ಸುಬ್ರಹ್ಮಣ್ಯ: ಇಲ್ಲಿನ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಶನಿವಾರ ಮುಂಜಾನೆ ಬ್ರಹ್ಮರಥದಲ್ಲಿ ಸಂಭ್ರಮದ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು.
ಬೆಳಿಗ್ಗೆ 6.57ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣ ನಡೆಯಿತು. ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ಉತ್ಸವದ ವಿವಿಧ ವೈದಿಕ ವಿಧಿವಿಧಾನ ನೆರವೇರಿಸಿದರು. ಅಪಾರ ಭಕ್ತರ ಜಯಘೋಷದ ನಡುವೆ ಭಕ್ತರು ದೇವರ ಮಹಾರಥವನ್ನು ಎಳೆದರು.
ವರ್ಷದಲ್ಲಿ ಒಂದು ಬಾರಿ ಮಾತ್ರ ಸೇವೆ ನೆರವೇರಿಸಲು ಅವಕಾಶವಿರುವ ಬ್ರಹ್ಮರಥೋತ್ಸವ ಸೇವೆಯನ್ನು 150 ಭಕ್ತರು ಸಲ್ಲಿಸಿದರು.
ಬ್ರಹ್ಮರಥೋತ್ಸವ ಸೇವಾಕರ್ತರಿ ರಥ ಎಳೆಯಲು ವಿಶೇಷ ಪಾಸ್ ನೀಡಲಾಗಿತ್ತು.
ದೇವಳದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ಬಳಿಕ ರಾಜಬೀದಿಯಲ್ಲಿ ನಾಗಸ್ವರ, ಪಂಚವಾದ್ಯ, ಬ್ಯಾಂಡ್, ಜಾಗಟೆ, ಶಂಖ ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇಳದಲ್ಲಿ ಸಾಲಾಂಕೃತ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥಾರೋಹಣ ನೆರವೇರಿತು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಮಹಾ ಮಂಗಳಾರತಿ ನೆರವೇರಿತು.
ಪೂಜೆಯ ಬಳಿಕ ಸೀತಾರಾಮ ಎಡಪಡಿತ್ತಾಯ ಅವರು ದೇವರಿಗೆ ಸುವರ್ಣವೃಷ್ಟಿ ಮಾಡಿದರು. ಬಳಿಕ ಧನ, ಕನಕ, ಹೂವು, ಫಲವಸ್ತು ಪ್ರಸಾದವನ್ನು ರಥದಿಂದ ಭಕ್ತರತ್ತ ಎಸೆದರು. ಭಕ್ತರು ನಾಣ್ಯ, ಕಾಳು ಮೆಣಸು, ಸಾಸಿವೆಯನ್ನು ರಥಕ್ಕೆ ಸಮರ್ಪಿಸಿದರು. ಬಳಿಕ ಪ್ರಥಮವಾಗಿ ಪಂಚಮಿ ರಥೋತ್ಸವ ನೆರವೇರಿತು. ನಂತರ ಮಹಾರಥೋತ್ಸವ ನಡೆಯಿತು. ದೇವಳದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ದೇವರಿಗೆ ಪೂಜೆ ನಡೆಯಿತು. ದೇವರು ಗರ್ಭಗುಡಿಗೆ ಪ್ರವೇಶಿಸಿದ ನಂತರ ಸೀತಾರಾಮ ಎಡಪಡಿತ್ತಾಯ ಅವರು ಭಕ್ತರಿಗೂ ಮೂಲಪ್ರಸಾದ ವಿತರಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್‌ಪಿ ಯತೀಶ್ ಎನ್., ದೇವಳದ ಆಡಳಿತಾಧಿಕಾರಿ, ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ, ಬ್ರಹ್ಮರಥ ದಾನಿ ಅಜಿತ್ ಶೆಟ್ಟಿ ಕಡಬ, ಪ್ರಮುಖರಾದ ಬಿ.ರಮಾನಾಥ ರೈ, ಮಲ್ಲಿಕಾ ಪಕ್ಕಳ, ಅರವಿಂದ ಅಯ್ಯಪ್ಪ ಸುತಗುಂಡಿ, ಯೇಸುರಾಜ್, ಶ್ರವಣ್, ಮನೀಶ, ಪ್ರಭಾಕರ ಖಜೂರೆ, ಮಂಜುಳಾ, ಮೋಹನ್‌ರಾಂ ಎಸ್.ಸುಳ್ಳಿ, ನಿತ್ಯಾನಂದ ಮುಂಡೋಡಿ, ಕೇನ್ಯ ರವೀಂದ್ರನಾಥ ಶೆಟ್ಟಿ, ಅರುಣ್ ನಾಗೇಗೌಡ, ತಿಮ್ಮಪ್ಪ ನಾಯ್ಕ್, ಕಾರ್ತಿಕ್ ಕೆ., ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ., ಅಚ್ಚುತ ಗೌಡ ಆಲ್ಕಬೆ, ಉದಯಕುಮಾರ್, ಪ್ರಮೋದ್ ಕುಮಾರ್, ಪದ್ಮನಾಭ ಶೆಟ್ಟಿಗಾರ್ ಭಾಗವಹಿಸಿದ್ದರು.
ಈ ಹಿಂದೆ ಬ್ರಹ್ಮರಥ ಎಳೆದ ಬೆತ್ತವನ್ನು ರಥ ಎಳೆದ ಭಕ್ತರಿಗೆ ನೀಡಲಾಗುತ್ತಿತ್ತು. ಇದರಿಂದಾಗಿ ರಥ ಎಳೆದ ತಕ್ಷಣ ಬೆತ್ತಕ್ಕಾಗಿ ನೂಕು ನುಗ್ಗಲು ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಮತ್ತು ದೇವಳದ ಮಹಾಪ್ರಸಾದದಲ್ಲಿ ನೀಡಲು ಬೆತ್ತ ಅಗತ್ಯ ಇರುವುದರಿಂದ ರಥ ಎಳೆಯಲು ಉಪಯೋಗಿಸಿದ ಎಲ್ಲ ಬೆತ್ತವನ್ನು ದೇವಳಕ್ಕೆ ಕೊಂಡೊಯ್ಯಲಾಯಿತು.
ಚಂಪಾಷಷ್ಠಿಯ ದಿನ ನಾಗಾರಾಧನೆಯ ಪ್ರಧಾನ ಕ್ಷೇತ್ರ ಕುಕ್ಕೆಗೆ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಷಣ್ಮುಖ ಪ್ರಸಾದ ಬೋಜನ ಶಾಲೆ ಮತ್ತು ಅಂಗಡಿಗುಡ್ಡೆ ವಿಶೇಷ ಭೋಜನ ಛತ್ರ ಅನ್ನಪೂರ್ಣ, ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ ನಿರಂತರವಾಗಿ ಅನ್ನಪ್ರಸಾದ ವಿತರಿಸಲಾಯಿತು.
ಇಂದು ಅವಭೃತೋತ್ಸವ: ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಭಾನುವಾರ ಬೆಳಿಗ್ಗೆ ಕುಮಾರಾಧಾರಾ ನದಿಯಲ್ಲಿ ದೇವರ ಅವಭೃತೋತ್ಸವ ಮತ್ತು ನೌಕಾವಿಹಾರ ನಡೆಯಲಿದೆ. ಈ ಮೊದಲು ಓಕುಳಿ ಪೂಜೆ, ಓಕುಳಿ ಸಂಪ್ರೋಕ್ಷಣೆಯ ಬಳಿಕ ದೇವರ ಅವಭೃತ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.