ADVERTISEMENT

ದುಬೈ‌ನಲ್ಲಿ ಕೋವಿಡ್-19 ಭೀತಿ: ಸತ್ತರೆ ಹೆಣವೂ ಇಲ್ಲ, ಹಣವೂ ಇಲ್ಲ!

ದುಬೈಯಲ್ಲಿ ತೈಲೋದ್ಯಮ ಕುಸಿತ ಬಳಿಕ ಕೊರೊನಾ ಛಾಯೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 14:26 IST
Last Updated 17 ಮಾರ್ಚ್ 2020, 14:26 IST
   

ಮಂಗಳೂರು: ತೈಲೋದ್ಯಮ ಕುಸಿತದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ದುಬೈ ಮತ್ತಿತರ ಗಲ್ಫ್‌ ರಾಷ್ಟ್ರಗಳಲ್ಲಿನ ಭಾರತೀಯರ ಪರಿಸ್ಥಿತಿಯು ಕೊರೊನಾ ಬಳಿಕ ಇನ್ನಷ್ಟು ಆತಂಕಕ್ಕೀಡಾಗಿದೆ. ಅಲ್ಲಿನ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ‘ಸತ್ತರೆ ಹೆಣವೂ ಇಲ್ಲ, ಹಣವೂ ಇಲ್ಲ’ ಎನ್ನುವ ಸ್ಥಿತಿ ಉಂಟಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

‘ತೈಲೋದ್ಯಮದ ಕುಸಿತದ ಬಳಿಕ ಇಲ್ಲಿನ ಒಟ್ಟು ಆರ್ಥಿಕತೆ ಕುಸಿತ ಕಂಡಿದೆ. ಆರ್ಥಿಕ ಚೇತರಿಕೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದ ಸಂದರ್ಭದಲ್ಲೇ ಕೊರೊನಾ ಸೋಂಕು ಕಾಡಿದ್ದು, ಹಿನ್ನಡೆಯಾಗಿದೆ’ ಎಂದು ದುಬೈಯ ಪ್ರತಿಷ್ಠಿತ ಕಂಪನಿಯೊಂದರ ಲೆಕ್ಕಪರಿಶೋಧಕ ವ್ಯವಸ್ಥಾಪಕರಾಗಿರುವ ಜಿಲ್ಲೆಯ ವ್ಯಕ್ತಿಯೊಬ್ಬರು ತಿಳಿಸಿದರು.

‘ನಮ್ಮದು ನಿರ್ಮಾಣ ಹಾಗೂ ಇತರ ಉದ್ಯಮಗಳ ಕಂಪೆನಿ. ಕಳೆದ ಎರಡು ತಿಂಗಳಿನಿಂದ ಬಹುತೇಕ ಪೇಮೆಂಟ್‌ (ಪಾವತಿ) ಗಳು ಸ್ಥಗಿತಗೊಂಡಿದ್ದು, ಕಂಪೆನಿ ಸಂಕಷ್ಟದಲ್ಲಿತ್ತು. ಇನ್ನಷ್ಟು ಕಂಪೆನಿಗಳು ಕಾರ್ಮಿಕರಿಗೆ ಸಂಬಳ ಪಾವತಿಸಿಲ್ಲ. ಕಾರ್ಮಿಕರ ಪೈಕಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದು ಅವರು ತಿಳಿಸಿದರು.

ADVERTISEMENT

ಕೊರೊನಾ ಬಳಿಕ:‘ಕೊರೊನಾದಿಂದಾಗಿ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಮೊದಲಿಗೆ ಆಹಾರ–ವಿಹಾರದ ಕೇಂದ್ರಗಳಾದ ನೈಟ್‌ ಕ್ಲಬ್, ಬಾರ್ ಇತ್ಯಾದಿಗಳನ್ನು ಮುಚ್ಚಿದರು. ಆ ಬಳಿಕ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳನ್ನು ಮುಚ್ಚಿದರು. ಎರಡು ದಿನಗಳ ಹಿಂದೆ ಮಸೀದಿ ಹಾಗೂ ಎಲ್ಲ ಪ್ರಾರ್ಥನಾ ಮಂದಿರಗಳನ್ನು ಮುಚ್ಚಲು ತಿಳಿಸಿದ್ದಾರೆ. ಪರಿಸ್ಥಿತಿ ಮುಂದುವರಿದರೆ, ವ್ಯಾಪಾರ– ಉದ್ಯಮಗಳನ್ನೂ ತಾತ್ಕಾಲಿಕವಾಗಿ ಮುಚ್ಚುವ ಸಾಧ್ಯತೆ ಇದೆ’ ಎಂದು ವಿವರಿಸಿದರು.

‘ಸಾರ್ವಜನಿಕ ಸಭೆ, ಸಮಾರಂಭ, ಆರಾಧನೆಗಳಿಗೆ ತಾತ್ಕಾಲಿಕ ನಿಷೇಧ ಹೇರಿದ್ದಾರೆ. ಪ್ರಾರ್ಥನೆಗಳನ್ನು ಮನೆಯಲ್ಲಿಯೇ ಮಾಡುವಂತೆ ತಿಳಿಸಿದ್ದಾರೆ’ ಎಂದು ಕಾರ್ಮಿಕರೊಬ್ಬರು ತಿಳಿಸಿದರು.

ವೀಸಾ:‘ಈಚೆಗೆ ಉದ್ಯೋಗಗಳೂ ಕಡಿತವಾಗುತ್ತಿದ್ದು, ವೀಸಾ ನೀಡುವುದನ್ನು ಕಡಿಮೆ ಮಾಡಿದ್ದರು. ಆದರೆ, ಕೊರೊನಾ ಸೋಂಕಿನ ಬಳಿಕ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. ಈಗ ಇಲ್ಲಿಂದ ಭಾರತಕ್ಕೆ ವಾಪಾಸ್ ಹೋಗಬಹುದೇ ಹೊರತು, ಇಲ್ಲಿಗೆ ಸಾಮಾನ್ಯರು ಬರುವುದು ಸಾಧ್ಯವೇ ಇಲ್ಲ’ ಎಂದು ಅಲ್ಲಿನ ಸಂಸ್ಥೆಯೊಂದರ ಉದ್ಯೋಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.