ಮಂಗಳೂರು: ‘ಕಾಸರಗೋಡು ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಲು ಹೋರಾಡಿದ್ದ ಸಾಹಿತಿ ಕಯ್ಯಾರ ಕಿಂಞಣ್ಣ ರೈ ಸ್ಮರಣಾರ್ಥ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪೆರಡಾಲದಲ್ಲಿ ನಿರ್ಮಿಸಲಾದ ಸಾಂಸ್ಕೃತಿಕ ಭವನ ಉದ್ಘಾಟನೆಗೆ ಸಜ್ಜಾಗಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದರು.
ಪ್ರಾಧಿಕಾರದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಈ ಸಾಂಸ್ಕೃತಿಕ ಭವನ ಅ. 27ರಂದು ಲೋಕಾರ್ಪಣೆಗೊಳ್ಳಲಿದೆ. ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದೇವೆ’ ಎಂದರು.
‘ಕಯ್ಯಾರ ಕಿಂಞಣ್ಣ ರೈ ಕುಟುಂಬಸ್ಥರಾದ ಪ್ರಸನ್ನ ರೈ, ಈ ಭವನ, ರಸ್ತೆ ಹಾಗೂ ಉದ್ಯಾನ ನಿರ್ಮಾಣಕ್ಕೆ ಉಚಿತವಾಗಿ 1 ಎಕರೆಗೂ ಅಧಿಕ ಜಾಗ ಬಿಟ್ಟುಕೊಟ್ಟಿದ್ದಾರೆ. ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಭವನದಲ್ಲಿ, ಗ್ರಂಥಾಲಯ, ಗ್ರೀನ್ ರೂಂ, ಸಭಾಂಗಣ ಮತ್ತಿತರ ಸೌಕರ್ಯಗಳಿವೆ. ಸುಸಜ್ಜಿತ ಪೀಠೋಪಕರಣಗಳ ವ್ಯವಸ್ಥೆ ಮಾಡಲಿದ್ದೇವೆ. ಇದರ ನಿರ್ವಹಣೆಗೆ ಸಮಿತಿ ರಚಿಸಲಿದ್ದೇವೆ’ ಎಂದರು.
‘ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ 11 ಸಾವಿರ ಚ.ಅಡಿ ಜಾಗ ಖರೀದಿಸಿಸಲಾಗಿದೆ. ಅಲ್ಲಿ ಕಟ್ಟಡ ಶೀಘ್ರವೇ ನಿರ್ಮಾಣವಾಗಲಿದ್ದು, ಇದಕ್ಕಾಗಿ ₹ 5.15 ಕೋಟಿ ಅನುದಾನ ಒದಗಿಸಿದ್ದೇವೆ. ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲೂ ₹ 2 ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣವಾಗಲಿದೆ’ ಎಂದರು.
‘ಗಡಿನಾಡಿನ 658 ಕನ್ನಡ ಶಾಲೆಗಳಲ್ಲಿ 1.09 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಗಳಿಗೆ ಕಟ್ಟಡ, ಪೀಠೋಪಕರಣ, ಸ್ಮಾರ್ಟ್ ಕ್ಲಾಸ್ ಸೌಲಭ್ಯ, ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಪ್ರಾಧಿಕಾರ ನೆರವು ನೀಡುತ್ತಿದೆ. ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನಿವಾರಿಸಲು ಕ್ರಮ ವಹಿಸಲಾಗಿದೆ. ಈ ಶಾಲೆಗಳಿಗೆ ಕನ್ನಡ ದಿನಪತ್ರಿಕೆ ಪೂರೈಸುವ ಪ್ರಸ್ತಾವವೂ ಇದೆ’ ಎಂದರು.
‘ಮಂಗಳೂರಿನ ಉರ್ವಸ್ಟೋರ್‌ನಲ್ಲಿ ತುಳುಭವನ ನಿರ್ಮಾಣಕ್ಕೆ ₹ 3.60 ಕೋಟಿ, ಕೊಂಕಣಿ ಭವನ ನಿರ್ಮಾಣಕ್ಕೆ ₹ 3 ಕೋಟಿ , ಅಸೈಗೋಳಿಯಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ₹ 3 ಕೋಟಿ ಅನುದಾನ ನೀಡಿದ್ದೇವೆ. ಕೊಂಕಣಿ ಭವನದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಬ್ಯಾರಿ ಭವನ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ. ತುಳು ರಂಗಮಂದಿರ ನಿರ್ಮಾಣಕ್ಕೆ ₹ 5 ಕೋಟಿ ಒದಗಿಸಿದ್ದೇವೆ’ ಎಂದರು.
ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.