ಕಾಸರಗೋಡು: ಕೇರಳದಿಂದ ಕರ್ನಾಟಕ ತೆರಳುವವರಿಗೆ ರಸ್ತೆ ತಡೆ ಸಹಿತ ನಾಗರಿಕ ಸಂಚಾರ ಅನುಮತಿ ನಿಷೇಧಿಸಿದ ಕರ್ನಾಟಕ ಸರ್ಕಾರದ ಕ್ರಮ ಕೇಂದ್ರದ ಕೋವಿಡ್ ನಿಯಮಾವಳಿಯ ಉಲ್ಲಂಘನೆಯಾಗಿದ್ದು, ಇಂತಹ ಅಮಾನವೀಯ ನಾಗರಿಕ ಹಕ್ಕು ಉಲ್ಲಂಘನೆ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಕರ್ನಾಟಕಕ್ಕೆ ಕೇರಳ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಮಂಜೇಶ್ವರದ ಸಿಪಿಎಂ ಮುಖಂಡ ಕೆ. ಆರ್. ಜಯಾನಂದ ಅವರು ನಾಗರಿಕ ಹಿತಾಸಕ್ತಿಯಿಂದ ಕೇರಳ ಹೈಕೋರ್ಟ್‌ನಲ್ಲಿ ಹೂಡಿದ ದಾವೆ ಪರಿಗಣಿಸಿ ಕೇರಳ ಹೈಕೋರ್ಟ್ ಗಡಿಸಂಚಾರ ತಡೆದಿರುವುದನ್ನು ಪ್ರಶ್ನಿಸಿ ಕೇಂದ್ರ ಸಹಿತ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಇದರಂತೆ ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಕೇಂದ್ರ ಆರೋಗ್ಯ ಸಚಿವಾಲಯದ ಪ್ರತಿನಿಧಿಗಳು ಆಗಸ್ಟ್ 17ರಂದು ಕೋರ್ಟ್‌ಗೆ ಹಾಜರಾಗಿ ಅಧಿಕೃತ ಸಮಜಾಯಿಷಿ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.
ಕೇರಳದಿಂದ ಬರುವವರು ಕರ್ನಾಟಕ ಪ್ರವೇಶಿಸುವುದಿದ್ದರೆ 72 ತಾಸುಗಳ ಒಳಗೆ ಪಡೆದ ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆ ನೆಗೆಟಿವ್ ಪತ್ರ ಕಡ್ಡಾಯ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತದ ಆದೇಶವಿದೆ. ಈ ಹಿನ್ನೆಲೆಯಲ್ಲಿ ಕೆ. ಆರ್. ಜಯಾನಂದ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.