ಅಮಾನತು
ಪುತ್ತೂರು: ಫೈನಾನ್ಸ್ ಸಂಸ್ಥೆ ವಶಪಡಿಸಿಕೊಂಡಿದ್ದ ಕಾರನ್ನು ಖರೀದಿಸಿದ್ದ ವ್ಯಕ್ತಿಯೊಬ್ಬರಿಗೆ ಅದೇ ಕಾರನ್ನು ಮತ್ತೆ ಖರೀದಿಸಲು ಪುತ್ತೂರು ನಗರ ಠಾಣಾ ವ್ಯಾಪ್ತಿಯ, ಬಂಟ್ವಾಳ ತಾಲ್ಲೂಕಿನ ಕೆದಿಲ ಗ್ರಾಮದ ಸತ್ತಿಕಲ್ಲು ಎಂಬಲ್ಲಿಗೆ ಜ.8ರಂದು ರಾತ್ರಿ ಮಾತುಕತೆಗಾಗಿ ಬಂದಿದ್ದ ತಂಡವೊಂದು ಚೂರಿಯಿಂದ ತಿವಿದು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಎಎಸ್ಐ ಮೋನಪ್ಪ ಅವರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರಿನ ಶ್ರೀರಾಮ ಫೈನಾನ್ಸ್ ಸಂಸ್ಥೆಯವರು ಸ್ವಾಧೀನಕ್ಕೆ ತೆಗೆದುಕೊಂಡಿದ್ದ ಇನ್ನೋವಾ ಕಾರನ್ನು ಕೆದಿಲ ಗ್ರಾಮದ ಸರೋಳಿ ನಿವಾಸಿ ಅಬೂಬಕ್ಕರ್ ರಾಶೀಕ್ ಅವರಿಗೆ ಮಾರಾಟ ಮಾಡಿದ್ದರು. ಆದರೆ, ಕಾರಿನ ಮೊದಲ ಮಾಲೀಕ ಸೂರಜ್ ಎಂಬುವರು ಅದೇ ಕಾರನ್ನು ಮತ್ತೆ ಖರೀದಿಸಲು ಅಬೂಬಕ್ಕರ್ ರಾಶಿಕ್ ಅವರ ಜತೆ ಮಾತುಕತೆಗಾಗಿ ಸ್ನೇಹಿತರೊಂದಿಗೆ ಕೆದಿಲದ ಸತ್ತಿಕಲ್‌ನಲ್ಲಿರುವ ಪೆಟ್ರೋಲ್ ಬಂಕ್ ಬಳಿಗೆ ಬಂದಿದ್ದರು. ಮಾತುಕತೆಯ ವೇಳೆ ಸೂರಜ್ ಅವರು ಅಬೂಬಕ್ಕರ್ ರಾಶಿಕ್ ಅವರ ಬಳಿಯಿದ್ದ ಕಾರಿನ ಕೀಲಿಕೈಯನ್ನು ಬಲವಂತವಾಗಿ ಕಸಿದುಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪ್ರತಿರೋಧ ವ್ಯಕ್ತಪಡಿಸಿದ ಅಬೂಬಕ್ಕರ್ ರಾಶಿಕ್ ಅವರಿಗೆ ಸೂರಜ್ ಮತ್ತು ಅವರ ಜತೆಗಿದ್ದವರು ಚೂರಿಯಿಂದ ತಿವಿದು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಘಟನೆ ದಿನ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಮೋನಪ್ಪ ಅವರು, ಅಂದು ರಾತ್ರಿಯೇ ಮೇಲಧಿಕಾರಿಗಳ ಗಮನಕ್ಕೆ ತರದೆ ಕರ್ತವ್ಯ ಲೋಪ ಎಸಗಿರುವ ಆರೋಪದಲ್ಲಿ ಎಸ್ಪಿ ಅಮಾನತುಗೊಳಿಸಿರುವುದಾಗಿ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.