಾಗಿ ಬರುತ್ತದೆ. ಹೀಗಾಗಿ, ಅಲ್ಲಿಯೇ ದೈವಭಕ್ತಿಯನ್ನು ಕಾಣುತ್ತೇವೆ. ಆದರೆ, ಈಗೀಗ ಅತಿದೊಡ್ಡ ಶ್ರೀಮಂತರು, ಉನ್ನತ ಹುದ್ದೆಯಲ್ಲಿರುವವರಲ್ಲಿಯೂ ಭಕ್ತಿ ಹೆಚ್ಚಾಗುತ್ತಿದೆ’ ಎಂದು ವಿಶ್ಲೇಷಿಸಿದರು.

‘ಸಿರಿ ಮತ್ತು ಕುಮಾರರ ಸಂಬಂಧಗಳ ಬಗ್ಗೆ ವಿಭಿನ್ನ ವ್ಯಾಖ್ಯಾನ ನೀಡುತ್ತಾರಲ್ಲಾ ಎಂಬ ಪ್ರಶ್ನೆಗೆ, ‘ಸಿರಿ ತಾಯಿ. ಕುಮಾರ ಮಗ. ಸಣ್ಣ ಮಗುವಿನ ಮೈಯಲ್ಲಿ ಸಿರಿ ಬಂದರೂ, ಆಕೆ ತಾಯಿಯೇ. ಕುಮಾರನು ಮಗನೇ ಆಗಿರುತ್ತಾನೆ. ಅಲ್ಲದೇ, ಅದರೊಳಗಿನ ಕೌಟುಂಬಿಕ ಸಂಬಂಧಗಳಿಗೆ ಆವೇಶಭರಿತ ಅಥವಾ ಪಾತ್ರಧಾರಿಗಳ ವಯಸ್ಸಿನ ಹಂಗಿಲ್ಲ. ಸಿರಿ ಪುರಾಣಕ್ಕೂ ಆರಾಧನೆಗೂ ವ್ಯತ್ಯಾಸವಿಲ್ಲ. ಎರಡೂ ಒಂದೇ ರೀತಿ ಇದೆ’ ಎಂದರು.

ಯಾವುದೋ ಒಂದೆರೆಡು ವ್ಯಕ್ತಿಗಳು ರಾಜಕೀಯಕ್ಕಾಗಿ, ಲಾಭಕ್ಕಾಗಿ, ಹಣಕ್ಕಾಗಿ ಮಾಡುವ ತಪ್ಪುಗಳನ್ನೇ ಸಾರ್ವತ್ರೀಕರಣಗೊಳಿಸಬೇಡಿ. ಎಲ್ಲ ಕ್ಷೇತ್ರದಲ್ಲೂ ಇದು ಸಹಜ. ಆದರೆ, ಸಾವಿರಾರು ಜನ ಶ್ರದ್ಧೆಯಿಂದ ನಡೆದುಕೊಂಡಿರುತ್ತಾರೆ. ಅದೇ ರೀತಿ ನಂಬಿಕೆಯೂ’ ಎಂದರು.

ರಿಜಿಸ್ಟ್ರಾರ್ ಚಂದ್ರಹಾಸ ರೈ, ನಿವೃತ್ತ ಮುಖ್ಯಶಿಕ್ಷಕ ರಮೇಶ ನಾಯಕ್ ರಾಯಿ, ಸದಸ್ಯರಾದ ಗೋಪಾಲ ಅಂಚನ್, ತಾರನಾಥ ಕಾಪಿಕ್ಕಾಡ್, ಡಾ.ವಾಸುದೇವ ಬೆಳ್ಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.