ADVERTISEMENT

ಮಂಗಳೂರು: ಅಂಗನವಾಡಿಗಳಲ್ಲಿ ಚಿಣ್ಣರ ಕಲರವ

ಜಿಲ್ಲೆಯ 2,108 ಕೇಂದ್ರಗಳಲ್ಲಿ ಮಕ್ಕಳ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 16:14 IST
Last Updated 8 ನವೆಂಬರ್ 2021, 16:14 IST
ಚಿಲಿಂಬಿ ಆದರ್ಶನಗರದ ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್‌ನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಚಿಲಿಂಬಿ ಆದರ್ಶನಗರದ ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್‌ನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.   

ಮಂಗಳೂರು: ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳು ಒಂದೂವರೆ ವರ್ಷದ ಬಳಿ ಸೋಮವಾರದಿಂದ ಆರಂಭವಾಗಿದ್ದು, ಎಲ್ಲೆಡೆಯೂ ಪುಟಾಣಿ ಮಕ್ಕಳು ಉತ್ಸಾಹದಿಂದಲೇ ಅಂಗನವಾಡಿಗಳಿಗೆ ಬಂದಿದ್ದರು.

ಜಿಲ್ಲೆಯಲ್ಲಿ ಒಟ್ಟು 2,108 ಅಂಗನವಾಡಿ ಕೇಂದ್ರಗಳಿದ್ದು, ಎಲ್ಲ ಕೇಂದ್ರಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಎರಡೂ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪಾಪಾ ಬೋವಿ ತಿಳಿಸಿದರು.

ಮಕ್ಕಳು ಸುರಕ್ಷಿತ ಅಂತರದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಂಗನವಾಡಿ ಕೇಂದ್ರಗಳು ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿವೆ. ಆಹಾರದ ಸಾಮಗ್ರಿಗಳನ್ನು ಮನೆಗಳಿಗೆ ಕಳುಹಿಸಲಾಗುವುದು. 15ದಿನ ಪರಿಸ್ಥಿತಿಯನ್ನು ನೋಡಿಕೊಂಡು, ಅಂಗನವಾಡಿಯಲ್ಲಿಯೇ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

2,108 ಅಂಗನವಾಡಿ ಕೇಂದ್ರಗಳಲ್ಲಿ 1.80 ಲಕ್ಷ ಮಕ್ಕಳಿದ್ದು, 4,200 ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಕೆಲಸ ಮಾಡುತ್ತಿದ್ದಾರೆ.

ನಗರದ ಕೆಲವೆಡೆ ಅಂಗನವಾಡಿಗಳಲ್ಲಿ ಮಕ್ಕಳ ಸ್ವಾಗತಕ್ಕೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಾಂಧಿನಗರ ಸರ್ಕಾರ ಶಾಲೆಯ ಆವರಣದಲ್ಲಿ ಇರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ತಿಲಕ ಹಚ್ಚಿ, ಹೂ ಹಾಕಿ ಸ್ವಾಗತಿಸಲಾಯಿತು. ಮೊದಲ ದಿನ ಹಾಜರಾತಿ ಕಡಿಮೆ ಇದ್ದರೂ, ಬರುವ ದಿನಗಳಲ್ಲಿ ಸುಧಾರಣೆ ಕಾಣಲಿದೆ ಎನ್ನುವ ಆಶಾಭಾವ ಅಂಗನವಾಡಿ ಕಾರ್ಯಕರ್ತೆಯರದ್ದು.

ಚಿಲಿಂಬಿ: ಚಿಲಿಂಬಿ ಆದರ್ಶನಗರದ ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್‌ನ ಅಂಗನವಾಡಿ ಕೇಂದ್ರವನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮಕ್ಕಳ ಮೇಲೆ ಹೂ ಸಿಂಪಡಿಸುವ ಮೂಲಕ ಭರ್ಜರಿ ಸ್ವಾಗತ ನೀಡಲಾಯಿತು, ಮಕ್ಕಳು ಸಂಭ್ರಮದ ಮೂಲಕ ಅಂಗನವಾಡಿ ಕೇಂದ್ರಕ್ಕೆ ಬಂದರು. ಪ್ರಾರಂಭೋತ್ಸವದಲ್ಲಿ ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ಮಹಿಳಾ ಸದಸ್ಯರು ಮತ್ತು ಮಕ್ಕಳ ತಾಯಂದಿರು ಮಕ್ಕಳಿಗೆ ಆರತಿ ಬೆಳಗಿದರು.

ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಮಕ್ಕಳ ಮತ್ತು ಮಹಿಳೆಯರ ಕಲ್ಯಾಣ ಇಲಾಖೆಯ ಈ ಕಾರ್ಯಕ್ರಮ ಮಕ್ಕಳಲ್ಲಿ ನಲಿ ಕಲಿ ಎಂಬ ಉತ್ಸವದ ರೂಪದಲ್ಲಿ ನಡೆಯುತ್ತಿರುವುದು ಹಾಗೂ ಚಿಲಿಂಬಿ ಆದರ್ಶನಗರ ಅಂಗನವಾಡಿ ವಿನೂತನವಾಗಿ ಕಾರ್ಯಕ್ರಮ ಆಯೋಜಿಸಿ ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ಸಹಕಾರದಿಂದ ಸಂಪೂರ್ಣ ಯಶಸ್ವಿಯಾಗಿ ಜರುಗಿದೆ ಎಂದರು.

ಪಾಲಿಕೆ ಸದಸ್ಯ ಎಂ. ಶಶಿಧರ ಹೆಗ್ಡೆ ಮಾತನಾಡಿ, ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್‌ನ ಅಂಗನವಾಡಿಯಲ್ಲಿ ಮಕ್ಕಳು ಮತ್ತು ಮಹಿಳೆಯರ ಸಬಲೀಕರಣಕ್ಕೆ ಉತ್ತಮ ಕೆಲಸ ಮಾಡುತ್ತಿದ್ದು, ಅಂಗನವಾಡಿಗೆ ಮಕ್ಕಳು ಬಹಳ ಸಂಭ್ರಮದಿಂದ ಬರುತ್ತಿದ್ದಾರೆ. ಪಾಲಕರ ಪ್ರೋತ್ಸಾಹ ಉತ್ತಮವಾಗಿದೆ ಎಂದರು.

ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ಕಿಶೋರ್ ಕೋಟ್ಯಾನ್, ಮಾಜಿ ಅಧ್ಯಕ್ಷ ರಾಜೇಂದ್ರ ಚಿಲಿಂಬಿ, ಮಹಿಳಾ ಉಪಾಧ್ಯಕ್ಷೆ ರಮೀಳಾ, ಸುನಂದಾ ಕೊಟ್ಟಾರ ಕ್ರಾಸ್, ಚರಿತ್ ಪೂಜಾರಿ ಇದ್ದರು. ಅನಿತಾ ನಾಗರಾಜ್ ಸ್ವಾಗತಿಸಿದರು. ವೈಶಾಲಿ ಪ್ರವೀಣ್ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಅಜಿತ ವಸಂತ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.